ನ್ಯೂಯಾರ್ಕ್: ಬಂದೂಕುಧಾರಿ ದರೋಡೆಕೋರರು ಚರ್ಚ್ ಒಳಗೆ ನುಗ್ಗಿ ಬಿಷಪ್ ಮುಖಕ್ಕೆ ಗನ್ ಇಟ್ಟು ದರೋಡೆ ನಡೆಸಿದರು

| Updated By: Rakesh Nayak Manchi

Updated on: Jul 26, 2022 | 8:24 AM

ಚರ್ಚ್​ನ ಲೈವ್ ಸ್ಟ್ರೀಮ್ ನಲ್ಲಿ ಪಾಸ್ಟರ್ ಮುಖಕ್ಕೆ ಗನ್ ಹಿಡಿದಿರುವುದು ಸೆರೆಯಾಗಿದೆ. ‘ದ್ವಾರದ ಬಳಿಯಿದ್ದ ನನ್ನ ಡೀಕನ್ ಗಳ ಮುಖಕ್ಕೂ ಗನ್ ಹಿಡಿದು ಹೆದರಿಸಲಾಗಿದೆ,’ ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

ನ್ಯೂಯಾರ್ಕ್: ಬಂದೂಕುಧಾರಿ ದರೋಡೆಕೋರರು ಚರ್ಚ್ ಒಳಗೆ ನುಗ್ಗಿ ಬಿಷಪ್ ಮುಖಕ್ಕೆ ಗನ್ ಇಟ್ಟು ದರೋಡೆ ನಡೆಸಿದರು
ಬಿಷಪ್ ಲಮೋರ್ ವ್ಹೈಟ್​ಹೆಡ್​
Follow us on

ನ್ಯೂಯಾರ್ಕ್: ಅಮೆರಿಕಾದ ದರೋಡೆಕೋರರು (robbery) ಚರ್ಚ್ನಲ್ಲಿ ನಿಂತುಕೊಂಡು ದೇವರ ವಾಕ್ಯವನ್ನು ಹಂಚುತ್ತಿರುವ ಪಾಸ್ಟರ್, ಬಿಷಪ್ಗಳನ್ನೂ ಬಿಡುತ್ತಿಲ್ಲ ಮಾರಾಯ್ರೇ. ಸಿಬಿಎಸ್ ನ್ಯೂಯಾರ್ಕ್ ವರದಿಯೊಂದರ ಪ್ರಕಾರ ಬ್ರೂಕ್ಲಿನ್ ನಲ್ಲಿ (Brooklyn) ರವಿವಾರ ಚರ್ಚೊಂದರಲ್ಲಿ ದೈವ ಸಂದೇಶ (sermon) ನೀಡುತ್ತಿದ್ದ ಬಿಷಪ್ ಒಬ್ಬರನ್ನು ಕಳ್ಳರು ಪಿಸ್ತೂಲು ತೋರಿಸಿ ದೋಚಿದ್ದಾರೆ.

ಬಿಷಪ್ ಲಮೋರ್ ವ್ಹೈಟ್ ಹೆಡ್ ಹೇಳುವ ಪ್ರಕಾರ ಅವರು ದೈವ ಸಂದೇಶ ನೀಡಲು ಅರಂಭಿಸಿದ 5-10 ನಿಮಿಷಗಳ ಬಳಿಕ 3-4 ಬಂದೂಕುಧಾರಿ ಕಳ್ಳರು ಚರ್ಚ್ ಗೇಟನ್ನು ಮುರಿದು ಒಳನುಗ್ಗಿದರು. ಕಳ್ಳರ ಟಾರ್ಗೆಟ್ ಬಿಷಪ್ ಆಗಿದ್ದರೆಂದು ಪೊಲೀಸರು ಹೇಳಿದ್ದಾರೆ. ದೈವ ಸಂದೇಶದ ನೇರ ಪ್ರಸಾರ ನಡೆಯುತಿತ್ತು.

‘ಸರಿ, ಸರಿ, ಸರಿ ನಿಮ್ಮ ಟಾರ್ಗೆಟ್ ನಾನಂತ ಚೆನ್ನಾಗಿ ಗೊತ್ತಿದೆ. ನಾನು ನಿಮಗೇನೂ ಹಾನಿಯುಂಟು ಮಾಡುವುದಿಲ್ಲ. ನೇರವಾಗಿ ನನ್ನಲ್ಲಿಗೆ ಬನ್ನಿ. ಚರ್ಚ್ ನ ಸದಸ್ಯರಿಗೆ ತೊಂದರೆ ನೀಡಬೇಡಿ. ಅವರ ಪೈಕಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ,’ ಎಂದು ಲೀಡರ್ಸ್ ಅಫ್ ಟುಮಾರೋ ಇಂಟರ್ ನ್ಯಾಶನಲ್ ಮಿನಸ್ಟ್ರೀಸ್ ನ ವ್ಹೈಟ್ ಹೆಡ್ ಹೇಳಿದ್ದಾರೆ.

‘ನಾನು ಪುಲ್ಪಿಟ್ ಮೇಲೆ ಒರಗಿದಾಗ ಕಳ್ಳರ ಪೈಕಿ ಒಬ್ಬ ನನ್ನ ಹೆಂಡತಿ ಕುಳಿತಲ್ಲಿಗೆ ಹೋಗಿ ನನ್ನ 8-ತಿಂಗಳು ಪ್ರಾಯದ ಮಗುವಿನ ಮುಖಕ್ಕೆ ಬಂದೂಕು ಗುರಿಯಾಗಿಸಿ ಆಕೆ ಧರಿಸಿದ್ದ ಆಭರಣಗಳನ್ನು ಕಸಿದುಕೊಂಡ. ನನ್ನ ಬಿಷಪ್ ಉಂಗುರ, ನನ್ನ ಮದುವೆ ಉಂಗುರ ಮತ್ತು ನನ್ನ ಬಿಷಪ್ ಸರವನ್ನು ಎಳೆದುಕೊಂಡ, ನಾನು ಧರಿಸಿದ್ದ ವಸ್ತ್ರದೊಳಗೆ ಸರಗಳಿದ್ದವು. ಮತ್ತೇನಾದರೂ ಇದೆಯಾ ಅಂತ ಅವನು ಕತ್ತಿನ ಮೇಲಿನ ಬಟ್ಟೆ ಸರಿಸಿ ನೋಡಿದ, ಅದರರ್ಥ ಕಳ್ಳರಿಗೆ ನಾನು ಧರಿಸುವ ಸರಗಳ ಬಗ್ಗೆ ಗೊತ್ತಿತ್ತು,’ ಎಂದು ಬಿಷಪ್ ಹೇಳಿದ್ದಾರೆ.

ಚರ್ಚ್​ನ ಲೈವ್ ಸ್ಟ್ರೀಮ್ ನಲ್ಲಿ ಪಾಸ್ಟರ್ ಮುಖಕ್ಕೆ ಗನ್ ಹಿಡಿದಿರುವುದು ಸೆರೆಯಾಗಿದೆ.
‘ದ್ವಾರದ ಬಳಿಯಿದ್ದ ನನ್ನ ಡೀಕನ್ ಗಳ ಮುಖಕ್ಕೂ ಗನ್ ಹಿಡಿದು ಹೆದರಿಸಲಾಗಿದೆ,’ ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

‘ನಿಮಗೆ ಕೆಮೆರಾನಲ್ಲಿ ಕಾಣಿಸದ ಅಂಶವೇನೆಂದರೆ ಆ ಸಮಯದಲ್ಲಿ ಮಕ್ಕಳು, ವಯಸ್ಕರು ಮತ್ತು ಮಹಿಳೆಯರು ಸೇರಿದಂತೆ ಸುಮಾರು 100 ಸಭಿಕರು ಚರ್ಚ್ ನಲ್ಲಿದ್ದರು. ಅವರೆಲ್ಲ ನಿಶ್ವಬ್ದವಾಗಿ ನೆಲದ ಮೇಲೆ ಮಲಗಿದರು. ನನ್ನ ಚರ್ಚ್ ಆಘಾತಕ್ಕೊಳಗಾಗಿದೆ, ಮಹಿಳೆಯರು, ಮಕ್ಕಳು ಈಗಲೂ ಭೀತಿಯಿಂದ ಅಳುತ್ತಿದ್ದಾರೆ,’ ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಳ್ಳರು ಬಿಳಿ ಬಣ್ಣದ ಮರ್ಸಿಡಿಸ್ ಕಾರಲ್ಲಿ ಪರಾರಿಯಾದರು. ಪೊಲೀಸರ ಹತ್ತಿರ ಲೈಸೆನ್ಸ್ ಪ್ಲೇಟ್ ಗಳಿವೆ ಮತ್ತು ಕಳ್ಳರು ಹೊರಗಡೆ ಹೋಗಿ ಬಟ್ಟೆ ಬದಲಾಯಿಸಿದ್ದನ್ನು ಜನ ನೋಡಿದ್ದಾರೆ, ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

‘ಈ ಜನ ತಮ್ಮ ಮನ ಪರಿವರ್ತನೆ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ನಾನು ಅವರನ್ನು ಕ್ಷಮಿಸಿದ್ದೇನೆ ಮತ್ತು ಅವರಿಗಾಗಿ ಪ್ರಾರ್ಥಸುತ್ತಿದ್ದೇನೆ. ನಿಮ್ಮಲ್ಲಿರುವ ಕೆಟ್ಟ ಮನಸ್ಥಿತಿಯನ್ನು ದೇವರು ಬದಲಾಯಿಸುತ್ತಾನೆ ಎಂಬ ನಂಬಿಕೆ ನನಗಿದೆ,’ ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

ಮೇನಲ್ಲಿ ನಡೆದ ಸಬ್ ವೇ ಶೂಟಿಂಗ್ ಒಂದರಲ್ಲ್ಲಿ ಭಾಗಿಯಾಗಿದ್ದನೆಂದು ಶಂಕಿಸಲಾದ ಡ್ಯಾನಿಯೇಲ್ ಎನ್ರಿಕೇಜ್ ನ ಮನಪರಿವರ್ತನೆ ಮಾಡಿ ಅವನನ್ನು ಸಭ್ಯ ನಾಗರಿಕನ ಮಾರ್ಪಡಿಸದ ಬಳಿಕ ಸಿಕ್ಕ ಪ್ರಚಾರದ ಹಿನ್ನೆಲೆಯಲ್ಲಿ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

‘ನಾನವನನ್ನು ಬದಲಾಯಿಸಿದ್ದು ನಿಜ ಅದರೆ ಮಾಧ್ಯಮಗಳಲ್ಲಿ ನನ್ನನ್ನು ಶೋಕಿಲಾಲ ಬಿಷಪ್ ಅಂತ ಚಿತ್ರಿಸಲಾಯಿತು. ನನ್ನ ರೋಲ್ಸ್ ರಾಯ್ಸ್ ಕಾರಿನ ಬಗ್ಗೆ ಎಲ್ಲೆಡೆ ಮಾತಾಡಲಾಗುತ್ತಿದೆ. ಈ ಎಪಿಸೋಡ್ ನಲ್ಲಿ ಕಾರು ನಿರ್ಣಾಯಕ ಪಾತ್ರವಹಿಸಿದೆ. ಪಾಸ್ಟರ್ ಗಳಿಗೂ ಗನ್ ಗಳನ್ನು ಹೊಂದುವ ಅನುಮತಿ ನೀಡಬೇಕೆಂದು ನಾನು ಭಾವಿಸುತ್ತೇನೆ,’ ಎಂದು ವ್ಹೈಟ್ ಹೆಡ್ ಹೇಳಿದ್ದಾರೆ.

ನ್ಯೂ ಯಾರ್ಕ್ ಪೋಲಿಸ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಮೇಯರ್ ಎರಿಕ್ ಆಡಮ್ಸ್ ಮತ್ತು ಟಾಪ್ ಪೊಲೀಸ್ ಅಧಿಕಾರಿಗಳು ತಮಗೆ ಬೆಂಬಲ ಸೂಚಿಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಹೇಳಿರುವರೆಂದು ವ್ಹೈಟ್ ಹೆಡ್ ಹೇಳಿದ್ದಾರೆ.

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮೇಯರ್ ಅವರ ಬಾತ್ಮೀದಾರರೊಬ್ಬರು, ‘ಬಂದೂಕುಧಾರಿ ಕಳ್ಳರಿಂದ ನಗರದ ಯಾವುದೇ ನಾಗರಿಕ ತೊಂದರೆಗೊಳಗಾಗಬಾರದು. ಹಾಗಿರುವಾಗ ದೇವರ ಮನೆಯಲ್ಲಿ ನುಗ್ಗಿ ದೇವರ ಸೇವಕರನ್ನು ಹೆದರಿಸಿ ದೋಚುವುದು ಕ್ಷಮಿಸಲಾಗದಂಥ ಅಪರಾಧ. ನ್ಯೂ ಯಾರ್ಕ್ ಪೊಲೀಸ್ ಪ್ರಕರಣದ ತನಿಖೆ ನಡೆಸುತ್ತಿದೆ, ಕ್ರಿಮಿನಲ್ ಗಳನ್ನು ನ್ಯಾಯಾಲದ ಮುಂದೆ ಹಾಜರುಪಡಿಸುವರರೆಗೆ ನಾವು ಅವಿರತವಾಗಿ ಶ್ರಮಿಸಲಿದ್ದೇವೆ,’ ಎಂದು ಹೇಳಿದ್ದಾರೆ.

ಈ ದರೋಡೆಯ ಸಂದರ್ಭದಲ್ಲಿ ಯಾರಿಗೂ ಗಾಯವಾಗಿಲ್ಲ.

Published On - 8:01 am, Tue, 26 July 22