ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 8 ವಾಹನಗಳ ಮೇಲೆ ಕಲ್ಲು ಎಸೆದ ಯುವಕ

|

Updated on: Jun 27, 2024 | 11:06 AM

ಬೆಂಗಳೂರಿನ ಬ್ಯಾಟರಾಯನಪುರ ಮುಖ್ಯರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 8 ವಾಹನಗಳ ಗಾಜುಗಳಿಗೆ ಯುವಕ ಕುಡಿದ ಮತ್ತಿನಲ್ಲಿ ಕಲ್ಲು ಎಸೆದಿದ್ದಾನೆ. ಅಲ್ಲದೆ, ಒಂದು ಕಾರನ್ನು ಕದ್ದುಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಸದ್ಯ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು, ಜೂನ್​ 27: ಇತ್ತೀಚಿಗೆ ಬೆಂಗಳೂರಿನಲ್ಲಿ (Bengaluru) ಯುಕರ ಹುಚ್ಚಾಟ ಹೆಚ್ಚಾಗಿದೆ. ಕಾನೂನಿನ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದೀಗ, ಓರ್ವ ಯುವಕ ಕುಡಿದ ಮತ್ತಿನಲ್ಲಿ ಬ್ಯಾಟರಾಯನಪುರ (Byatarayanapura) ಮುಖ್ಯರಸ್ತೆಯಲ್ಲಿರುವ ಎಂಟು ವಾಹನಗಳ ಗ್ಲಾಸ್​ಗಳಿಗೆ ಕಲ್ಲು ಎಸೆದಿದ್ದಾನೆ. ಟಾಟಾ ಏಸ್, ಟಿಟಿ, ಸ್ವಿಫ್ಟ್, ಇನೋವಾ, ಟಾಟಾ ನೆಕ್ಸಾನ್ ಸೇರಿದಂತೆ ಎಂಟು ವಾಹನಗಳಿಗೆ ಹಾನಿಯಾಗಿದೆ. ಇಂದು (ಜೂ.27) ನಸುಕಿನ ಜಾವ 3 ಗಂಟೆಗೆ ಘಟನೆ ನಡೆದಿದೆ.

ಇಷ್ಟಕ್ಕೆ ಸುಮ್ಮನಾಗದ ಯುವಕ ಕಿಟಕಿ ಮುಖಾಂತರ ಸ್ವಿಫ್ಟ್ ಕಾರಿನ ಒಳಗಡೆ ಹೋಗಿ, ಹ್ಯಾಂಡ್​​ ಬ್ರೆಕ್​ ತೆಗೆದು ಕಳ್ಳತನ ಮಾಡಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಆದರೆ, ಕಾರು ಹಿಂದೆ ಚಲಿಸಿದ್ದು, ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿನ ಒಳಗಡೆ ಇದ್ದ ಡ್ಯಾಶ್ ಬೋರ್ಡ್, ಸಿಸ್ಟಂ ಎಲ್ಲ ಒಡೆದಾಕಿದ್ದಾನೆ. ನಂತರ ಕಾರಿನಿಂದ ಕೆಳಗೆ ಇಳಿದು, ಬ್ಯಾನಟ್ ಮೇಲೆ ಕಲ್ಲು ಎತ್ತಾಕಿದ್ದಾನೆ. ನಂತರ ಬ್ಯಾಟರಾಯನಪುರ ಪೊಲೀಸ್ ಠಾಣೆ ಮುಂಭಾಗ ನಿಂತಿದ್ದ ಬೈಕ್ ಅನ್ನು ಕಳ್ಳತನ ಮಾಡಲು ಯತ್ನಿಸಿದ್ದಾನೆ. ಈತನನ್ನು ಕಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

ಕಳೆದ ಕೆಲವು ದಿನಗಳ ಹಿಂದೆ ಮಾರತಹಳ್ಳಿ ಹಾಗೂ ವರ್ತೂರು ಮುಖ್ಯರಸ್ತೆಯಲ್ಲಿ ಪುಂಡರು ಅಟ್ಟಹಾಸ ಯುವಕ-ಯುವತಿ ಇದ್ದ ಬೈಕ್​ನ್ನು ಅಡ್ಡ ಹಾಕಿ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡುತ್ತಿರುವ ದೃಶ್ಯ ಕಾರಿನಲ್ಲಿ ಕುಳಿತಿದ್ದವರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಈ ಘಟನೆ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Jun 27, 2024 10:58 AM