Terror Attack: ರಷ್ಯಾದ ಸೇನಾ ತರಬೇತಿ ಮೈದಾನದಲ್ಲಿ ಉಗ್ರ ದಾಳಿ, ಕನಿಷ್ಠ 11 ಸಾವು
ಪಶ್ಚಿಮ ರಷ್ಯಾದ ಬೆಲ್ಗೊರೊಡ್ ಪ್ರದೇಶದ ಸೇನಾ ತರಬೇತಿ ಮೈದಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಜನ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ. ಇದೊಂದು ಭಯೋತ್ಪಾದಕ ದಾಳಿ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಹೇಳಿದೆ.
ಮಾಸ್ಕೊ: ಪಶ್ಚಿಮ ರಷ್ಯಾದ (Russia) ಬೆಲ್ಗೊರೊಡ್ ಪ್ರದೇಶದ ಸೇನಾ ತರಬೇತಿ ಮೈದಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಜನ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ. ತರಬೇತಿ ವೇಳೆ ಬಂದೂಕುಧಾರಿಗಳಿಬ್ಬರು ದಾಳಿ ನಡೆಸಿದ್ದಾರೆ. ಇದೊಂದು ಭಯೋತ್ಪಾದಕ ದಾಳಿ (Terror Attack) ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಹೇಳಿಕೆ ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಉತ್ಸಾಹ ತೋರಿದ ಸಾರ್ವಜನಿಕರಿಗೆ ಗುಂಡಿನ ದಾಳಿ ತರಬೇತಿ ನೀಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ.
‘ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಉತ್ಸಾಹ ತೋರಿದವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ, ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರು ಸೋವಿಯತ್ ರಿಪಬ್ಲಿಕ್ನವರು. ಅವರಿಬ್ಬರನ್ನೂ ಹತ್ಯೆ ಮಾಡಲಾಗಿದೆ’ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: Russia and Ukraine War: ಉಕ್ರೇನ್‌ಗೆ 5,975 ಕೋಟಿ ಮಿಲಿಟರಿ ನೆರವು ಘೋಷಿಸಿದ ಅಮೆರಿಕ
ಈ ದಾಳಿಯು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಾದ ಮತ್ತೊಂದು ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ಉಕ್ರೇನ್ ವಿರುದ್ಧದ ಕಾರ್ಯಾಚರಣೆಯಲ್ಲಿ ರಷ್ಯಾ ಹಲವು ಬಾರಿ ಹಿನ್ನಡೆ ಕಂಡಿದೆ. ಇದೀಗ ಸಾರ್ವಜನಿಕರಿಗೆ ಸೇನಾ ತರಬೇತಿ ನೀಡುತ್ತಿರುವಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ಪುಟಿನ್ ಅವರಿಗೆ ಮುಜುಗರ ಉಂಟುಮಾಡಲಿದೆ ಎಂದು ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆ.
ಜನರನ್ನು ಯುದ್ಧಕ್ಕೆ ಸಜ್ಜುಗೊಳಿಸುವಂತೆ ಪುಟಿನ್ ಮಾಡಿದ್ದ ಆದೇಶಕ್ಕೆ ಸಾವಿರಾರು ಜನರಿಂದ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆಯ ಸಾವಿರಾರು ಸಂಖ್ಯೆಯಲ್ಲಿ ರಷ್ಯಾ ಜನರನ್ನು ಉಕ್ರೇನ್ ವಿರುದ್ಧದ ಹೋರಾಟಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಯುದ್ಧದಲ್ಲಿ ಭಾಗವಹಿಸಲು ಸ್ವಯಂಸ್ವೇವಕರಾಗಿ ಬಂದವರ ಮೇಲೆ ದಾಳಿ ನಡೆದಿದೆ ಎಂದು ‘ಆರ್ಐಎ’ ಸುದ್ದಿಸಂಸ್ಥೆಯ ವರದಿ ಉಲ್ಲೇಖಿಸಿದೆ.
ಬೆಲ್ಗೊರೊಡ್ ನಗರ ಪ್ರದೇಶದ ವಿದ್ಯುತ್ ತಂತಿಗಳು, ಇಂಧನ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರಗಳ ಮೇಲೆ ಉಕ್ರೇನ್ ದಾಳಿ ಮಾಡುತ್ತಿದೆ ಎಂದು ಅಧಿಕಾರಿಗಳು ಇತ್ತೀಚೆಗೆ ಆರೋಪಿಸಿದ್ದರು.
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಸದಾ ಉಕ್ರೇನ್ ಪರ ನಿಂತಿರುವ ಅಮೆರಿಕ ಕೆಲವು ದಿನಗಳ ಹಿಂದಷ್ಟೇ ಹೆಚ್ಚುವರಿ ಸೇನಾ ಸಹಾಯವನ್ನು ಘೋಷಿಸಿತ್ತು. ಉಕ್ರೇನ್‌ಗೆ ಹೆಚ್ಚುವರಿ 725 ದಶಲಕ್ಷ ಅಮೆರಿಕನ್ ಡಾಲರ್ ಹೊಸ ನೆರವನ್ನು ನೀಡುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದರು.