ಮೊದಲ 10 ಎಸೆತಗಳಲ್ಲಿ ಯಾವುದೇ ರನ್ ನೀಡದೆ ಚೊಚ್ಚಲ ವಿಕೆಟ್ ಉರುಳಿಸಿದ ಬೆಲ್

Updated on: Jan 09, 2026 | 8:53 PM

RCB's Lauren Bell Dominates: ಮಹಿಳಾ ಪ್ರೀಮಿಯರ್ ಲೀಗ್ 2026ರ ನಾಲ್ಕನೇ ಸೀಸನ್ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಿದೆ. ಆರ್‌ಸಿಬಿಯ ಲಾರೆನ್ ಬೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಮಾರಕ ದಾಳಿ ನಡೆಸಿ ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಅಮೆಲಿಯಾ ಕೆರ್ ವಿಕೆಟ್ ಕಬಳಿಸಿ ಆರ್‌ಸಿಬಿಗೆ ಮೊದಲ ಯಶಸ್ಸು ತಂದರು. ಅವರ ಪರಿಣಾಮಕಾರಿ ಬೌಲಿಂಗ್ ತಂಡಕ್ಕೆ ಬಲ ತುಂಬಿದೆ.

ಮಹಿಳಾ ಪ್ರೀಮಿಯರ್ ಲೀಗ್​ನ 2026 ರ ನಾಲ್ಕನೇ ಸೀಸನ್ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರ್​ಸಿಬಿ ತನ್ನ ಮಾರಕ ದಾಳಿಯ ಮೂಲಕ ಮುಂಬೈ ಬ್ಯಾಟರ್​ಗಳನ್ನು ಕಟ್ಟಿಹಾಕಿದೆ. ಅದರಲ್ಲೂ ಆರ್​​ಸಿಬಿ ಪರ ಚೊಚ್ಚಲ ಡಬ್ಲ್ಯುಪಿಎಲ್ ಪಂದ್ಯವನ್ನಾಡಿದ ಇಂಗ್ಲೆಂಡ್ ವೇಗಿ ಲಾರೆನ್ ಬೆಲ್, ಮುಂಬೈ ಆರಂಭಿಕರು ರನ್​ಗಾಗಿ ಪರದಾಡುವಂತೆ ಮಾಡಿದರು.

ಮುಂಬೈ ಪರ ಅಮೆಲಿಯಾ ಕೆರ್ ಮತ್ತು ಜಿ ಕಮಲಿನಿ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಆರ್​​ಸಿಬಿ ಪರ ಲಾರೆನ್ ಬೆಲ್ ಮೊದಲ ಓವರ್​ ಬೌಲ್ ಮಾಡಿದರು. ಈ ಓವರ್​ನಲ್ಲಿ ಸ್ಟ್ರೈಕ್​ನಲ್ಲಿದ್ದ ಅನುಭವಿ ಅಮೆಲಿಯಾ ಕೆರ್ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆಲ್ ತಮ್ಮ ಚೊಚ್ಚಲ ಪಂದ್ಯದ ಚೊಚ್ಚಲ ಓವರ್​ ಅನ್ನು ಯಾವುದೇ ರನ್ ನೀಡದೆ ಕೊನೆಗೊಳಿಸಿದರು.

ತಮ್ಮ ಖೋಟಾದ ಎರಡನೇ ಓವರ್​ನಲ್ಲೂ ಲಾರೆನ್ ಬೆಲ್ ಕೇವಲ ಒಂದು ರನ್ ನೀಡಿ ಮುಂಬೈ ಬ್ಯಾಟರ್​ಗಳು ಒತ್ತಡಕ್ಕೊಳಗಾಗುವಂತೆ ಮಾಡಿದರು. ಲಾರೆನ್ ಬೆಲ್ ತಮ್ಮ ಮೊದಲ 10 ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ ಎಂಬುದು ಅವರ ಮಾರಕ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು. ಇನ್ನು ತಮ್ಮ ಖೋಟಾದ ಮೂರನೇ ಓವರ್​ನಲ್ಲಿ ದಾಳಿಗಿಳಿದ ಬೆಲ್, ಅಮೆಲಿಯಾ ಕೆರ್ ವಿಕೆಟ್ ಉರುಳಿಸಿ ಆರ್​ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ