ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ವಿಪಕ್ಷಗಳ ಒಗ್ಗಟ್ಟು ಸಾಧ್ಯವಾದೀತೆ? -ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚೆ
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕರ್ನಾಟಕದ ಮಟ್ಟಿಗೆ ಬಿಜೆಪಿಯೇತರ ಪಕ್ಷಗಳು ಒಂದುಗೂಡಲು ಸಾಧ್ಯವಿಲ್ಲ ಎಂಬುದನ್ನು ನಿರೂಪಿಸಿವೆ. ಕೇಂದ್ರದ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೂ ಕರ್ನಾಟಕದ ಮಟ್ಟಿಗೆ ವಿರೋಧ ಪಕ್ಷಗಳು ಒಂದುಗೂಡುವ ಸಾಧ್ಯತೆ ಕಡಿಮೆ.
ರಾಜ್ಯದಲ್ಲಿ ಇನ್ನೊಂದು ವರ್ಷದೊಳಗಾಗಿ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ನಡೆಯಲಿದೆ. ರಾಜಕೀಯ ಚದುರಂಗದಾಟ ಅದಾಗ್ಲೇ ಗರಿಗೆದರಿದೆ. ಅದಕ್ಕೂ ಮುನ್ನ ರಾಜಕೀಯ ಒಳಸುಳಿಗಳನ್ನು ಅರ್ಥೈಸಿಕೊಳ್ಳಲು ರಾಜ್ಯ ವಿಧಾನಸಭೆಯಿಂದ ಕಳೆದ ವಾರ ರಾಜ್ಯಸಭೆಗೆ ನಡೆದ ಚುನಾವಣೆಯ ಫಲಿತಾಂಶ ಒಳ್ಳೆಯ ಅವಕಾಶ ಒದಗಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡೆಸಿದ ತೆರೆಮರೆಯ ಕುಸ್ತಿ ರೋಚಕವಾಗಿತ್ತು. ಮೌನವಾಗಿ ಎಲ್ಲವನ್ನೂ ನಿಭಾಯಿಸಿದ್ದು ಬಿಜೆಪಿ. ಆಡಳಿತಾರೂಢ ಬಿಜೆಪಿಯ ಸೈಲೆಂಟ್ ಮೂವ್ ನೋಡಿದರೆ ಮುಂದಿನ ವಿಧಾನಸಭೆ ಚುನಾವಣೆಗಾಗಿ (Karnataka assembly elections) ರಾಜ್ಯದಲ್ಲಿ ವಿಪಕ್ಷಗಳು ಒಗ್ಗೂಡಬಲ್ಲವಾ? ಅಷ್ಟು ಸಾಮರ್ಥ್ಯ ಅವು ತೋರಬಲ್ಲವಾ? ಅಥವಾ ಅದನ್ನು ಬಿಜೆಪಿ ಆಪೋಷನ ತೆಗೆದುಕೊಂಡು ಬಿಡುತ್ತದಾ? ಈ ಮಧ್ಯೆ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ತಂತ್ರಗಳು ಏನು ಎಂಬುದೂ ಕುತೂಹಲಕಾರಿಯಾಗಿದೆ.
ಹಾಗಂತ ಈ ಒಳತಂತ್ರಗಳನ್ನು ಬರೀ ರಾಜಕೀಯಕ್ಕೆ ಸೀಮಿತಗೊಳಿಸುವಂತಿಲ್ಲ. ಏಕೆಂದರೆ ಪಕ್ಕಾ ರಾಜಕೀಯದ ಆಟ ಆಡುವುದಕ್ಕೆ ಅಗತ್ಯವಾದ ಬೆಳವಣಿಗೆಗಳು, ವಿದ್ಯಮಾನಗಳು, ಹೋರಾಟಗಳು ರಾಜ್ಯದಲ್ಲಿ ಹೇರಳವಾಗಿ ಘಟಿಸುತ್ತಿವೆ. ಅದರಲ್ಲೂ ಚುನಾವಣೆಗೋಸ್ಕರವೆ ಇವೆಲ್ಲಾ ನಡೆಯುತ್ತಿವೆ ಎಂಬಷ್ಟು ಈ ವಿದ್ಯಮಾನಗಳು ಸಕ್ರಿಯವಾಗಿವೆ. ಇವುಗಳನ್ನೆಲ್ಲಾ ಆಡಳಿತಾರೂಢ ಬಿಜೆಪಿ ಸಂಭಾಳಿಸುವುದಾ ಅಥವಾ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಅದರ ಲಾಭ/ ಪ್ರಯೋಜನ ಪಡೆಯಲು ಸಫಲವಾಗುತ್ತಾವಾ ಎಂಬುದೂ ಕುತೂಹಲದ ಸಂಗತಿಯಾಗಿದೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸದ್ಯಕ್ಕೆ ಕಳೆದ ವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕರ್ನಾಟಕದ ಮಟ್ಟಿಗೆ ಬಿಜೆಪಿಯೇತರ ಪಕ್ಷಗಳು ಒಂದುಗೂಡಲು ಸಾಧ್ಯವಿಲ್ಲ ಎಂಬುದನ್ನು ನಿರೂಪಿಸಿವೆ. ಕೇಂದ್ರದ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೂ ಕರ್ನಾಟಕದ ಮಟ್ಟಿಗೆ ವಿರೋಧ ಪಕ್ಷಗಳು ಒಂದುಗೂಡುವ ಸಾಧ್ಯತೆ ಕಡಿಮೆ.
ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಹರಿಪ್ರಸಾದ್ ಇಂದಿನ ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live