ಲೋಕಸಭೆಯಲ್ಲಿ ಭದ್ರತಾ ವೈಫಲ್ಯ: CRPF ಡಿಜಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ ಗೃಹ ಇಲಾಖೆ
ಲೋಕಸಭಾ ಕಲಾಪ ವೇಳೆ ಭಾರಿ ಭದ್ರತಾ ಲೋಪವಾಗ್ತಿದ್ದಂತೆ ಲೋಕಸಭೆಯ ಸಚಿವಾಲಯದ ಕೋರಿಕೆಯ ಮೇರೆಗೆ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಗೆ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ. ಇದಕ್ಕಾಗಿ ಸಿಆರ್‌ಪಿಎಫ್ ಡಿಜಿ ಅನೀಶ್ ದಯಾಳ್ ಸಿಂಗ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ದೆಹಲಿ, ಡಿಸೆಂಬರ್ 13: ಲೋಕಸಭೆಯಲ್ಲಿ ಭದ್ರತಾ ವೈಫಲ್ಯ (Security breach) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇಬ್ಬರು ಯುವಕರು ಲೋಕಸಭೆಗೆ ನುಗ್ಗಿರೋದು ಆತಂಕ ಸೃಷ್ಟಿಸಿತ್ತು. ಸದ್ಯ ಲೋಕಸಭೆಯ ಸಚಿವಾಲಯದ ಕೋರಿಕೆಯ ಮೇರೆಗೆ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಗೆ ಕೇಂದ್ರ ಗೃಹ ಇಲಾಖೆ ಆದೇಶಿಸಿದೆ. ಸಿಆರ್‌ಪಿಎಫ್ ಡಿಜಿ ಅನೀಶ್ ದಯಾಳ್ ಸಿಂಗ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಇಲಾಖೆ, ಲೋಕಸಭೆಯ ಸಚಿವಾಲಯದ ಕೋರಿಕೆಯ ಮೇರೆಗೆ ಸಂಸತ್ತಿನ ಭದ್ರತಾ ಉಲ್ಲಂಘನೆಯ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ. ಸಿಆರ್‌ಪಿಎಫ್‌ನ ಡಿಜಿ ಅನೀಶ್ ದಯಾಳ್ ಸಿಂಗ್ ಅವರ ನೇತೃತ್ವದಲ್ಲಿ ಇತರೆ ಭದ್ರತಾ ಏಜೆನ್ಸಿಗಳ ಸದಸ್ಯರು ಮತ್ತು ತಜ್ಞರನ್ನು ಒಳಗೊಂಡ ತನಿಖಾ ಸಮಿತಿ ರಚಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ಟ್ವೀಟ್
On request from Lok Sabha Secretariat, MHA has ordered an Enquiry of parliament security breach incident. An Enquiry Committee has been set up under Shri Anish Dayal Singh, DG, CRPF, with members from other security agencies and experts. (1/2)@HMOIndia @PIB_India @DDNewslive
— Spokesperson, Ministry of Home Affairs (@PIBHomeAffairs) December 13, 2023
ತನಿಖಾ ಸಮಿತಿಯು ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಕಾರಣವಾದ ಬಗ್ಗೆ ತನಿಖೆ ನಡೆಸಲಿದ್ದು, ಲೋಪಗಳನ್ನು ಕಂಡುಹಿಡಿಯುವ ಮೂಲಕ ಮುಂದಿನ ಕ್ರಮವನ್ನು ಶಿಫಾರಸು ಮಾಡುತ್ತದೆ. ಸಮಿತಿಯು ಸಂಸತ್ತಿನಲ್ಲಿ ಭದ್ರತೆ ಸುಧಾರಿಸುವ ನಿಟ್ಟಿನಲ್ಲಿ ಸಲಹೆಗಳನ್ನು ಒಳಗೊಂಡಂತೆ ಶಿಫಾರಸುಗಳೊಂದಿಗೆ ತನ್ನ ವರದಿಯನ್ನು ಶೀಘ್ರದಲ್ಲಿ ಸಲ್ಲಿಸಲಿದೆ.
ಇದನ್ನೂ ಓದಿ: ಸಂಸತ್ತಿನ ಭದ್ರತಾ ವ್ಯವಸ್ಥೆ ಬದಲು, ಪ್ರವೇಶದ್ವಾರದಲ್ಲಿ ಬಾಡಿ ಸ್ಕ್ಯಾನರ್ ಅಳವಡಿಕೆ
ಲೋಕಸಭೆಯಲ್ಲಿ ಭದ್ರತಾ ಲೋಪ ಪ್ರಕರಣ ರಾಜ್ಯ ಸಭೆಯಲ್ಲೂ ಪ್ರತಿಧ್ವನಿಸಿತು. ಭದ್ರತಾ ಲೋಪಕ್ಕೆ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಷ್ಟೊಂದು ಭದ್ರತೆ ಇದ್ದಾಗಲೂ ಆ ಇಬ್ಬರು ಬಂದಿದ್ದು ಹೇಗೆ ಅಂತ ಪ್ರಶ್ನಿಸಿದ್ದರು.
ಕಲಾಪದಲ್ಲಿ ಇಬ್ಬರು ವ್ಯಕ್ತಿಗಳು ಕಲರ್ ಸ್ಪ್ರೇ ಹೊಡೆದು ಸಂಸದರನ್ನ ದಂಗು ಬಡಿಸಿದರೆ ಸಂಸತ್ ಹೊರಗೆ ಮತ್ತಿಬ್ಬರು ಇನ್ನೊಂದು ರೀತಿಯ ಭಯ ಸೃಷ್ಟಿ ಮಾಡಿದ್ದರು. ಹಳದಿ ಬಣ್ಣದ ಕಲರ್ಸ್ಪ್ರೇ ಹಿಡಿದು ಬಂದಿದ್ದ ಹರಿಯಾಣ ಮೂಲದ ನೀಲಮ್ ಹಾಗೂ ಮಹಾರಾಷ್ಟ್ರ ಮೂಲದ ಅಮೋಲ್ ಎನ್ನುವವರು ಪ್ರತಿಭಟನೆ ಮಾಡಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಸಿದ್ದರು.
ಇದನ್ನೂ ಓದಿ: ಸಂಸತ್ ಭದ್ರತೆಯಲ್ಲಿ ಲೋಪ: ನಾವು ಯಾವುದೇ ಉಗ್ರ ಸಂಘಟನೆಯವರಲ್ಲ ಎಂದ ನೀಲಂ
ಸಂಸತ್ ಭವನದ ಬಳಿ ಎಫ್ಎಸ್ಎಲ್ ತಜ್ಞರಿಂದ ಪರಿಶೀಲನೆ ನಡೆಸಿದ್ದು, ತಜ್ಞರು ಸ್ಯಾಂಪಲ್ ಕಲೆಕ್ಟ್ ಮಾಡಿದ್ದಾರೆ. ಇನ್ನು ಸಂಸತ್ ಭವನಕ್ಕೆ ಆಗಮಿಸಿದ ದೆಹಲಿ ಪೊಲೀಸ್ ಕಮಿಷನರ್ ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಲೋಕಸಭಾ ಕಲಾಪ ವೇಳೆ ಭಾರಿ ಭದ್ರತಾ ಲೋಪ ಹಿನ್ನೆಲೆ ಸಂಜೆ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಮಾಡಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.