ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ಭಾರತವು ಯಾವುದೇ ದೇಶದಿಂದ ತೈಲವನ್ನು ಖರೀದಿಸಲು ಸ್ವತಂತ್ರವಾಗಿದೆ ಮತ್ತು ತನ್ನ ಕಚ್ಚಾ ಪೂರೈಕೆದಾರರನ್ನು ವೈವಿಧ್ಯಗೊಳಿಸುವ ನಿರ್ಧಾರದಲ್ಲಿ ಹೊಸದೇನೂ ಇಲ್ಲ ಎಂದು ಕ್ರೆಮ್ಲಿನ್ ಬುಧವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿ ಕೆಲವು ದಿನಗಳ ನಂತರ ಈ ಹೇಳಿಕೆ ಬಂದಿದೆ.

ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು
ನರೇಂದ್ರ ಮೋದಿ
Image Credit source: Sputnik India

Updated on: Feb 05, 2026 | 10:10 AM

ಮಾಸ್ಕೋ, ಫೆಬ್ರವರಿ 05: ಭಾರತವು ಯಾವುದೇ ದೇಶದಿಂದ ಕಚ್ಚಾತೈಲವನ್ನು ಖರೀದಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ರಷ್ಯಾ(Russia) ಹೇಳಿದೆ. ರಷ್ಯಾ ಎಂದಿಗೂ ಭಾರತದ ಏಕೈಕ ಇಂಧನ ಪಾಲುದಾರನಾಗಿರಲಿಲ್ಲ ಮತ್ತು ತೈಲ ಖರೀದಿಯ ಮೂಲಗಳಲ್ಲಿನ ಬದಲಾವಣೆಯನ್ನು ಅಸಾಮಾನ್ಯವೆಂದು ಪರಿಗಣಿಸುವುದು ತಪ್ಪು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಪೆಸ್ಕೋವ್ ಮಾತನಾಡಿ, ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಂತೆ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಭಾರತವು ಯಾವಾಗಲೂ ಈ ಉತ್ಪನ್ನಗಳನ್ನು ಇತರ ದೇಶಗಳಿಂದಲೂ ಖರೀದಿಸಿದೆ. ಆದ್ದರಿಂದ, ಇದರಲ್ಲಿ ನಮಗೆ ಹೊಸದಾಗಿ ಏನೂ ಕಾಣುತ್ತಿಲ್ಲ ಎಂದು ಹೇಳಿದರು.

ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ಬದಲಿಗೆ ಅಮೆರಿಕ ಮತ್ತು ಬಹುಶಃ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ನಂತರ ಪೆಸ್ಕೋವ್ ಅವರ ಹೇಳಿಕೆ ಬಂದಿದೆ.

ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಮಾಸ್ಕೋಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಷ್ಯಾದ ವಕ್ತಾರರು ಹೇಳಿದ್ದಾರೆ. ಭಾರತದಿಂದ ಅಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಮತ್ತಷ್ಟು ಓದಿ: ಉಕ್ರೇನ್​ನಲ್ಲಿ ಬಸ್ ಮೇಲೆ ರಷ್ಯಾ ಡ್ರೋನ್ ದಾಳಿ, 15 ಮಂದಿ ಸಾವು, 7 ಜನರಿಗೆ ಗಾಯ

ಎರಡೂ ದೇಶಗಳ ನಡುವಿನ ಇಂಧನ ಸಹಕಾರಕ್ಕೆ ಬೆಂಬಲ
ಏತನ್ಮಧ್ಯೆ, ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಮಾತನಾಡಿ, ಎರಡೂ ದೇಶಗಳ ನಡುವಿನ ಇಂಧನ ಸಹಕಾರವನ್ನು ಬೆಂಬಲಿಸಿದರು. ಹೈಡ್ರೋಕಾರ್ಬನ್ ವ್ಯಾಪಾರವು ಭಾರತ ಮತ್ತು ರಷ್ಯಾ ಎರಡಕ್ಕೂ ಪ್ರಯೋಜನಕಾರಿ ಎಂದು ಅವರು ಹೇಳಿದರು.

ಭಾರತದ ರಷ್ಯಾದ ಹೈಡ್ರೋಕಾರ್ಬನ್‌ಗಳ ಖರೀದಿಯು ಎರಡೂ ಕಡೆಯವರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಜಖರೋವಾ ಹೇಳಿದರು. ನಮ್ಮ ಭಾರತೀಯ ಪಾಲುದಾರರೊಂದಿಗೆ ಸಹಕಾರವನ್ನು ಮುಂದುವರಿಸಲು ನಾವು ಸಿದ್ಧರಿದ್ದೇವೆ ಎಂದರು.

ಟ್ರಂಪ್ ಸೋಮವಾರ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದರು ಮತ್ತು ಭಾರತದ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಿದ್ದಾರೆ. ಪ್ರಧಾನಿ ಮೋದಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಮತ್ತು ಅಮೆರಿಕ ಮತ್ತು ವೆನೆಜುವೆಲಾದಿಂದಲೂ ಹೆಚ್ಚಿನ ತೈಲ ಖರೀದಿಸಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ