ರಷ್ಯಾ (Russia) ಸೇನೆ ಉಕ್ರೇನ್ ಮೇಲೆ ದಾಳಿ ಶುರುಮಾಡಿದ್ದು 6 ತಿಂಗಳ ಹಿಂದೆಯಾದರೂ ಯುದ್ಧ ನಿಲ್ಲುವ ಲಕ್ಷಣಗಳಂತೂ ಕಾಣುತ್ತಿಲ್ಲ. ಯುದ್ಧದಲ್ಲಿ ಸಾವಿರಾರು ಜನ ಹತರಾಗಿದ್ದಾರೆ, ಹಲವಾರು ನಗರಗಳು ಧ್ವಂಸಗೊಂಡಿವೆ, ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅದಕ್ಕೂ ಹೆಚ್ಚಿನ ಸಂಖ್ಯೆಯ ಉಕ್ರೇನಿಯನ್ನರು ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಇತ್ತೀಚಿಗೆ, ರಷ್ಯನ್ ಸೈನಿಕನೊಬ್ಬ ಬಹಳ ಹತ್ತಿರದಿಂದ ಉಕ್ರೇನಿನ ಮಿಸೈಲ್ ಲಾಂಚರನ್ನು ನಾಶಮಾಡುವ ಭಯಾನಕ ವಿಡಿಯೋವೊಂದು ಲಭ್ಯವಾಗಿದೆ. ಮಿಸೈಲ್ ಲಾಂಚರ್ (missile launcher) ಗತಿ ಮತ್ತು ಗುಂಡು ಹಾರಿಸಿದವನ ಗತಿ ಏನಾಗುತ್ತದೆ ಅಂತ ನೀವೇ ನೋಡಿ ಮಾರಾಯ್ರೇ.
ರೆಡ್ಡಿಟ್ ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋನಲ್ಲಿ ಕಣ್ಣಿಗೆ ಮರೆಮಾಚುವ ದಿರಿಸಿನಲ್ಲಿರುವ ಸೈನಿಕನೊಬ್ಬ ನೆಲದ ಮೇಲೆ ಒರಗಿ ತನ್ನ ಪಿಕೆಎಮ್ ಮಶೀನ್ ಗನ್ ನಿಂದ ಗುಂಡು ಹಾರಿಸುವುದನ್ನು ನೀವು ನೋಡಬಹುದು. ಒಂದರೆಕ್ಷಣದ ನಂತರ ಒಂದು ಭಾರಿ ಸದ್ದಿನೊಂದಿಗೆ ಲಾಂಚರ್ ಸ್ಫೋಟಗೊಳ್ಳುತ್ತದೆ.
ಕ್ಲಿಪ್ಪನ್ನು ನೀವು ಸರಿಯಾಗಿ ಗಮನಿಸಿ. ರಷ್ಯಾದ ಸೈನಿಕ ಎಸ್-300 ಌಂಟಿ-ಏರ್ ಲಾಂಚರ್ ಗೆ ಬಹಳ ಹತ್ತಿರದಲ್ಲಿ ಹೊಂಚು ಹಾಕುತ್ತಾ ಕುಳಿತಿದ್ದು ಮತ್ತು ಲಾಂಚರ್ ನೆಡೆ ತನ್ನ ಮಷೀನ್ ಗುರಿಮಾಡುತ್ತಿರುವುದು ಕಾಣಿಸುತ್ತದೆ. ತನ್ನನ್ನು ತಾನು ಸುಧಾರಿಸಿಕೊಳ್ಳಲು ಒಂದೆರಡು ಕ್ಷಣಗಳಷ್ಟು ಸಮಯ ತೆಗೆದುಕೊಂಡು ಪಿಕೆಎಮ್ ಮಶೀನ್ ಗನ್ ಟ್ರಿಗ್ಗರ್ ಅದುಮುತ್ತಾನೆ. ಮರುಕ್ಷಣವೇ ಸದೃಢ ಏರ್ ಲಾಂಚರ್ ಭಯಾನಕವಾಗಿ ಸ್ಫೋಟಗೊಳ್ಳುತ್ತದೆ ಮತ್ತು ಅದರ ಭಾರಿ ಜ್ವಾಲೆಯು ಗುಂಡು ಹಾರಿಸಿದವ ಮತ್ತು ಅವನ ಹಿಂದೆ ನಿಂತು ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡುತ್ತಿರುವವನತ್ತ ನುಗ್ಗುತ್ತದೆ!
ಈ ಸ್ಫೋಟದ ನಂತರ ಗುಂಡು ಹಾರಿಸಿ ರಷ್ಯನ್ ಸೈನಿಕನ ಸ್ಥಿತಿ ಏನಾಯಿತು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮಾರಾಯ್ರೇ.
ರಾಯಿಟರ್ಸ್ ವರದಿಯೊಂದರ ಪ್ರಕಾರ ರಷ್ಯಾದ ಸೇನೆಗಳು ಕಪ್ಪು ಸುಮುದ್ರ ಮತ್ತು ಅಜೋವ್ ಸಮುದ್ರದ ಕರಾವಳಿ ಭಾಗಗಳು ಸೇರಿದಂತೆ ಲುಹಾನ್ಸ್ಕ್ ಮತ್ತು ಡೊನೆಸ್ಕ್ ಮತ್ತು ಡಾನ್ಬಾಸ್ ಪ್ರಾಂತ್ಯದ ಪೂರ್ವ ಭಾಗಗಳನ್ನು ಅತಿಕ್ರಮಿಸಿಕೊಂಡಿವೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವಿರಾರು ನಾಗರಿಕರು ಕೂಡ ಬಲಿಯಾಗಿದ್ದಾರೆ, ಉಕ್ರೇನಿನ 4ಕೋಟಿಗೂ ಅಧಿಕ ಜನಸಂಖ್ಯೆಯ ಶೇಕಡ 30ರಷ್ಟು ಜನ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿದ್ದಾರೆ. ಈ ಯುದ್ಧವು ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಆಹಾರ ಧಾನ್ಯಗಳ ಕೊರತೆ ಎದುರಾಗಿದೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ.