ರಷ್ಯಾದ ಪಶ್ಚಿಮ ರಿಯಾಜಾನ್ ಪ್ರಾಂತ್ಯದಲ್ಲಿರುವ ಒಂದು ಗನ್ಪೌಡರ್ (ರಾಕೆಟ್, ಗನ್, ಗ್ರೆನೇಡ್ ಇತ್ಯಾದಿ ಸಾಧನಗಳಲ್ಲಿ ಬಳಸುವ ರಾಸಾಯನಿಕ ಸ್ಫೋಟಕ ಪುಡಿ) ಕಾರ್ಖಾನೆಯಲ್ಲಿ ಸ್ಫೋಟವುಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಟಿಎಎಸ್ಎಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಾರ್ಖಾನೆಯಲ್ಲಿ ಕೆಲವು ಯಂತ್ರಗಳಲ್ಲಿ ತಾಂತ್ರಿಕ ದೋಷವುಂಟಾಗಿತ್ತು. ಆದರೆ ಅದನ್ನು ಅಲ್ಲಿನ ಸಿಬ್ಬಂದಿ ಗಮನಿಸಲಿಲ್ಲ. ಈ ತಾಂತ್ರಿಕ ದೋಷವೇ ದೊಡ್ಡಮಟ್ಟದ ದುರಂತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿದ್ದಾಗಿ ನ್ಯೂಸ್ ಏಜೆನ್ಸಿ ಹೇಳಿದೆ.
ಮಸ್ಕೋದಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 270 ಕಿಮೀ (167 ಮೈಲುಗಳು) ದೂರದಲ್ಲಿರುವ ಗನ್ಪೌಡರ್ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದಾಗಿ ರಷ್ಯಾದ ತುರ್ತುಸಂದರ್ಭ ಸಚಿವಾಲಯವೂ ಮಾಹಿತಿ ನೀಡಿದೆ. ದುರಂತ ನಡೆದ ತಕ್ಷಣ 170 ತುರ್ತುಪರಿಸ್ಥಿತಿ ಕಾರ್ಯಕರ್ತರು, 50 ರಕ್ಷಣಾ ವಾಹನಗಳು, ಅಗ್ನಿಶಾಮಕ ದಳಗಳ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಮೊದಲು ಏಳು ಜನರ ಶವ ಪತ್ತೆಯಾಗಿ, 9 ಮಂದಿ ನಾಪತ್ತೆಯಾಗಿದ್ದರು. ಆದರೆ ಒಂದು ತಾಸುಗಳ ಬಳಿಕ ಅಷ್ಟೂ ಮಂದಿಯ ಮೃತದೇಹ ಸಿಕ್ಕಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ರಕ್ಷಣಾ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಅಲ್ಲಿನ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: Suhana Khan: ಶಾರುಖ್ ಪುತ್ರಿ ಸುಹಾನಾರಂತೆಯೇ ಇರುವ ಈ ಯುವತಿ ಯಾರು?; ನೆಟ್ಟಿಗರ ಕುತೂಹಲಕ್ಕೆ ಇಲ್ಲಿದೆ ಉತ್ತರ