ಯುಎಸ್ನ ದಕ್ಷಿಣ ಭಾಗದಲ್ಲಿ ನಡೆದಿದ್ದ ಆಸ್ಟ್ರೋವರ್ಲ್ಡ್ ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಸುಮಾರು 8 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಹೂಸ್ಟನ್ ಅಗ್ನಿಶಾಮಕ ಮುಖ್ಯಸ್ಥ ಸ್ಯಾಮ್ಯುಯೆಲ್ ಪೆನಾ ಮಾಹಿತಿ ನೀಡಿದ್ದು, ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯ ಮುಂಭಾಗದಲ್ಲಿ ಒಮ್ಮೆಲೇ ಗಲಾಟೆ ಶುರುವಾಗಿದ್ದೇ ಈ ಅವಘಡಕ್ಕೆ ಕಾರಣ ಎಂದಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಂತೆ ವೇದಿಕೆ ಎದುರಲ್ಲೇ ನಿಂತಿದ್ದ ಒಂದಷ್ಟು ಮಂದಿ ನೂಕುನುಗ್ಗಲು ಶುರು ಮಾಡಿದರು. ಜನಸಂದಣಿ ಹೆಚ್ಚಾದಂತೆ ಹಲವರು ಕೆಳಗೆ ಬಿದ್ದರು. ಹೀಗೆ ಸತ್ತವರಲ್ಲಿ ಮೂರ್ನಾಲ್ಕು ಮಂದಿಗೆ ಹೃದಯಸ್ತಂಭನ ಉಂಟಾಗಿದೆ ಎಂದು ಹೇಳಿದ್ದಾರೆ.
ವೇದಿಕೆ ಎದುರು ಜನಸಂದಣಿ ಹೆಚ್ಚಾಗುತ್ತಿದ್ದಂತೆ ಕೂಗಾಟ, ಕಿರುಚಾಟವೂ ಹೆಚ್ಚಿತು. ಇದರಿಂದ ಅನೇಕರು ಗಾಬರಿಗೊಂಡರು. ಹಲವರು ಗಾಯಗೊಂಡಿದ್ದಾರೆ. ಒಟ್ಟಾರೆ 17 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅದರಲ್ಲೂ 11 ಮಂದಿಗೆ ಹೃದಯಸ್ತಂಭನ ಉಂಟಾಗಿತ್ತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ ಮತ್ತು ಗಾಯಗೊಂಡವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ. ಸಾವಿಗೆ ನಿಜವಾದ ಕಾರಣ ಸಂಪೂರ್ಣ ವೈದ್ಯಕೀಯ ಪರೀಕ್ಷೆಯ ನಂತರವಷ್ಟೇ ಗೊತ್ತಾಗಲಿದೆ.
ಇದನ್ನೂ ಓದಿ: ಛತ್ತೀಸ್ಗಢ್ನಲ್ಲಿ ಎನ್ಕೌಂಟರ್; ಪ್ರಮುಖ ಮಾವೋವಾದಿ ನಾಯಕನೊಬ್ಬನ ಹತ್ಯೆ