ಅಫ್ಘಾನಿಸ್ತಾನದಲ್ಲಿ ತಾಲಿಬಾನ್(Taliban) ಅಧಿಕಾರಕ್ಕೆ ಬಂದ ಮೇಲೆ ಎಲ್ಲರಿಗಿಂತ ಹೆಚ್ಚು ಸಮಸ್ಯೆಯಾಗಿದ್ದು ಮಹಿಳೆಯರಿಗೆ. ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇವೆ ಎಂದು ಹೇಳುತ್ತಲೇ ಅವರ ಸ್ವಾತಂತ್ರ್ಯವನ್ನೆಲ್ಲ ತಾಲಿಬಾನಿಗಳು ಕಿತ್ತುಕೊಳ್ಳುತ್ತಿದ್ದಾರೆ. ಹಾಗೇ, ಈಗ ಇನ್ನೊಂದು ಪ್ರಮುಖ ಆದೇಶವನ್ನು ತಾಲಿಬಾನಿಗಳು ಹೊರಡಿಸಿದ್ದು, ಇನ್ನುಮುಂದೆ ಅಫ್ಘಾನಿಸ್ತಾನದ ಯಾವುದೇ ಮಹಿಳೆಯರು ದೂರದ ಊರುಗಳಿಗೆ ಪ್ರಯಾಣ ಮಾಡಬೇಕು ಎಂದರೆ ಅವರೊಂದಿಗೆ ಯಾರಾದರೂ ಪುರುಷ ಸಂಬಂಧಿ ಇರಲೇಬೇಕು. ಅದಿಲ್ಲದೆ ಇದ್ದರೆ ರಸ್ತೆ ಸಾರಿಗೆಗೆ ಅನುಮತಿ ನೀಡಲಾಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಮಹಿಳೆಯರು ಹೆಡ್ಸ್ಕಾರ್ಫ್ ಧರಿಸದೆ ಬಂದರೆ, ಅವರಿಗೆ ವಾಹನ ಹತ್ತಲು ಅವಕಾಶ ಕೊಡಬೇಡಿ ಎಂದು ವಾಹನ ಮಾಲೀಕರಿಗೆ ತಾಲಿಬಾನಿಗಳು ಕರೆ ನೀಡಿದ್ದಾರೆ.
ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಮಹಿಳೆಯರಿಗೆ ಕೆಲವು ವಿಷಯಗಳಲ್ಲಿ ನಿರ್ಬಂಧ ಹೇರಲಾಗಿದೆ. ಅದರಲ್ಲಿ ಮುಖ್ಯವಾಗಿ ಕೆಲಸಕ್ಕೆ ಹೋಗಲು ಮಹಿಳೆಯರಿಗೆ ಅವಕಾಶ ಕೊಡುತ್ತಿಲ್ಲ. ಶಾಲಾ-ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಲು ಬಿಡುತ್ತಿಲ್ಲ. ಮೊದಲಿನಿಂದಲೂ ತಾಲಿಬಾನಿಗಳು ಮಹಿಳಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವರೇ ಆಗಿದ್ದಾರೆ. ಈ ಬಾರಿ ತಾವು ಹಾಗೆ ಮಾಡುವುದಿಲ್ಲ. ಮಹಿಳೆಯರಿಗೆ ಯಾವುದೇ ಕಷ್ಟ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ ವಾಸ್ತವದಲ್ಲಿ ಅವರಿಗೆ ನಿರ್ಬಂಧ ವಿಧಿಸುತ್ತಲೇ ಇದ್ದಾರೆ.
ಇದೀಗ ತಾಲಿಬಾನಿಗಳು ಹೊರಡಿಸಿರುವ ಹೊಸ ಆದೇಶದ ಪ್ರಕಾರ, ದೇಶದ ಯಾವುದೇ ಮಹಿಳೆ 45 ಮೈಲು (72 ಕಿಮೀ)ಗಳಷ್ಟು ದೂರ ಪ್ರಯಾಣ ಮಾಡಬೇಕು ಎಂದರೆ ಅವರೊಂದಿಗೆ, ಹತ್ತಿರದ ಪುರುಷ ಸಂಬಂಧಿ(ಪತಿ, ತಂದೆ, ಸೋದರ ಹೀಗೆ..ಯಾರಾದರೂ ಆಗಿರಬಹುದು) ಇರಲೇಬೇಕು. ಅದಿಲ್ಲದೆ ಒಬ್ಬರೇ ಹೊರಟರೆ ಖಂಡಿತ ಅವರಿಗೆ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಬಂಧಪಟ್ಟ ಸಚಿವಾಲಯದ ವಕ್ತಾರ ಸಾದಿಕ್ ಅಕಿಫ್ ಮುಜಾಹಿರ್ ತಿಳಿಸಿದ್ದಾರೆ. ಇನ್ನು ವಾಹನಗಳ ಮಾಲೀಕರು, ತಮ್ಮ ವಾಹನದಲ್ಲಿ ಸಂಗೀತಗಳನ್ನು ಹಾಕಿಸಿಕೊಂಡು ಕೇಳುವಂತಿಲ್ಲ ಎಂದೂ ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಕೆಲವೇ ದಿನಗಳ ಹಿಂದೆ ತಾಲಿಬಾನಿಗಳು, ಟಿವಿಗಳಲ್ಲಿ ಮಹಿಳಾ ಕಲಾವಿದರ ನಾಟಕಗಳು, ಧಾರವಾಹಿಗಳನ್ನು ನಿಷೇಧಿಸಬೇಕು ಎಂದು ಆದೇಶಿಸಿದ್ದರು. ಹಾಗೇ, ಮಹಿಳಾ ನಿರೂಪಕಿಯರು ಸುದ್ದಿಗಳನ್ನು ಓದುವಾಗಲೂ ಹಿಜಾಬ್ ಧರಿಸಿರಬೇಕು ಎಂದಿದ್ದರು. ಇದೀಗ ಹೊರಡಿಸಿರುವ ಮಾರ್ಗಸೂಚಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ಯಥಾ ಪ್ರಕಾರ ತಾಲಿಬಾನಿಗಳ ಆಡಳಿತಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ‘ಅಧಿಕಾರ ದಾಹಕ್ಕಾಗಿ ಮತಾಂತರ ನಿಷೇಧ ಕಾಯ್ದೆ’: ಬೊಮ್ಮಾಯಿ ವಿರುದ್ಧ ಚೇತನ್ ಗರಂ