ಅಂಕಾರಾ: ಉತ್ತರ ಟರ್ಕಿಯ (Turkey) ಕಲ್ಲಿದ್ದಲು ಗಣಿಯೊಂದರಲ್ಲಿ ಶನಿವಾರ ಮಿಥೇನ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ 40 ಜನರು ಸಾವನ್ನಪ್ಪಿದ್ದಾರೆ. ಹಾಗೇ, ಇನ್ನೂ 10ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿದ್ದಾರೆ. ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಶುಕ್ರವಾರ ಸಂಜೆಯ ಸಮಯದಲ್ಲಿ ಟರ್ಕಿಯಲ್ಲಿ ನಡೆದ ಮಾರಣಾಂತಿಕ ಕೈಗಾರಿಕಾ ಅಪಘಾತದಿಂದ ಈಗಾಗಲೇ 11 ಜನರನ್ನು ರಕ್ಷಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಟರ್ಕಿಯ ಕಪ್ಪು ಸಮುದ್ರದ ಕರಾವಳಿಯಲ್ಲಿರುವ ಸಣ್ಣ ಕಲ್ಲಿದ್ದಲು ಗಣಿಗಾರಿಕೆ ಪಟ್ಟಣವಾದ ಅಮಾಸ್ರಾಗೆ ತುರ್ತಾಗಿ ಪ್ರಯಾಣ ಬೆಳೆಸಿದ ಸಚಿವ ಸುಲೇಮಾನ್ ಸೊಯ್ಲು ಸುದ್ದಿಗಾರರೊಂದಿಗೆ ಮಾತನಾಡಿ, “ಇದು ಬಹಳ ಆಘಾತಕಾರಿ ಘಟನೆ. ನಾವು ನಿಜವಾಗಿಯೂ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕೆ ಕಾರ್ಮಿಕ ಬಲಿ : ಕರ್ತವ್ಯ ಲೋಪ ಎಸಗಿದ ಇನ್ಸ್ಪೆಕ್ಟರ್ ಅಮಾನತು
ಆ ಗಣಿಯಲ್ಲಿ 110 ಜನರು ಕೆಲಸ ಮಾಡುತ್ತಿದ್ದರು. ಸ್ಫೋಟ ಉಂಟಾದಾಗ ಅವರಲ್ಲಿ ಕೆಲವರು ತಾವಾಗಿಯೇ ಹೊರಬಂದರು ಮತ್ತು ಅವರಲ್ಲಿ ಕೆಲವರನ್ನು ರಕ್ಷಿಸಲಾಯಿತು. ಇನ್ನೂ ಹಲವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 300 ಮತ್ತು 350 ಮೀಟರ್ ನಡುವಿನ 2 ಪ್ರದೇಶಗಳಲ್ಲಿ ಸುಮಾರು 50 ಗಣಿಗಾರರು ಸಿಕ್ಕಿಬಿದ್ದಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
Turkey mine blast death toll rises to at least 40, reports AFP News Agency citing Turkey’s interior minister https://t.co/oRrijiUdy5
— ANI (@ANI) October 15, 2022
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ತಮ್ಮ ಎಲ್ಲಾ ಇತರ ಕೆಲಸಗಳನ್ನು ರದ್ದುಗೊಳಿಸಿ ಇಂದು ಗಣಿ ಸ್ಫೋಟದ ಸ್ಥಳಕ್ಕೆ ವಿಮಾನದ ಮೂಲಕ ತಲುಪಲಿದ್ದಾರೆ. ಇನ್ನಷ್ಟು ಜನರು ಸಾಯುವಂತಾಗಬಾರದು, ನಮ್ಮ ಗಣಿಗಾರರು ಜೀವಂತವಾಗಿ ಸಿಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಎರ್ಡೊಗನ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ಸೂರ್ಯಾಸ್ತದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದ್ದು, ಕತ್ತಲೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
Published On - 8:34 am, Sat, 15 October 22