ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ಡರ್ ಗೆ ಅಮೆರಿಕದ ವಿಮಾನ ನಿಲ್ದಾಣದವೊಂದರಲ್ಲಿ ವ್ಯಕ್ತಿಯಿಂದ ಅವಹೇಳನ!
ವಿದೇಶವೊಂದರಲ್ಲಿ ಪಾಕಿಸ್ತಾನದ ಸಚಿವರಿಗೆ ಅವಮಾನವಾಗುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಇದಕ್ಕೆ ಮೊದಲು, ಪಾಕಿಸ್ತಾನದ ವಾರ್ತಾ ಸಚಿವೆ ಮರಿಯುಂ ಔರಂಗಜೇಬ್ ಅವರನ್ನು ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಶಂಕಿತ ಬೆಂಬಲಿಗರ ಗುಂಪೊಂದು ಲಂಡನ್ ನಗರದ ಕಾಫೀ ಶಾಪೊಂದರಲ್ಲಿ ಹಿಯಾಳಿಸಿತ್ತು.
ನವದೆಹಲಿ: ಪಾಕಿಸ್ತಾನದ (Pakistan) ಗಣ್ಯರನ್ನು ಅಂತರರಾಷ್ಟೀಯ ಮಟ್ಟದಲ್ಲಿ ಹೀಯಾಳಿಸುವುದು ಮತ್ತು ಗೇಲಿ ಮಾಡುವುದು ಮುಂದುವರಿದಿದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಆ ದೇಶದ ಹಣಕಾಸು ಸಚಿವ ಇಶಾಕ್ ಡರ್ (Ishaq Dar) ಅವರನ್ನು ಅಮೆರಿಕದ ವಿಮಾನ ನಿಲ್ದಾಣವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಜೋರು ಧ್ವನಿಯಲ್ಲಿ ನಿಂದಿಸಿ ಹೀಯಾಳಿಸಿದ್ದು. ಇಶಾಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ (World Bank) ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರದಂದು ಅಮೆರಿಕ ತಲುಪಿದಾಗ ಸದರಿ ಘಟನೆ ನಡೆಯಿತು. ಇಶಾಕ್, ಅಮೆರಿಕದ ವಿಮಾನ ನಿಲ್ದಾಣದಲ್ಲಿ ಇಳಿದಾಗ ವ್ಯಕ್ತಿಯೊಬ್ಬ, ‘ನೀನೊಬ್ಬ ಸುಳ್ಳುಗಾರ, ಕಳ್ಳ ನೀನು,’ ಅಂತ ಜೋರು ಧ್ವನಿಯಲ್ಲಿ ಕೂಗಲಾರಂಭಿಸಿದ. ಪಾಕ್ ಸಚಿವ ಸಾರ್ವಜನಿಕವಾಗಿ ನಿಂದನೆಗೊಳಗಾದ ಘಟನೆ ಕೆಮೆರಾವೊಂದರಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
An unidentified person insulted Ishaq dar at US airport.#PowerBreakDown pic.twitter.com/KVn2VOJxFQ
— Political.reviews (@Politicalrevie8) October 13, 2022
ವಿಡಿಯೋದಲ್ಲಿ ಇಶಾಕ್ ಡರ್ ವಿಮಾನ ನಿಲ್ದಾಣದಿಂದ ಹೊರಬರುವಾಗ ಕೆಮೆರಾದಲ್ಲಿ ಸೆರೆಯಾಗಿರದ ಆ ವ್ಯಕ್ತಿ ಅವರ ಜೊತೆ ಮಾತಿನ ಜಗಳ ಶುರುಮಾಡುತ್ತಾನೆ. ಪಾಕಿಸ್ತಾನದ ಅಧಿಕಾರಿಗಳು ಸಚಿವರನ್ನು ಮರೆಮಾಡುತ್ತಾ ಅಲ್ಲಿಂದ ಕರೆದೊಯ್ಯುತ್ತಾರಾದರೂ ಆ ವ್ಯಕ್ತಿ ಹಿಂದಿನಿಂದ ಕೂಗುವುದನ್ನು ಮುಂದುವರಿಸುತ್ತಾನೆ, ‘ನೀನೊಬ್ಬ ಸುಳ್ಳುಗಾರ, ಕಳ್ಳ ನೀನು.’
ಅವನ ಕೂಗಾಟದಿಂದ ವ್ಯಗ್ರಗೊಳ್ಳುವ ಒಬ್ಬ ಅಧಿಕಾರಿ, ವ್ಯಕ್ತಿಯ ಸಮೀಪಕ್ಕೆ ಹೋಗಿ ಕೆಟ್ಟ ಶಬ್ದಗಳಲ್ಲಿ ಬಯ್ಯಲು ಶುರುಮಾಡುತ್ತಾರೆ. ‘ನಾನ್ಯಾರು ಅಂತ ನಿಂಗೊತ್ತಿಲ್ಲ. ಕತ್ತೆಯಂತೆ ಅರಚಬೇಡ ಮಾ… ’ ಅಂತ ಕೋಪದಲ್ಲಿ ಹೇಳುತ್ತಾರೆ.
ಈ ಅಧಿಕಾರಿಯ ಹೆಸರು ಮಣಿ ಬಟ್ ಅಂತ ಗೊತ್ತಾಗಿದ್ದು ಪಿಎಮ್ ಎಲ್-ಎನ್ ವರ್ಜೀನಿಯಾ ಚಾಪ್ಟರ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಎಂದು ಪಾಕಿಸ್ತಾನದ ಡಾನ್ ದಿನಪತ್ರಿಕೆಯಲ್ಲಿ ವರದಿಯಾಗಿದೆ.
ಸದರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಜನರ ಗಮನ ಸೆಳೆಯುತ್ತಿದೆ ಮತ್ತು ಪಾಕಿಸ್ತಾನದ ಹದಗೆಡುತ್ತಿರುವ ಆರ್ಥಿಕತೆಯ ಜೊತೆ ರಾಜತಾಂತ್ರಿಕವಾಗಿಯೂ ಅದು ಎದುರಿಸುತ್ತಿರುವ ಅವಹೇಳನಗಳ ಮೇಲೆ ಮೀಮ್ ಗಳನ್ನು ಮಾಡಲಾಗುತ್ತಿದೆ.
ಅವಮಾನಕ್ಕೊಳಗಾಗುತ್ತಿರುವುದು ಮೊದಲ ಸಲವೇನಲ್ಲ!
ವಿದೇಶವೊಂದರಲ್ಲಿ ಪಾಕಿಸ್ತಾನದ ಸಚಿವರಿಗೆ ಅವಮಾನವಾಗುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಇದಕ್ಕೆ ಮೊದಲು, ಪಾಕಿಸ್ತಾನದ ವಾರ್ತಾ ಸಚಿವೆ ಮರಿಯುಂ ಔರಂಗಜೇಬ್ ಅವರನ್ನು ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಶಂಕಿತ ಬೆಂಬಲಿಗರ ಗುಂಪೊಂದು ಲಂಡನ್ ನಗರದ ಕಾಫೀ ಶಾಪೊಂದರಲ್ಲಿ ಹಿಯಾಳಿಸಿತ್ತು.
ಪ್ರತಿಭಟನಾಕಾರರು ಮರಿಯುಂ ಅವರನ್ನು ಸುತ್ತುವರಿದು, ‘ಚೋರ್ನಿ, ಚೋರ್ನಿ’ ಅಂತ ಅವಹೇಳನ ಮಾಡಿದ್ದರು. ಅವರ ಕೂಗಾಟದಿಂದ ಸಚಿವೆ ಕೋಪಗೊಂಡಿರಲಿಲ್ಲ ಮತ್ತು ತಮ್ಮ ತಾಳ್ಮೆ ಸಮಚಿತ್ತವನ್ನೂ ಕಳೆದುಕೊಳ್ಳಲಿಲ್ಲ. ಖುದ್ದು ಅವರೇ ಆ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿ ನೆಟ್ಟಿಗರಿಂದ ಪ್ರಶಂಸೆಗೊಳಗಾದರು.
I told Maryam Aurangzeb the affection we have for our honourable leader Kaptan Imran Khan. pic.twitter.com/wI2IvEljzv
— Vaqas Chohan (@VaqasPK) September 25, 2022
ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಭಾಜ್ ಶರೀಫ್ ಅವರು ಮೊದಲ ಬಾರಿಗೆ ಸೌದಿ ಅರೇಬಿಯಾಗೆ ಭೇಟಿ ನೀಡಿದಾಗಲೂ ಅಹಿತಕರ ಸಂದರ್ಭವನ್ನು ಎದುರಿಸಬೇಕಾಗಿತ್ತು. ಮದೀನಾದಲ್ಲಿರುವ ಮಸ್ಜಿದ್-ಎ-ನವಾಬಿಗೆ ಅವರು ಭೇಟಿ ನೀಡಿದ್ದಾಗ ಜನರ ಗುಂಪೊಂದು ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಆ ಘಟನೆಯ ಬಳಿಕ ಹಲವಾರು ಜನರನ್ನು ಬಂಧಿಸಲಾಗಿತ್ತು.