ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್​​ನಿಂದ ತಪ್ಪಿಸಿಕೊಂಡು ಉಕ್ರೇನ್​ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು

ಅಫ್ಘಾನಿಸ್ತಾನವನ್ನು ಬಿಡುವಾಗ ನಾನು ವೀಸಾ ಪಡೆಯಲು ತುಂಬ ಕಷ್ಟಪಟ್ಟೆ. ನಂತರ ಉಕ್ರೇನ್​ಗೆ ಬಂದು ಸೇರಿಕೊಂಡು, ಇಲ್ಲಿನ ಒಡೆಸ್ಸಾದಲ್ಲಿ ಮನೆ ಮಾಡಿಕೊಂಡಿದ್ದೆ ಎಂದು ರೆಹಮಾನಿ ತಿಳಿಸಿದ್ದಾರೆ.

ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್​​ನಿಂದ ತಪ್ಪಿಸಿಕೊಂಡು ಉಕ್ರೇನ್​ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು
ಅಫ್ಘಾನಿಸ್ತಾನದಿಂದ ಕೆಲವೇ ತಿಂಗಳುಗಳ ಹಿಂದೆ ಉಕ್ರೇನ್​ಗೆ ಬಂದಿದ್ದ ವ್ಯಕ್ತಿ
Edited By:

Updated on: Feb 28, 2022 | 3:46 PM

ಕಳೆದ ವರ್ಷ ಜುಲೈನಲ್ಲಿ ಅಫ್ಘಾನಿಸ್ತಾನದಲ್ಲಿ (Afghanistan) ಯುದ್ಧ ಸನ್ನಿವೇಶ. ಹಂತಹಂತವಾಗಿ ತಾಲಿಬಾನಿಗಳ ತೆಕ್ಕೆಗೆ ಬೀಳುತ್ತಿದ್ದ ಅಫ್ಘಾನ್​​ನಿಂದ ತಮ್ಮ ಜೀವ-ಜೀವನ ರಕ್ಷಣೆಗಾಗಿ ಬೇರೆ ದೇಶಗಳಿಗೆ ಪಲಾಯನ ಮಾಡಿದವರು ಅದೆಷ್ಟೋ ಸಾವಿರ ಮಂದಿ. ಅದೇ ಪರಿಸ್ಥಿತಿಯೀಗ ರಷ್ಯಾ (Russia) ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​​ಗೆ (Ukraine Crisis) ಎದುರಾಗಿದೆ. ಇಲ್ಲಿರುವ ಬೇರೆ ದೇಶಗಳ ಪ್ರಜೆಗಳು, ಉಕ್ರೇನ್​ ನಾಗರಿಕರ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ಈ ಮಧ್ಯೆ ಅಜ್ಮಲ್ ರಹಮಾನಿ ಎಂಬುವರು ತಮ್ಮ ದುರದೃಷ್ಟದ ಕತೆಯನ್ನು ಹೇಳಿಕೊಂಡಿದ್ದಾರೆ.

ಅಜ್ಮಲ್​ ರಹಮಾನಿ ತಮ್ಮ ಕುಟುಂಬದ ಸಮೇತ ಅಫ್ಘಾನಿಸ್ತಾನದಿಂದ ಉಕ್ರೇನ್​​ಗೆ ಬಂದಿದ್ದರು. ಅಲ್ಲಿ ಯುದ್ಧ, ಸಂಘರ್ಷ, ರಕ್ತಪಾತ ಶುರುವಾಗುತ್ತಿದ್ದಂತೆ ಉಕ್ರೇನ್​ಗೆ ಬಂದು ನೆಲೆಕಂಡಿದ್ದರು. ಆದರೆ ಅವರೆಲ್ಲ ಇಲ್ಲಿಂದಲೂ ಪಲಾಯನ ಮಾಡುವ ಸಂದರ್ಭ ಎದುರಾಗಿದೆ. ರಷ್ಯಾ ಆಕ್ರಮಣಕ್ಕೆ ತತ್ತರಿಸುತ್ತಿರುವ ಉಕ್ರೇನ್​​ನಿಂದ ಪೋಲ್ಯಾಂಡ್​ಗೆ ತಲುಪಿದ ಬಳಿಕ ಮಾಧ್ಯಮವೊಂದರೊಂದಿಗೆ ಮಾತನಾಡಿದ ಅವರು, ಒಂದು ಯುದ್ಧದಿಂದ ಪಾರಾಗಿ ಉಕ್ರೇನ್​​ಗೆ ಓಡಿಬಂದೆ. ಇಲ್ಲಿ ಇನ್ನೊಂದು ಯುದ್ಧ ಶುರುವಾಯ್ತು. ಈಗ ಇಲ್ಲಿಂದ ಹೊರಡಬೇಕಾಗಿದೆ. ನನ್ನ ದುರದೃಷ್ಟ ಎಂದು ಹೇಳಿದ್ದಾರೆ. ಅವರೊಂದಿಗೆ ಅವರ ಪತ್ನಿ, ಮಕ್ಕಳೂ ಇದ್ದರು. ಪತ್ನಿ ಮಿನಾ, ಏಳುವರ್ಷದ ಮಗಳು ಮಾರ್ವಾ ಮತ್ತು 11ವರ್ಷದ ಪುತ್ರ ಒಮರ್​ ಜತೆ ಉಕ್ರೇನ್​ನಿಂದ 30 ಕಿಮೀ ದೂರ ನಡೆದುಕೊಂಡು ಬಂದು ಪೋಲ್ಯಾಂಡ್ ಗಡಿ ತಲುಪಿಕೊಂಡಿದ್ದಾರೆ.  ಪೋಲ್ಯಾಂಡ್​​ನ ಮೇಡಿಕಾ ಎಂಬಲ್ಲಿ, ಉಳಿದ ನಿರಾಶ್ರಿತರ ಜತೆ ಬಸ್​ಗಾಗಿ ಕಾಯುವಾಗ ಮಾಧ್ಯಮಗಳಿಗೆ ಬೈಟ್​ ಕೊಟ್ಟಿದ್ದಾರೆ.

ರೆಹಮಾನಿಯವರಿಗೆ ಈಗ 40ವರ್ಷ. ಅವರು ಅಫ್ಘಾನಿಸ್ತಾನದ ಕಾಬೂಲ್​ ಏರ್​ಪೋರ್ಟ್​​ನಲ್ಲಿ ನ್ಯಾಟೋ ಪರವಾಗಿ 18ವರ್ಷ ಕೆಲಸ ಮಾಡಿದ್ದಾರೆ.  ಯುಎಸ್​ ತನ್ನ ಸೈನ್ಯವನ್ನು ಹಿಂಪಡೆಯುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ, ಅವರಿಗೆ ಬೆದರಿಕೆ ಕರೆಗಳು ಬರಲು ಶುರುವಾಗಿತ್ತು. ಹೀಗಾಗಿ ಹೆದರಿದ್ದ ರೆಹಮಾನಿ ಅಫ್ಘಾನಿಸ್ತಾನ ತೊರೆದಿದ್ದರು. ಅದಕ್ಕೂ ಮೊದಲು ನನ್ನ ಜೀವನ ತುಂಬ ಚೆನ್ನಾಗಿತ್ತು. ನನ್ನದೇ ಆದ ಮನೆಯಿತ್ತು, ಕಾರು ಇತ್ತು, ಒಳ್ಳೆಯ ವೇತನವೂ ಇತ್ತು.  ಆದರೆ ನಂತರ ನನ್ನ ಮನೆ, ಕಾರು ಎಲ್ಲವನ್ನೂ ಮಾರಿದೆ. ಎಲ್ಲವನ್ನೂ ಕಳೆದುಕೊಂಡೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನವನ್ನು ಬಿಡುವಾಗ ನಾನು ವೀಸಾ ಪಡೆಯಲು ತುಂಬ ಕಷ್ಟಪಟ್ಟೆ. ನಂತರ ಉಕ್ರೇನ್​ಗೆ ಬಂದು ಸೇರಿಕೊಂಡು, ಇಲ್ಲಿನ ಒಡೆಸ್ಸಾದಲ್ಲಿ ಮನೆ ಮಾಡಿಕೊಂಡಿದ್ದೆ.  ಸದ್ಯ ಅಲ್ಲಿಂದ ಪಾರಾಗಿ ಪೋಲ್ಯಾಂಡ್​ಗೆ ಬಂದಿದ್ದೇನೆ. ಇಲ್ಲಿರುವವರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಆದರೆ ಮುಂದೇನು ಎಂಬ ಬಗ್ಗೆ ಆತಂಕ ಸಹಜವಾಗಿ ಆಗಿದೆ ಎಂದೂ ರೆಹಮಾನಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Russia- Ukraine War: ರಷ್ಯನ್ನರು ರಸ್ತೆಯಲ್ಲಿ ಎಸೆದಿದ್ದ ನೆಲಬಾಂಬ್ ಎತ್ತಿ ಪಕ್ಕಕ್ಕೆ ಹಾಕಿ ನಡೆದ ಉಕ್ರೇನ್ ಪ್ರಜೆ; ವಿಡಿಯೋ ವೈರಲ್

Published On - 3:41 pm, Mon, 28 February 22