ಅಫ್ಘಾನ್​​ನಲ್ಲಿ ತಾಲಿಬಾನಿಗಳನ್ನು ಗುರಿಯಾಗಿಸಿ ಬಾಂಬ್​ ದಾಳಿ; ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

| Updated By: Lakshmi Hegde

Updated on: Sep 19, 2021 | 4:09 PM

ಕಾಬೂಲ್​ನಿಂದ ಸುಮಾರು 80 ಮೈಲುಗಳಷ್ಟು ದೂರ ಇರುವ ಜಲಾಲಾಬಾದ್​ ಅಫ್ಘಾನಿಸ್ತಾನದಲ್ಲಿ 5ನೇ ದೊಡ್ಡ ನಗರ. ಆಗಸ್ಟ್​ 15ರಂದು ಅಫ್ಘಾನ್​​ನ್ನು ತಾಲಿಬಾನ್​ ವಶಪಡಿಸಿಕೊಂಡ ನಂತರ ಇಡೀ ಜಗತ್ತಿನ ಗಮನವೀಗ ಆ ದೇಶದ ಮೇಲೆ ಇದೆ.

ಅಫ್ಘಾನ್​​ನಲ್ಲಿ ತಾಲಿಬಾನಿಗಳನ್ನು ಗುರಿಯಾಗಿಸಿ ಬಾಂಬ್​ ದಾಳಿ; ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಬಾಂಬ್​ ಸ್ಫೋಟವಾದ ಸ್ಥಳದ ಚಿತ್ರ
Follow us on

ಕಾಬೂಲ್​: ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಶನಿವಾರ ಸಂಜೆ ಹೊತ್ತಿಗೆ ಅಫ್ಘಾನಿಸ್ತಾನದ ಜಲಾಲಾಬಾದ್ (Jalalabad)​​ನಲ್ಲಿ ಸರಣಿ ಸ್ಫೋಟವಾಗಿದ್ದು ಮೂವರು ಮೃತಪಟ್ಟಿದ್ದಾರೆ. ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಂಗರ್​ಹಾರ್​ ಪ್ರಾಂತ್ಯದ ಜಲಾಲಾಬಾದ್​​ನಲ್ಲಿ ತಾಲಿಬಾನಿಗಳ ವಾಹನಗಳನ್ನು ಗುರಿಯಾಗಿಸಿಕೊಂಡು ಬಾಂಬ್​ ದಾಳಿ ನಡೆಸಲಾಗಿತ್ತು. ರಸ್ತೆ ಬದಿಯಲ್ಲಿ ಈ ಸ್ಫೋಟವಾಗಿದೆ. 

ಸ್ಫೋಟದಲ್ಲಿ ಸತ್ತ ಮೂವರಲ್ಲಿ ಇಬ್ಬರು ತಾಲಿಬಾನ್​ ಅಧಿಕಾರಿಗಳಾಗಿದ್ದಾರೆ.  ಇದರಲ್ಲಿ ಗಾಯಗೊಂಡವರಲ್ಲಿ ಅನೇಕರು ಸಾಮಾನ್ಯ ಜನರೇ ಆಗಿದ್ದಾರೆ. ಜಲಾಲಾಬಾದ್​​ನಲ್ಲಿ ನಡೆದ ಈ ಬಾಂಬ್​ ಸ್ಫೋಟ ಪಕ್ಕಾ ತಾಲಿಬಾನಿಗಳನ್ನು ಗುರಿಯಾಗಿಸಿಕೊಂಡೇ ನಡೆದದ್ದು ಎಂಬುದು ಸ್ಪಷ್ಟವಾಗಿದೆ.  ಆದರೆ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಕಾಬೂಲ್​ನಿಂದ ಸುಮಾರು 80 ಮೈಲುಗಳಷ್ಟು ದೂರ ಇರುವ ಜಲಾಲಾಬಾದ್​ ಅಫ್ಘಾನಿಸ್ತಾನದಲ್ಲಿ 5ನೇ ದೊಡ್ಡ ನಗರ. ಆಗಸ್ಟ್​ 15ರಂದು ಅಫ್ಘಾನ್​​ನ್ನು ತಾಲಿಬಾನ್​ ವಶಪಡಿಸಿಕೊಂಡ ನಂತರ ಇಡೀ ಜಗತ್ತಿನ ಗಮನವೀಗ ಆ ದೇಶದ ಮೇಲೆ ಇದೆ. ತಾಲಿಬಾನಿಗಳಿಗೆ ಅಫ್ಘಾನಿಸ್ತಾನದಲ್ಲೇ ವಿರೋಧಿಗಳು ಇದ್ದಾರೆ. ಅಫ್ಘಾನ್​ ಪ್ರತಿರೋಧಕ ಪಡೆ ತಾಲಿಬಾನಿಗಳ ವಿರುದ್ಧ ಸಮರ ಸಾರಿದೆ. ಹಾಗೇ, ಅಮೆರಿಕ ಸೇನೆಯೂ ಸಹ ಒಂದು ಕಣ್ಣಿಟ್ಟಿದೆ. ಯುಎಸ್​ ಸೇನೆ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದಾಗ ಕಾಬೂಲ್​ ಬಳಿ ಐಸಿಸ್​ ಕೆ ದಾಳಿ ನಡೆಸಿತ್ತು ಇದರಲ್ಲಿ ಯುಎಸ್​ನ ಸುಮಾರು 10 ಯೋಧರು ಮೃತಪಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಯುಎಸ್​ ನಡೆಸಿದ್ದ ಡ್ರೋನ್​ ದಾಳಿಯಲ್ಲಿ ಮಕ್ಕಳೂ ಸೇರಿ ಮುಗ್ಧ ನಾಗರಿಕರು ಸಾವನ್ನಪ್ಪಿದ್ದರು. ಈ ಮಧ್ಯೆ ತಾಲಿಬಾನಿಗಳಲ್ಲೇ ಎರಡು ಬಣಗಳಾಗಿದ್ದು, ಆಂತರಿಕ ಕಲಹವೂ ಈ ಬಾಂಬ್​ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಅಪಘಾತದ ಸುದ್ದಿ ಕೇಳಿ ಬೇಸರವಾಗಿದ್ದ ಸಾಯಿ ಧರಮ್​ತೇಜ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ

ಬುರ್ಖಾಧಾರಿ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ; ಕಠಿಣ ಕ್ರಮದ ಭರವಸೆ ನೀಡಿದ ಸಿಎಂ 

(Series of Bomb explosions in Jalalabad Of Afghanistan)