ಸಂಸತ್ ಭವನ ಭದ್ರತಾ ಲೋಪ ಪ್ರಕರಣ: ಆರೋಪಿಗಳು ಒಂದೂವರೆ ವರ್ಷಗಳಿಂದ ಸಂಪರ್ಕದಲ್ಲಿದ್ದರು

ಸಂಸತ್ ಭವನ ಭದ್ರತಾ ಲೋಪ ಪ್ರಕರಣ: ಆರೋಪಿಗಳು ಒಂದೂವರೆ ವರ್ಷಗಳಿಂದ ಸಂಪರ್ಕದಲ್ಲಿದ್ದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 14, 2023 | 11:03 AM

ಗಮನಿಸಬೇಕಾದ ಸಂಗತಿಯೆಂದರೆ ಇವರಿಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿಲ್ಲ. ಆದರೆ ಅವರ ಉದ್ದೇಶ ಏನಾಗಿತ್ತು ಅನ್ನೋದು ಸ್ಪಷ್ಟವಾಗುತ್ತಿಲ್ಲ. ಬಣ್ಣದ ಹೊಗೆಯುಗುಳುವ ಪಟಾಕಿಗಳಿಂದ ಅವರು ಸರ್ಕಾರದ ಗಮನವನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದ್ದರೇ? ಆಥವಾ ಸುಮ್ಮನೆ ಬಿಟ್ಟಿ ಪ್ರಚಾರ ಗಿಟ್ಟಿಸುವ ಉದ್ದೇಶವೇ? ಅದೇನೆ ಇದ್ದರೂ ಇದು ಭಾರಿ ಪ್ರಮಾಣದ ಭದ್ರತಾ ಲೋಪ ಅನ್ನೋದು ಸುಳ್ಳಲ್ಲ.

ಬೆಂಗಳೂರು: ಬುಧವಾರ ಬೆಳಗ್ಗೆ ಲೋಕ ಸಭಾ ಅಧಿವೇಶನ ನಡೆಯುತ್ತಿದ್ದಾಗ ಸಂಸತ್ ಭವನ ಪ್ರವೇಶಿಸಿ ಕಲರ್ ಸ್ಮೋಕ್ ಪಟಾಕಿ (Colour Smoke Cracker) ಸಿಡಿಸಿ ಕೋಲಾಹಲವೆಬ್ಬಿಸಿದ್ದ ನಾಲ್ವರ ಬಗ್ಗೆ ಮಾಹಿತಿ ಲಭ್ಯವಾಗಲಾರಂಭಿಸಿದೆ. ಸಂಸತ್ ಭವನ ನುಗ್ಗಿದವರಲ್ಲಿ ಒಬ್ಬನನು ಮೈಸೂರಿನವ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಅವನ ಹೆಸರು ಡಿ ಮನೋರಂಜನ್ (D Manoranjan) ಮತ್ತು ಅವನ ಕುಟುಂಬ ಮೈಸೂರಲ್ಲಿ ವಾಸವಾಗಿದೆ. ಮನೋರಂಜನ್ ಜತೆ ಇದ್ದವನು ಸಾಗರ್ ಶರ್ಮ (Sagar Sharma) ಮತ್ತು ಭವನದ ಹೊರಗಡೆ ಘೋಷಣೆ ಕೂಗುತ್ತಾ ಬಣ್ಣದ ಪಟಾಕಿ ಸಿಡಿಸಿದವರು ನೀಲಂ (Neelam) ಮತ್ತು ಅಮೋಲ್ ಶಿಂಧೆ (Amol Shindhe). ಇವರೆಲ್ಲ ಭಗತ್ ಸಿಂಗ್ ಫ್ಯಾನ್ ಕ್ಲಬ್ ಸದಸ್ಯರಂತೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ನಾಲ್ವರು ಮೈಸೂರಲ್ಲಿ ಭೇಟಿಯಾಗಿದ್ದರು. ಡಿಸೆಂಬರ್ 10 ರಂದು ಅವರು ತಮ್ಮ ತಮ್ಮ ಊರುಗಳಿಂದ ಹೊರಟು ಗುರುಗ್ರಾಮ್ ತಲುಪಿ ವಿಕ್ಕಿ ಮತ್ತು ವೃಂದಾ ಎನ್ನುವವರ ಮನೆಗಳಲ್ಲಿ ತಂಗಿದ್ದರು. ನಿನ್ನೆ ಸಂಸತ್ ಭವನಕ್ಕೆ ಆಗಮಿಸುವ ಮುನ್ನ ಈ ನಾಲ್ವರು ದೆಹಲಿಯ ಇಂಡಿಯಾ ಗೇಟ್ ಬಳಿ ಜೊತೆಗೂಡಿದ್ದರು ಅನ್ನೋದು ಗೊತ್ತಾಗಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ