ಯರೋಪಿನ ಉತ್ತರ ಮೆಸಿಡೋನಿಯಾದವನಾಗಿರುವ (North Macedonia) ಇವಾನ್ (Ivan) ಅದೃಷ್ಟವನ್ನು ಹೇಗೆ ಬಣ್ಣಿಸಬೇಕು ಅಂತ ಗೊತ್ತಾಗುತ್ತಿಲ್ಲ ಮಾರಾಯ್ರೇ. ಮನುಷ್ಯನಿಗೆ ಬದುಕುವ ಯೋಗ ಇದ್ದರೆ ಅವನು ಎಂಥ ಸಂಕಷ್ಟ ಸ್ಥಿತಿಯಿಂದಲೂ ಪಾರಾಗುತ್ತಾನೆ ಅನ್ನೋದಿಕ್ಕೆ ಇವಾನ್ ಸಾಕ್ಷಿ. ಅಸಲಿಗೆ ಏನಾಗಿದೆ ಗೊತ್ತಾ? ಅವನು 18 ಗಂಟೆಗಳ ಕಾಲ ಸಮುದ್ರದಲ್ಲಿ ಚಿಕ್ಕ ಮಕ್ಕಳು ಆಡುವ ಪುಟ್ಬಾಲ್ ವೊಂದರ (football) ಸಹಾಯದಿಂದ ಸಾವಿನೊಂದಿಗೆ ಸೆಣಸಿ ತನ್ನ ಸಾಹಸದ ಕತೆಯನ್ನು ನಮ್ಮೆಲ್ಲರಿಗೆ ಹೇಳಲು ಬದುಕುಳಿದಿದ್ದಾನೆ. ವಾರಾಂತ್ಯದ ರಜೆ ಕಳೆಯಲು ತನ್ನ ಸಂಗಾತಿಯೊಂದಿಗೆ ಗ್ರೀಸ್ ನ ಕಸ್ಸಾಂದ್ರದಲ್ಲಿರುವ ಮೈಟಿ ಬೀಚ್ ಗೆ ಹೋದಾಗ ಅವರಿಬ್ಬರು ಭಾರಿ ಗಾತ್ರದ ಅಲೆಗಗಳಲ್ಲಿ ಕೊಚ್ಚಿ ಹೋಗಿದ್ದಾರೆ. ಅವನ ಸಂಗಾತಿ ಬಹಳ ದೂರ ಹೋಗದ ಕಾರಣ ಅವಳು ಸುರಕ್ಷಿತವಾಗಿ ದಡ ಸೇರಿದ್ದಾಳೆ.
ಆದರೆ ಫಾಕ್ಸ್ 5 ನ್ಯೂ ಯಾರ್ಕ್ ವರದಿಯ ಪ್ರಕಾರ ಇವಾನ್ ದಡದಿಂದ ಸುಮಾರು 130 ಕಿಮೀ ದೂರ ಕೊಚ್ಚಿಕೊಂಡು ಹೋಗಿದ್ದ. 10 ದಿನಗಳ ಹಿಂದೆ, ಬೀಚ್ ನಲ್ಲಿ ಆಡುತ್ತಿದ್ದ ಇಬ್ಬರು ಬಾಲಕರು ಕಳೆದುಕೊಂಡ ಫುಟ್ಬಾಲ್ ಅವನ ಪಾಲಿಗೆ ರಕ್ಷಕನಾಗಿ ಪರಿಣಮಿಸಿದೆ. 18 ಗಂಟೆಗಳ ಕಾಲ ಅವನು ಆ ಫುಟ್ಬಾಲ್ ಗೆ ಜೋತುಬಿದ್ದು ತನ್ನ ಜೀವ ಉಳಿಸಿಕೊಂಡಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.
ಮೂವತ್ತು-ವರ್ಷ ವಯಸ್ಸಿನ ಇವಾನ್ ಸಮುದ್ರದಲ್ಲಿ ನಾಪತ್ತೆಯಾದ ಬಳಿಕ ಅವನ ಗೆಳತಿ ಮತ್ತು ಬೇರೆ ಸಂಗಡಿಗರು ಗ್ರೀಕ್ ಕೋಸ್ಟ್ ಗಾರ್ಡ್ಗಳಿಗೆ ವಿಷಯ ತಿಳಿಸಿದ್ದಾರೆ. ಅದರೆ ಅವರಿಗೆ ಇವಾನನ್ನು ಹುಡುಕುವುದು ಸಾಧ್ಯವಾಗಿಲ್ಲ.
ತಾನು ಬದುಕುಳಿಯುವುದು ಸಾಧ್ಯವಿಲ್ಲ ಅಂದುಕೊಂಡಿದ್ದ ಇವಾನ್ ಗೆ ಪವಾಡಸದೃಶ ರೀತಿಯಲ್ಲಿ ಫುಟ್ಬಾಲ್ ತನ್ನೆಡೆ ತೇಲುತ್ತಾ ಬರುತ್ತಿರುವುದು ಕಾಣಿಸಿದೆ.
ಗಮನಿಸಬೇಕಿರುವ ಮತ್ತೊಂದು ಸಂಗತಿಯೇನೆಂದರೆ, ಆ ಚೆಂಡಿನಲ್ಲಿ ಗಾಳಿ ಕಡಿಮೆಯಾಗತೊಡಗಿತ್ತು. ಆದರೆ, ಇವಾನ್ ತನ್ನ ಬಾಯಿಂದ ಅದರಲ್ಲಿ ಗಾಳಿ ಊದುತ್ತಾ 18 ಗಂಟೆಗಳ ಅದಕ್ಕೆ ಜೋತುಬಿದ್ದಿದ್ದ. ಗಾಳಿ ಕಡಿಮೆಯಾದಂತೆಲ್ಲ ಅವನು ಬಾಯಿಂದ ಊದಿ ಅದರಲ್ಲಿ ಗಾಳಿ ತುಂಬಿಸಿದ್ದಾನೆ. ಅಲೆಗಳು ಅವನನ್ನು ದೂರಕ್ಕೆ ನೂಕಿದರೂ ಅವನು ಚೆಂಡಿನ ನೆರವು ಪಡೆದು ಮುಳುಗುವುದರಿಂದ ಬಚಾವಾಗಿದ್ದಾನೆ ಎಂದು ಫಾಕ್ಸ್ 5 ವರದಿ ಮಾಡಿದೆ.
18 ಗಂಟೆಗಳ ಬಳಿಕ ಇವಾನನ್ನು ಗ್ರೀಕ್ ಕೋಸ್ಟ್ ಗಾರ್ಡ್ ಏರ್ಲಿಫ್ಟ್ ಮಾಡಿದೆ. ನಂತರ ಗ್ರೀಕ್ ಮಾಧ್ಯಮದೊಂದಿಗೆ ಮಾತಾಡಿದ ಇವಾನ್ ಸಮುದ್ರದಲ್ಲಿ ತೇಲಿಕೊಂಡಿರುವುದು ಫುಟ್ಬಾಲ್ ನಿಂದ ಸಾಧ್ಯವಾಯಿತು ಎಂದು ಹೇಳಿದ.
ಫಾಕ್ಸ್ 5 ನ್ಯೂ ಯಾರ್ಕ್ ವರದಿಯ ಪ್ರಕಾರ ಅವನ ಸ್ನೇಹಿತ ಮಾರ್ಟಿನ್ ಜೊವಾನೊವ್ಸ್ಕಿ ಇದುವರೆಗೆ ಪತ್ತೆಯಾಗಿಲ್ಲ.
ಇವಾನ್ ತನ್ನೊಂದಿಗೆ ಹೊತ್ತು ತಂದ ಫುಟ್ಬಾಲ್ ತನ್ನದು ಅಂತ ಎರಡು ಮಕ್ಕಳ ತಾಯಿಯೊಬ್ಬಳು ಅದನ್ನು ಪಡೆಯಲು ಕೋಸ್ಟ್ ಗಾರ್ಡ್ ಕಚೇರಿಗೆ ಬಂದಿದ್ದಳಂತೆ. ಪ್ರಾಯಶಃ ಆಕೆಯ ಮಕ್ಕಳು ಕಳೆದುಕೊಂಡ ಚೆಂಡೇ ಇವಾನ್ ಗೆ ಸಮುದ್ರದಲ್ಲಿ ಸಿಕ್ಕಿರಬಹುದು.
ಘಟನೆ ನಡೆದಾಗ ರಜೆ ಕಳೆಯಲು ಬಂದಿದ್ದ ಇವಾನ್ ಅನ್ನು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಒದಗಿಸಿ ನಂತರ ಬಿಡುಗಡೆ ಮಾಡಲಾಯಿತು ಅಂತ ಫಾಕ್ಸ್ 5 ವರದಿ ಮಾಡಿದೆ.