ಅಫ್ಘಾನ್​ನಿಂದ ಹೊರಡುವಾಗ ಒಂದು ಬಹುದೊಡ್ಡ, ಒಳ್ಳೆಯ ಕೆಲಸ ಮಾಡಿದ ಯುಎಸ್​ ಸೇನೆ; ವಿಮಾನ, ಮಿಲಿಟರಿ ವಾಹನಗಳೆಲ್ಲ ನಿಷ್ಕ್ರಿಯ

| Updated By: Lakshmi Hegde

Updated on: Aug 31, 2021 | 12:01 PM

ಅಫ್ಘಾನ್​ನಿಂದ ಆಗಸ್ಟ್​ 31ರೊಳಗೆ ಹೊರಡಬೇಕಾದ ಒತ್ತಡದಲ್ಲಿದ್ದ ಅಮೆರಿಕ ತನ್ನ ಸೇನಾ ಸಲಕರಣೆಗಳು, ಯುದ್ಧ ವಾಹನಗಳನ್ನು ವಾಪಸ್​ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದನ್ನು ಅರಿತಿತ್ತು.

ಅಫ್ಘಾನ್​ನಿಂದ ಹೊರಡುವಾಗ ಒಂದು ಬಹುದೊಡ್ಡ, ಒಳ್ಳೆಯ ಕೆಲಸ ಮಾಡಿದ ಯುಎಸ್​ ಸೇನೆ; ವಿಮಾನ, ಮಿಲಿಟರಿ ವಾಹನಗಳೆಲ್ಲ ನಿಷ್ಕ್ರಿಯ
ಮಿಲಿಟರಿ ವಾಹನಗಳನ್ನು ನಿಷ್ಕ್ರಿಯಗೊಳಿಸಿದ ಯುಎಸ್​ ಸೇನೆ
Follow us on

ವಾಷಿಂಗ್ಟನ್​: ಅಫ್ಘಾನಿಸ್ತಾನ (Afghanistan)ದಿಂದ ಯುಎಸ್​ ಸೇನೆ (US Army) ಸಂಪೂರ್ಣವಾಗಿ ಹೊರನಡೆದಿದೆ. ಅಲ್ಲೀಗ ಯುಎಸ್​ ಸೇನೆಯ ಒಬ್ಬೇ ಒಬ್ಬ ಯೋಧ ಕೂಡ ಇಲ್ಲ. ಅದೂ ಅಫ್ಘಾನಿಸ್ತಾನದ ತಾಲಿಬಾನ್ (Taliban Terrorists)​ ನೀಡಿದ್ದ ಆಗಸ್ಟ್​ 31ರ ಗಡುವಿಗೂ ಮೊದಲೇ ಸ್ಥಳಾಂತರ ಪ್ರಕ್ರಿಯೆಯನ್ನೂ ಮುಗಿಸಿ, ತಾವೂ ಸ್ವದೇಶಕ್ಕೆ ಮರಳಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಒಂದು ಆತಂಕ ಇತ್ತು. ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಹಲವು ಯುದ್ಧ ವಿಮಾನಗಳನ್ನು, ಶಸ್ತ್ರಸಜ್ಜಿತ ವಾಹನಗಳು, ಹೈಟೆಕ್​ ರಾಕೆಟ್​ಗಳನ್ನು ಬಿಟ್ಟುಹೋಗಿದೆ. ಅವೆಲ್ಲವೂ ತಾಲಿಬಾನಿಗಳ ಪಾಲಾಗಲಿದೆ. ಇಂಥ ಮುಂದುವರಿದ ಶಸ್ತ್ರಗಳು ಉಗ್ರರ ಪಾಲಾದರೆ ಗತಿಯೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಆದರೆ ಅಂದುಕೊಂಡಂತೆ ಆಗಿಲ್ಲ..ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ.

ಯುಎಸ್​ ಸೇನೆ ಕಾಬೂಲ್​ ಬಿಟ್ಟು ಹೊರಡುವುದಕ್ಕೂ ಮೊದಲು, ತನ್ನ ಹಲವು ಮಿಲಿಟರಿ ವಿಮಾನಗಳು, ಅತ್ಯಾಧುನಿಕ ರಾಕೆಟ್​​ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಷ್ಕ್ರಿಯಗೊಳಿಸಿದೆ. ಅಂದರೆ ಅವುಗಳು ಇನ್ನು ಕಾರ್ಯಾಚರಣೆ ನಡೆಸಲು ಸಾಧ್ಯವೇ ಇಲ್ಲದಂತೆ ಮಾಡಿದೆ ಎಂದು ಯುಎಸ್ ಸೇನಾ​ ಜನರಲ್​ ಕೆನೆತ್ ಮೆಕೆಂಜಿ ತಿಳಿಸಿದ್ದಾರೆ. ತಾಲಿಬಾನ್​ ನಿಯಂತ್ರಿತ ಅಫ್ಘಾನಿಸ್ತಾನದಿಂದ ನಾಗರಿಕರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಯುಎಸ್​ ಸೇನೆ 2ವಾರಗಳ ಕಾಲ ನಡೆಸಿ, ಇದೀಗ ಮುಕ್ತಾಯಗೊಳಿಸಿದೆ. ಹಾಗೇ, ಸೇನೆ ಅಲ್ಲಿಂದ ಹೊರಡುವ ಮೊದಲು ಕಾಬೂಲ್​ ಏರ್​ಪೋರ್ಟ್​​ನಲ್ಲಿದ್ದ ಅಮೆರಿಕಕ್ಕೆ ಸೇರಿದ ಸುಮಾರು 73 ವಿಮಾನಗಳನ್ನು ನಿಷ್ಪ್ರಯೋಜಕಗೊಳಿಸಲಾಗಿದೆ. ಅದರಲ್ಲಿದ್ದ ಮಿಲಿಟರಿ ಸಾಧನಗಳನ್ನೆಲ್ಲ ನಿಷ್ಕ್ರಿಯಗೊಳಿಸಿ, ಬಳಕೆಗೆ ಬಾರದಂತೆ ಮಾಡಲಾಗಿದೆ. ಆ ವಿಮಾನಗಳು ಇನ್ನೆಂದೂ ಹಾರಾಡುವುದಿಲ್ಲ. ಅದನ್ನು ಆಪರೇಟ್​ ಮಾಡಲು ಒಬ್ಬನೇ ಒಬ್ಬನಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆಗಸ್ಟ್​ 14ರಿಂದ ಶುರುವಾಗಿತ್ತು ಏರ್​ಲಿಫ್ಟ್
ಅಫ್ಘಾನಿಸ್ತಾನದ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಯುಎಸ್​ ನಾಗರಿಕರನ್ನು ಏರ್​ಲಿಫ್ಟ್ ಮಾಡುವ ಕೆಲಸ ಆಗಸ್ಟ್ 14ರಿಂದಲೇ ಶುರುವಾಯಿತು. ಈ ಹೊತ್ತಲ್ಲ ಪೆಂಟೆಗನ್​ ಅದಕ್ಕಾಗಿ 6000 ಸೈನಿಕರನ್ನು ನಿಯೋಜಿಸಿತು. ಕಾಬೂಲ್​ ಏರ್​ಪೋರ್ಟ್​ನಿಂದ ವಿಮಾನ ಕಾರ್ಯಾಚರಣೆ ಮಾಡಿ, ಜನರನ್ನು ರಕ್ಷಿಸುವ ಜವಾಬ್ದಾರಿ ಈ ಸೈನಿಕರದ್ದಾಗಿತ್ತು. ನಿನ್ನೆ ನಾಗರಿಕರು, ಸೈನಿಕರನ್ನೆಲ್ಲ ಏರ್​ಲಿಫ್ಟ್ ಮಾಡುವ ಕೊನೇ ಕ್ಷಣದವರೆಗೂ ಸರಿಯಾಗಿಯೇ ಇದ್ದ ವಿಮಾನಗಳು, 1 ಮಿಲಿಯನ್ ಡಾಲರ್​​ ಮೌಲ್ಯದ 70 MRAP ಶಸ್ತ್ರಸಜ್ಜಿತ, ಯುದ್ಧತಂತ್ರದ ವಾಹನಗಳು, 27 Humvees (High Mobility Multipurpose Wheeled Vehicle)ಗಳನ್ನೆಲ್ಲವನ್ನೂ ಅಫ್ಘಾನ್​ನಲ್ಲಿಯೇ ಬಿಡಲಾಗಿದೆ. ಆದರೆ ಅವು ಯಾವವೂ ಇನ್ನು ಮುಂದೆ ಬಳಕೆಗೆ ಬರುವುದಿಲ್ಲ ಎಂದು ಜನರಲ್​ ಕೆನೆತ್​ ತಿಳಿಸಿದ್ದಾರೆ.

ಅಫ್ಘಾನ್​ನಿಂದ ಆಗಸ್ಟ್​ 31ರೊಳಗೆ ಹೊರಡಬೇಕಾದ ಒತ್ತಡದಲ್ಲಿದ್ದ ಅಮೆರಿಕ ತನ್ನ ಸೇನಾ ಸಲಕರಣೆಗಳು, ಯುದ್ಧ ವಾಹನಗಳನ್ನು ವಾಪಸ್​ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದನ್ನು ಅರಿತಿತ್ತು. ಹೀಗಾಗಿ, ರಾಕೆಟ್​ ದಾಳಿಯನ್ನು ತಡೆಯುವ C-RAM ವ್ಯವಸ್ಥೆ, ಫಿರಂಗಿಗಳನ್ನೂ ಅಫ್ಘಾನ್​​ನಲ್ಲಿಯೇ ಬಿಡಬೇಕಾಯಿತು. ಆದರೆ ಅದೆಲ್ಲ ಚಲನೆಯಲ್ಲೇ ಇದ್ದರೆ ತಾಲಿಬಾನಿಗಳು ಬಳಸಿಕೊಳ್ಳುವುದು ಗ್ಯಾರಂಟಿ. ಮೊದಲೇ ಅಪಾಯಕಾರಿ ಉಗ್ರರು..ಅವರ ಕೈಗೆ ಮುಂದುವರಿದ ಶಸ್ತ್ರಾಸ್ತ್ರಗಳನ್ನು ಕೊಟ್ಟರೆ ಥೇಟ್​ ಮಂಗಗಳ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗುತ್ತದೆ. ಹಾಗಾಗಿ ತುಂಬ ಬುದ್ಧಿವಂತಿಕೆಯಿಂದ ಮುಂದಡಿಯಿಟ್ಟ ಯುಎಸ್​ ಸೇನೆ, ಅಫ್ಘಾನ್​​ನಿಂದ ಹೊರಡುವಾಗ ಅಲ್ಲಿ ಬಿಟ್ಟು ಬರಬೇಕಾದ ಪ್ರತಿ ಮಿಲಿಟರಿ ವಾಹನವನ್ನೂ ನಿಷ್ಕ್ರಿಯಗೊಳಿಸಿದೆ. ಈ ವಾಹನಗಳು, ವಿಮಾನಗಳನ್ನು ಯಾರಾದರೂ ಮನಸು ಮಾಡಿದರೆ ಮ್ಯೂಸಿಯಂಗಳಲ್ಲಿ ಇಡಬಹುದೇ ಹೊರತು, ಇನ್ನೊಂದು ಬಾರಿ ಬಳಸಲು ಸಾಧ್ಯವೇ ಇಲ್ಲದಂತಾಗಿದೆ.

ಇದನ್ನೂ ಓದಿ: ಸೆರೊ ಸಮೀಕ್ಷೆ, ಹೊಸ ಪರೀಕ್ಷಾ ತಂತ್ರ: ಹೆಚ್ಚುತ್ತಿರುವ ಕೊವಿಡ್ -19 ಪ್ರಕರಣಗಳ ವಿರುದ್ಧ ಕೇರಳ ಹೇಗೆ ಹೋರಾಡುತ್ತಿದೆ?