ಪ್ರಸ್ತುತ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಅಧಿಕಾರ ಸ್ಥಾಪನೆಗೆ ಮುಂದಾಗಿರುವ ತಾಲಿಬಾನ್ ಉಗ್ರರ ಕ್ರೌರ್ಯ ಈ ಹಿಂದೆಯೇ ಅನೇಕ ಬಾರಿ ಸಾಬೀತಾಗಿರುವುದರಿಂದ ಜನ ಸಾಮಾನ್ಯರು ಅವರ ನೆರಳನ್ನು ಕಂಡರೂ ಹೆದರುವ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಮಹಿಳೆಯರ ವಿಚಾರದಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಹೇರುವ ತಾಲಿಬಾನಿಗಳು ಮಹಿಳಾ ಸ್ವಾತಂತ್ರ್ಯಕ್ಕೆ ದೊಡ್ಡ ಕಂಟಕವಾಗಿದ್ದಾರೆ. ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಕೆಲ ದಿನಗಳ ಬಳಿಕ ಮಹಿಳೆಯರಿಗೆ ನಾವು ತೊಂದರೆ ಕೊಡುವುದಿಲ್ಲ ಎಂದು ತಾಲಿಬಾನಿಗಳು ಬಾಯಿ ಮಾತಿಗೆ ಹೇಳಿದ್ದರಾದರೂ ಅದನ್ನು ಉಳಿಸಿಕೊಳ್ಳದ ಕಾರಣ ಅವರ ಮೇಲಿನ ಭಯ ಕಡಿಮೆಯಾಗುವುದು ಸಾಧ್ಯವಾಗಿಲ್ಲ. ತಾಲಿಬಾನ್ ಉಗ್ರರು ಎಷ್ಟೇ ಬದಲಾವಣೆಯ ಮಾತು ಆಡಿದರೂ ತಮ್ಮ ಕಟು ವಿಚಾರಗಳಲ್ಲಿ ಅವರು ಬದಲಾಗುವಂತೆ ಕಾಣುತ್ತಿಲ್ಲ. ಇದೀಗ ತಾಲಿಬಾನಿಗಳು ಆಫ್ಘಾನ್ನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದಿದ್ದಾರೆ ಹಾಗೂ ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ ಎಂದು ವರದಿಯಾಗಿರುವುದು ಅವರ ಕ್ರೌರ್ಯ ಕಡಿಮೆಯಾಗಿಲ್ಲ ಎಂಬುದಕ್ಕೆ ಪುಷ್ಠಿ ನೀಡಿದೆ.
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಗರ್ಭವತಿಯಾಗಿದ್ದ ಆಫ್ಘಾನ್ನ ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಹಾಕಿದ್ದಾರೆ. ಗುಂಡಿಟ್ಟ ಬಳಿಕ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆಕೆಯ ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದು ತಮ್ಮ ನಿಜ ಸ್ವರೂಪವನ್ನು ತೋರಿಸಿದ್ದಾರೆ.
ಫಿರೋಜ್ಕೋಹ್ನಲ್ಲಿ ಈ ಹೀನ ಕೃತ್ಯ ನಡೆದಿದೆ. ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. ನತದೃಷ್ಟ ಮಹಿಳಾ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದ್ದು, ತಾಲಿಬಾನಿಗಳ ಹಲ್ಲೆಯಿಂದ ಆಕೆಯ ಮುಖ ಸಂಪೂರ್ಣ ವಿರೂಪಗೊಂಡಿದೆ.
“Nigara a police officer was shot dead infront of her kids and husband last night at 10PM in Ghor province. Nigara was 6 months pregnant, she was shot dead by the Taliban.” Her family members says. pic.twitter.com/w5vs1Eahsq
— BILAL SARWARY (@bsarwary) September 5, 2021
ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ತಾಲಿಬಾನಿಗಳು ಅವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಪೊಲೀಸ್ ಅಧಿಕಾರಿ ನೆಗರ್ನ ಮೇಲೆ ಕಣ್ಣಿಟ್ಟಿದ್ದ ತಾಲಿಬಾನ್ ಉಗ್ರರು ಆಕೆಯ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ವಿಪರ್ಯಾಸವೆಂದರೆ, ಇಷ್ಟೆಲ್ಲಾ ಆದ ಬಳಿಕ ಅಲ್ಲಿನ ಸ್ಥಳೀಯ ತಾಲಿಬಾನ್ ಘಟನೆಯನ್ನು ತನಿಖೆಗೆ ಒಳಪಡಿಸುವ ಭರವಸೆ ನೀಡಿದೆಯಂತೆ.
ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಹಜವಾಗಿಯೇ ಜನರಿಗೆ ತಾಲಿಬಾನ್‌ಗಳ ಕುರಿತು ಭಯ ಹೆಚ್ಚಾಗಿದೆ. ಅದಕ್ಕಾಗಿಯೇ ಸಾಕಷ್ಟು ಮಂದಿ ಪಲಾಯನ ಮಾಡಿದ್ದಾರೆ. ಆದರೆ, ಇದಕ್ಕೆ ಪ್ರತ್ಯುತ್ತರವಾಗಿ ತಾಲಿಬಾನಿಗಳು ತಮ್ಮನ್ನು ತಾವು ಉತ್ತಮರು ಹಾಗೂ ಸಹಿಷ್ಣುಗಳೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಅದರ ನಡುವೆಯೂ, ಉಗ್ರರ ಗುಂಪು ತಮ್ಮ ವಿರೋಧಿಗಳನ್ನು ಕೊಲ್ಲುವ ಮೂಲಕ ತಮ್ಮ ಅಸಲಿಯತ್ತನ್ನು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ:
ಅಫ್ಘಾನ್ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯ ಅಂತಿಮ ಹಂತ; ಪಾಕಿಸ್ತಾನ, ಚೀನಾ, ರಷ್ಯಾಕ್ಕೆ ತಾಲಿಬಾನಿಗಳಿಂದ ಆಹ್ವಾನ