ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಕೋಳಿ ಪಂದ್ಯ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಯಾದಗಿರಿ ಸೆ.23 : ಜಿಲ್ಲೆಯ ಹುಣಸಗಿ (Hunasgi) ತಾಲೂಕಿನ ಸಿದ್ದಾಪುರ (Siddapur) ಗ್ರಾಮದ ಬಳಿ ಕೋಳಿ ಪಂದ್ಯ (Cockfight) ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ರಾಜ್ಯದಲ್ಲಿ ಕೋಳಿ ಪಂದ್ಯ ಬ್ಯಾನ್ ಇದ್ದರೂ ಸಿದ್ದಾಪುರ ಗ್ರಾಮದ ಹೊರಭಾಗದಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ನಡೆಸಲಾಗಿದೆ. ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ನಡೆಸುತ್ತಾರೆ. ಹೆಸರಿಗೆ ಕೋಳಿ ಪಂದ್ಯವಾದರೂ, ಇಲ್ಲಿ ಹುಂಜಗಳ ಕಾಳಗ ನಡೆಯುತ್ತದೆ. ಹುಂಜಗಳ ಕಾಲಿ ಖತ್ತಿ ಕಟ್ಟಲಾಗುತ್ತದೆ. ಪಂದ್ಯದಲ್ಲಿ ಯಾವ ಹುಂಜ ಸಾಯುತ್ತೆ ಆ ಕಡೆಯವರು ಸೋತ ಹಾಗೆ. ಹುಂಜಗಳ ಮೇಲೆ ಸಾವಿರಾರು ರೂ. ಹಣ ಬೆಟ್ಟು ಕಟ್ಟಿರುತ್ತಾರೆ. ಈ ಪಂದ್ಯಕ್ಕೆ ಬೇರೆ ಬೇರೆ ಊರುಗಳಿಂದ ಹುಂಜಗಳನ್ನು ತರುತ್ತಾರೆ. ಈ ಪಂದ್ಯದಲ್ಲಿ ನಡೆದ ಗೆದ್ದ ತಂಡದವರಿಗೆ ಬೆಟ್ಟಿನ ಹಣ ಮತ್ತು ಮೃತ ಹುಂಜ ನೀಡುತ್ತಾರೆ. ಆದರೆ ಸಿದ್ದಾಪುರ ಗ್ರಾಮದಲ್ಲಿ ನಡೆದ ಕಾಳಗದಲ್ಲಿ ವಿಜಯಶಾಲಿಯಾದ ತಂಡಕ್ಕೆ, ಸೋತವರು ಹುಂಜ ಮತ್ತು ಬೆಟ್ಟಿನ ಹಣ ನೀಡದಿದ್ದಕ್ಕೆ ಜಗಳ ಆರಂಭವಾಗಿದೆ. ಈ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ಶುರುವಾಗಿದೆ. ಘಟನೆ ಸಂಬಂಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.