‘ಅಧಿಕಾರ ದಾಹಕ್ಕಾಗಿ ಮತಾಂತರ ನಿಷೇಧ ಕಾಯ್ದೆ’: ಬೊಮ್ಮಾಯಿ ವಿರುದ್ಧ ಚೇತನ್​ ಗರಂ

‘ಅಧಿಕಾರ ದಾಹಕ್ಕಾಗಿ ಮತಾಂತರ ನಿಷೇಧ ಕಾಯ್ದೆ’: ಬೊಮ್ಮಾಯಿ ವಿರುದ್ಧ ಚೇತನ್​ ಗರಂ
ಚೇತನ್ ಕುಮಾರ್

Anti Conversion Bill: ‘ನಮ್ಮ ಧರ್ಮ ನಮ್ಮ ಹಕ್ಕು. ಅದು ನಮ್ಮ ಸಂವಿಧಾನದಲ್ಲಿದೆ. ಅವರವರ ಇಷ್ಟದ ಧರ್ಮವನ್ನು ಜನರು ಆಚರಿಸುತ್ತಾರೆ. ನಿಮ್ಮ ಧರ್ಮ ಚೆನ್ನಾಗಿದ್ದರೆ ಜನರೇ ಬಂದು ಸೇರುತ್ತಾರೆ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Dec 27, 2021 | 9:27 AM


ಖ್ಯಾತ ನಟ ‘ಆ ದಿನಗಳು’ ಚೇತನ್​ ಕುಮಾರ್​ (Actor Chetan Kumar) ಅವರು ತಮ್ಮ ಸಿದ್ಧಾಂತದ ಮೂಲಕ ಗುರುತಿಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಅವರು ನೇರವಾಗಿ ತಿಳಿಸುತ್ತಾರೆ. ಈಗ ಅವರು ಮತಾಂತರ ನಿಷೇಧ ಕಾಯ್ದೆ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಡೆ ಸರಿಯಿಲ್ಲ ಎಂದು ಅವರು ಟೀಕಿಸಿದ್ದಾರೆ. ‘ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಅಧಿಕಾರದ ದಾಹಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಅವರು ಕೋಮುವಾದಿಯೇ ಆಗಿಬಿಟ್ಟಿದ್ದಾರೆ ಎನ್ನಬಹುದು’ ಎಂದು ಚೇತನ್​ ಕುಮಾರ್​ ಗುಡುಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತಂತೆ ಪರ-ವಿರೋಧದ ಚರ್ಚೆ ಜೋರಾಗಿದೆ.

‘ಮುಖ್ಯಮಂತ್ರಿಗಳಿಗೆ ಅಪಾರ ಶಕ್ತಿ ಇರುತ್ತದೆ. ಈ ಮೊದಲು ಕೂಡ ನಾವು ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಜಗದೀಶ್​ ಶೆಟ್ಟರ್​, ಬಿ.ಎಸ್​. ಯಡಿಯೂರಪ್ಪ, ಸದಾನಂದ ಗೌಡ ಆಗಿರಬಹುದು, ಅವರು ಯಾರೂ ಕೂಡ ಬಸವರಾಜ ಬೊಮ್ಮಾಯಿ ರೀತಿ ಅಲ್ಪ ಸಂಖ್ಯಾತರನ್ನು ಗುರಿಯಿಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆ ತರಲಿಲ್ಲ. ಕೇವಲ 5 ತಿಂಗಳಲ್ಲಿ ಬೊಮ್ಮಾಯಿ ಅವರು ಅಧಿಕಾರ ದಾಹಕ್ಕಾಗಿ, ಸಿಎಂ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

‘ಜನರನ್ನು ಹೆದರಿಸಿ, ಬೆದರಿಸಿ ಈ ರೀತಿ ಕಾಯ್ದೆಗಳನ್ನು ತರಲಾಗುತ್ತಿದೆ. ಬಲವಂತದಿಂದ ಯಾರಾದರೂ ಮತಾಂತರ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಬಲವಂತ ಮಾಡಿರುವುದಕ್ಕೆ ಯಾವುದೇ ಆಧಾರಗಳು ಇಲ್ಲದಿರುವಾಗ, ಹೆದರಿಸುವ ತಂತ್ರದ ರೀತಿಯಲ್ಲಿ ಈ ರೀತಿ ಮಸೂದೆಗಳನ್ನು ತರುತ್ತಿರುವುದು ಸರಿಯಲ್ಲ. ನಮ್ಮ ಧರ್ಮ ನಮ್ಮ ಹಕ್ಕು. ಅದು ನಮ್ಮ ಸಂವಿಧಾನದಲ್ಲಿದೆ. ಅವರವರ ಇಷ್ಟದ ಧರ್ಮವನ್ನು ಜನರು ಆಚರಿಸುತ್ತಾರೆ. ನಿಮ್ಮ ಧರ್ಮ ಚೆನ್ನಾಗಿದ್ದರೆ ಜನರೇ ಬಂದು ಸೇರುತ್ತಾರೆ’ ಎಂದಿದ್ದಾರೆ ಚೇತನ್​ ಕುಮಾರ್​.

‘5 ತಿಂಗಳಲ್ಲಿ ಕೋಮುವಾದಿ ಸಿದ್ಧಾಂತದಿಂದ ಕಾಯ್ದೆ ಜಾರಿಗೊಳಿಸುವ ಹುನ್ನಾರ ನಡೆದಿದೆ. ಅದನ್ನು ಸಮರ್ಥಿಸಿಕೊಳ್ಳೋಕೆ ಆಗಲ್ಲ. ಇದನ್ನು ಅವರ ಅವಕಾಶವಾದಿತನ ಅಂತ ಹೇಳಬಹುದು. ನಿಜವಾಗಿಯೂ ಅವರು ಕೋಮುವಾದಿ ಆಗಿಯೇ ಬಿಟ್ಟಿದ್ದಾರೆ ಅಂತಲೂ ಹೇಳಬಹುದು. ಏನೇ ಅಂದರೂ ಇದು ಕರ್ನಾಟಕಕ್ಕೆ, ಭಾರತಕ್ಕೆ ಒಳ್ಳೆಯ ಹೆಜ್ಜೆ ಅಲ್ಲವೇ ಅಲ್ಲ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

‘100 ಕೋಟಿ ರೂ. ಅಲ್ಲ ಎಂದಿದ್ದರೆ ನಾನು ಈ ಕೆಲಸ ಮಾಡ್ತಿರಲಿಲ್ಲ’; ಚೇತನ್​ ಸಿನಿಮಾ ಬಗ್ಗೆ ರಮ್ಯಾ ಮಾತು

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ; ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada