ಹೇಗಾದರೂ ಮಾಡಿ ತಾಲಿಬಾನಿ ಉಗ್ರರಿಂದ ತಪ್ಪಿಸಿಕೊಳ್ಳಬೇಕೆಂಬ ಹತಾಷೆಯಲ್ಲಿ ಕಾಬೂಲ್ ನಗರದ ಹೊರವಲಯದಲ್ಲಿ ತಲೆ ಎತ್ತಿದ್ದ ವಲಸೆ ಶಿಬಿರಗಳಲ್ಲಿ ತಂಗಿದ್ದ ಹಲವಾರು ಆಫ್ಘನ್ ಮಹಿಳೆಯರು ಅನಿವಾರ್ಯವಾಗಿ ಮದುವೆಯಾಗುವ ಸ್ಥಿತಿ ನಿರ್ಮಾಣವಾಗಿತ್ತು, ಮದುವೆಯಾದರೆ ಗಂಡನ ಜೊತೆ ಹೋಗಲು ಬೇರೆ ದೇಶಕ್ಕೆ ಹೋಗಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಅವರು ಒಲ್ಲದ ಮನ್ಸಸ್ಸಿನಿಂದ ಮದುವೆಯಾಗುತ್ತಿದ್ದರು ಎಂದು ಸಿ ಎನ್ ಎನ್ ಸುದ್ದಿವಾಹಿನಿ ವರದಿ ಮಾಡುವ ಮೂಲಕ ಅಮೆರಿಕ ಗೃಹ ಇಲಾಖೆಯನ್ನು ಎಚ್ಚರಿಸಿದೆ. ಸದರಿ ವಿಷಯ ತನ್ನ ಗಮನಕ್ಕೆ ಬಂದ ನಂತರ ಯುಎಸ್ ಗೃಹ ಇಲಾಖೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಈ) ಅನ್ನು ಜಾಗೃತಗೊಳಿಸಿದೆ.
ಸಿ ಎನ್ ಎನ್ ವರದಿಯ ಪ್ರಕಾರ ಕೆಲ ಸ್ಥಿತಿವಂತ ಕುಟುಂಬಗಳು ಸಾವಿರಾರು ಡಾಲರ್ಗಳನ್ನು ವರದಕ್ಷಿಣೆಯ ರೂಪದಲ್ಲಿ ನೀಡಿ ತಮ್ಮ ಹೆಣ್ಣುಮಕ್ಕಳ ಮದುವೆ ಮಾಡಿಸುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಯುವಕರಿಗೆ ಕೇವಲ ಗಂಡನ ಹಾಗೆ ನಟಿಸಲು ಹಣ ನೀಡಲಾಗುತ್ತಿದೆ ಇಲ್ಲವೇ ಪುಸಲಾಯಿಸಲಾಗುತ್ತಿದೆ. ಇದು ವಲಸೆ ಹೋಗಲು ಜನ ತಂಗಿರುವ ಶಿಬಿರಗಳಲ್ಲಿ ಮಾನವ ಕಳ್ಳಸಾಗಣೆಯ ನಡೆದಿರಬಹುದಾದ ಆತಂಕ ಮೂಡಿಸಿದೆ.
ಈ ವಿಷಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ರಾಜತಂತ್ರಜ್ಞರ ಗಮನಕ್ಕೆ ತರಲಾಗಿದೆ. ಮತ್ತು ಈ ಪದ್ಧತಿ ಶಿಬಿರಗಳಲ್ಲಿ ಯಾವ ಹಂತ ತಲುಪಿತ್ತು ಅನ್ನುವುದರ ಬಗ್ಗೆ ಖಚಿತ ಮಹಿತಿ ಇಲ್ಲದಿರುವುದರಿಂದ, ಈ ಡಿಪ್ಲೊಮ್ಯಾಟ್ಗಳು, ಮಾನವ ಕಳ್ಳಸಾಗಣೆಗೆ ಬಲಿಯಾದವರನ್ನು ಗುರುತಿಸಲು ತಾವು ಮಾರ್ಗದರ್ಶನ ನೀಡಿ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಹಾಗೆ ನೋಡಿದರೆ, ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಪಲಾಯನಗೈಯುವ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ ಮತ್ತು ದೇಶದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚಿಸುವುದಕ್ಕೆ ಕ್ಷಣಗಣನೆ ಶುರುವಾಗಿದೆ. ವಲಸೆ ಹೊರಟವರು ಒಂದೋ ಪ್ರಯಾಣದಲ್ಲಿದ್ದಾರೆ ಇಲ್ಲವೇ ತಾವು ತಲುಪಬೇಕೆಂದಿದ್ದ ಸ್ಥಳ ಮುಟ್ಟಿಯಾಗಿದೆ. ಅನೇಕ ಮಹಿಳೆಯರು ಯುಏಈ ತಲುಪಿದ್ದಾರೆಂದು ವರದಿ ತಿಳಿಸಿದೆ. ಮೂರನೇ ದೇಶಗಳು ಪ್ರಯಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ತಿಗೊಂಡ ನಂತರ ಅವರು ಅಮೆರಿಕಾಗೆ ಪ್ರಯಾಣ ಬೆಳಸಲಿದ್ದಾರೆ.
ಎರಡು ದಶಕಗಳ ನಂತರ ತಾಲಿಬಾನ್ ಅಧಿಕಾರಕ್ಕೆ ಮರಳುತ್ತಿರುವುದು ಅಫ್ಘಾನಿಸ್ತಾನದ ಮಹಿಳೆಯರಲ್ಲಿ ಭೀತಿಯನ್ನುಂಟು ಮಾಡಿದೆ. 1996 ರಿಂದ 2001 ರವರೆಗೆ ಅವರು ನಡೆಸಿದ ಅಧಿಕಾರಾವಧಿಯಲ್ಲಿ ತಾಲಿಬಾನಿಗಳು ಮಹಿಳೆಯರ ಹಕ್ಕುಗಳನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದರು. ಆದರೆ, ಈ ಬಾರಿ ಶರಿಯ ಕಾನೂನಿನಲ್ಲಿ ಪ್ರತಿಪಾದಿಸಿರುವಂತೆ ಅವರ ಹಕ್ಕುಗಳನ್ನು ಸಂರಕ್ಷಿಸಲಾಗುವುದು ಎಂದು ತಾಲಿಬಾನಿಗಳು ಭರವಸೆ ನೀಡಿದ್ದಾರೆ.
ಆದರೆ, ಗಮನಿಸಿಬೇಕಾದ ಸಂಗತಿಯೆಂದರೆ ಅವರು ಈಗಾಗಲೇ, ಸಹ-ಶಿಕ್ಷಣ ಪದ್ಧತಿ, ಪುರುಷರ ಜೊತೆಯಿಲ್ಲದೆ ಪ್ರಯಾಣ ಮಾಡುವುದನ್ನು ಬ್ಯಾನ್ ಮಾಡಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಪತ್ರಕರ್ತರು ಸೇರಿದಂತೆ ಕಲೆಯೊಂದಿಗೆ ಸಂಬಂಧವಿಟ್ಟುಕೊಂಡಿದ್ದ ನೂರಾರು ಮಹಿಳೆಯರು ಅಪ್ಘಾನಿಸ್ತಾನವನ್ನು ತ್ಯಜಿಸಿದ್ದಾರೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಮಾಡಿರುವ ಒಂದು ವರದಿಯ ಪ್ರಕಾರ ಅಫ್ಘಾನಿಸ್ತಾನದ ಮಹಿಳಾ ಪತ್ರಕರ್ತೆಯರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದಾರೆ ಮತ್ತು ತಾಲಿಬಾನ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಮೊದಲು 700 ರಷ್ಟಿದ್ದ ಅವರ ಸಂಖ್ಯೆ ಇಗ 100 ಕ್ಕೆ ಇಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣ ಈಗ ತಾಲಿಬಾನ್ ಸುಪರ್ದಿಯಲ್ಲಿದೆ: ಏರ್ಪೋರ್ಟ್ ನಿರ್ವಹಣೆಯ ಕೌಶಲ ತಾಲಿಬಾನ್ಗೆ ಇದೆಯೇ?