ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಮತ್ತು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ (Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರು ಎಲ್ಲಾ ಆದಾಯಗಳಿಗೆ ಇಂಗ್ಲೆಂಡ್ನಲ್ಲಿ ತೆರಿಗೆ ಪಾವತಿಸುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿ ಸೇರಿದಂತೆ ವಿಶ್ವದಲ್ಲಿ ಗಳಿಸಿದ ಆದಾಯಗಳಿಗೆ ಇಂಗ್ಲೆಂಡ್ನಲ್ಲಿ ತೆರಿಗೆ ಪಾವತಿಸುವುದಾಗಿ ಸರಣಿ ಟ್ವೀಟ್ಗಳ ಮೂಲಕ ಅಕ್ಷತಾ ಘೋಷಿಸಿದ್ದಾರೆ. ಈ ಹಿಂದೆ ಇಂಗ್ಲೆಂಡ್ನಲ್ಲಿ ಗಳಿಸಿದ ಆದಾಯಕ್ಕೆ ಮಾತ್ರ ಅವರು ಅಲ್ಲಿ ತೆರಿಗೆ ಪಾವತಿಸುತ್ತಿದ್ದರು. ಉಳಿದ ಆದಾಯಗಳಿಗೆ ಅಂತಾರಾಷ್ಟ್ರೀಯ ತೆರಿಗೆ ಪಾವತಿಸುತ್ತಿದ್ದರು. ಅಕ್ಷತಾ ಅವರ ತೆರಿಗೆ ಪಾವತಿಯ ಕುರಿತಂತೆ ಅವರ ಪತಿ ರಿಷಿ ಸುನಕ್ ಅವರನ್ನು ಗುರಿಯಾಗಿಸಿ ಪ್ರತಿಪಕ್ಷಗಳು ತೀವ್ರ ಟೀಕೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪತಿಯನ್ನು ಅನವಶ್ಯವಾಗಿ ಗುರಿಯಾಗಿಸುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಹೊಸ ಮಾದರಿಯಲ್ಲಿ ತೆರಿಗೆ ಪಾವತಿಯನ್ನು ತಕ್ಷಣವೇ ಪ್ರಾರಂಭವಾಗುತ್ತದೆ, ಈಗ ಮುಗಿದ 2021-22ರ ವರ್ಷಕ್ಕೂ ಅನ್ವಯಿಸುತ್ತದೆ ಎಂದಿದ್ದಾರೆ ಅಕ್ಷತಾ.
ಬ್ರಿಟನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಪರಿಗಣಿಸಲ್ಪಟ್ಟಿರುವ ರಿಷಿ ಸುನಕ್ ಅವರನ್ನು ಕಳೆದ ಕೆಲವು ಸಮಯದಿಂದ ತೆರಿಗೆ ಪಾವತಿ ಸೇರಿದಂತೆ ಕುಟುಂಬ ವಿಚಾರಗಳಿಗೆ ಪ್ರತಿಪಕ್ಷಗಳು ಗುರಿಯಾಗಿಸಿಕೊಂಡಿವೆ. ಇಂಗ್ಲೆಂಡ್ನ ‘ನಿವಾಸಿಯಲ್ಲ’ ಎಂಬ ಕಾರಣದಿಂದ ಭಾರತದಲ್ಲಿನ ಆದಾಯಕ್ಕೆ ತೆರಿಗೆ ತಪ್ಪಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಇದೀಗ ಈ ಗೊಂದಲಕ್ಕೆ ಅಕ್ಷತಾ ತೆರೆ ಎಳೆದಿದ್ದಾರೆ. ಈ ರೀತಿಯ ನಿಯಮವಿಲ್ಲದಿದ್ದರೂ ತಾವು ಹೊಸ ಮಾದರಿಯಲ್ಲಿ ತೆರಿಗೆ ಪಾವತಿಸುವುದಾಗಿ ಅಕ್ಷತಾ ಹೇಳಿದ್ದಾರೆ. ಅಕ್ಷತಾ ಹಂಚಿಕೊಂಡ ಟ್ವೀಟ್ ಅನ್ನು ರಿಷಿ ರಿಟ್ವೀಟ್ ಮಾಡಿದ್ದಾರೆ.
ಅಕ್ಷತಾ ಮೂರ್ತಿ ಟ್ವೀಟ್ ಇಲ್ಲಿದೆ:
10/ My decision to pay UK tax on all my worldwide income will not change the fact that India remains the country of my birth, citizenship, parents’ home and place of domicile.
But I love the UK too.
— Akshata Murty (@anmurty) April 9, 2022
ತಮ್ಮ ಟ್ವೀಟ್ಗಳಲ್ಲಿ ಬ್ರಿಟನ್ ಹಾಗೂ ಭಾರತದ ಕುರಿತ ಪ್ರೇಮವನ್ನೂ ಅಕ್ಷತಾ ಮೂರ್ತಿ ಅಭಿವ್ಯಕ್ತಪಡಿಸಿದ್ದಾರೆ. ‘‘ಯುಕೆಗೆ ಆಗಮಿಸಿದಲ್ಲಿಂದ ಲಂಡನ್ ಮತ್ತು ಉತ್ತರ ಯಾರ್ಕ್‌ಷೈರ್‌ನಲ್ಲಿರುವ ನಮ್ಮ ಮನೆಗೆ ಊಹಿಸಿದ್ದಕ್ಕಿಂತಲೂ ಅಧಿಕ ಸ್ವಾಗತ ಸಿಕ್ಕಿದೆ. ಇದು ಅದ್ಭುತ ದೇಶ. ಇತ್ತೀಚಿನ ದಿನಗಳಲ್ಲಿ, ಜನರು ನನ್ನ ತೆರಿಗೆ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಸ್ಪಷ್ಟವಾಗಿ ಹೇಳಬೇಕೆಂದರೆ, ನನ್ನ ಇಂಗ್ಲೆಂಡ್ನಲ್ಲಿನ ಆದಾಯದ ಮೇಲೆ ಈ ದೇಶದಲ್ಲಿ ತೆರಿಗೆಯನ್ನು ಪಾವತಿಸಿದ್ದೇನೆ ಮತ್ತು ನನ್ನ ಅಂತರರಾಷ್ಟ್ರೀಯ ಆದಾಯದ ಮೇಲೆ ಅಂತರಾಷ್ಟ್ರೀಯ ತೆರಿಗೆಯನ್ನು ಪಾವತಿಸಿದ್ದೇನೆ. ಈ ವ್ಯವಸ್ಥೆಯು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಯುಕೆ ಮೂಲದವರಲ್ಲದವರಿಗೆ ಈ ತೆರಿಗೆ ವಿಧಿಸಲಾಗುತ್ತದೆ ಮತ್ತು ಹಲವರು ಇದೇ ವಿಧಾನದಲ್ಲಿ ತೆರಿಗೆ ಪಾವತಿಸುತ್ತಾರೆ. ಆದರೆ ರಿಷಿ ಚಾನ್ಸಲರ್ ಆಗಿರುವುದರಿಂದ ಈ ಆರೋಪಗಳು ಬಂದಿವೆ. ಇದಕ್ಕೆ ಆಸ್ಪದ ನೀಡದಿರಲು ಹೊಸ ಮಾದರಿಯಲ್ಲಿ ತೆರಿಗೆ ಪಾವತಿಸಲಾಗುತ್ತದೆ’’ ಎಂದು ಬರೆದಿದ್ದಾರೆ.
ರಿಷಿ ಮತ್ತು ತಾವು ಭೇಟಿಯಾದಾಗ 24 ವರ್ಷ. ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿಗಳಾದ ನಾವು ಭವಿಷ್ಯದಲ್ಲಿ ಎಲ್ಲಿ ತಲುಪಬಹುದು ಎನ್ನುವ ಯೋಚನೆ ಇರಲಿಲ್ಲ. ಅವರಿಗೆ ರಾಜಕೀಯವನ್ನು ಬಿಟ್ಟುಬಿಟ್ಟಿದ್ದೇನೆ ಎಂದಿದ್ದಾರೆ ಅಕ್ಷತಾ. ರಿಷಿ ತಮಗೆ ಭಾರತದ ಪೌರತ್ವ ತ್ಯಜಿಸಲು ಹೇಳಲಿಲ್ಲ ಎಂದಿರುವ ಅಕ್ಷತಾ, ರಿಷಿ ತಮ್ಮನ್ನು ಭಾರತದ ಪ್ರಜೆಯಾಗಿ ಗೌರವಿಸುತ್ತಾರೆ ಮತ್ತು ಅದರ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದಿದ್ದಾರೆ.
ಇನ್ಫೋಸಿಸ್ನಲ್ಲಿನ ಷೇರುಗಳ ಬಗ್ಗೆ ಪ್ರಸ್ತಾಪಿಸಿರುವ ಅಕ್ಷತಾ, ಅದು ಹಣಕಾಸಿನ ಹೂಡಿಕೆ ಮಾತ್ರವಲ್ಲ, ಅದು ತಮ್ಮ ತಂದೆಯ ಕೆಲಸಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಪ್ರಪಂಚದಲ್ಲಿನ ಎಲ್ಲಾ ಮೂಲದ ಆದಾಯಕ್ಕೆ ಯುಕೆಯಲ್ಲಿ ತೆರಿಗೆ ಪಾವತಿಸುವುದು- ಭಾರತದ ಮೇಲಿನ ಪ್ರೀತಿ, ಪೌರತ್ವ, ಪೋಷಕರ ಮನೆ, ವಾಸಸ್ಥಳದ ದೇಶವಾಗಿ ಉಳಿದಿದೆ ಎನ್ನುವ ಅಂಶವನ್ನು ಬದಲಾಯಿಸುವುದಿಲ್ಲ. ಆದರೂ ನಾನು ಯುಕೆಯನ್ನು ಪ್ರೀತಿಸುತ್ತೇನೆ. ನಾನು ಇಲ್ಲಿಯೇ ಉದ್ಯಮ ನಡೆಸುತ್ತಿದ್ದೇನೆ. ನನ್ನ ಮಕ್ಕಳು ಬ್ರಿಟೀಷರು. ಅವರು ಇಲ್ಲಿನವರಾಗಿಯೇ ಬೆಳೆಯುತ್ತಿದ್ದಾರೆ ಎಂದು ಬರೆದಿದ್ದಾರೆ ಅಕ್ಷತಾ ಮೂರ್ತಿ. ಈ ನಡುವೆ ರಿಷಿ ಸುನಕ್ ಅವರ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ಮುಂದುವರೆಸಿದ್ದು, ಅವರಲ್ಲಿ ಪಾರದರ್ಶಕತೆ ಇಲ್ಲ ಎಂದಿವೆ.
ಇದನ್ನೂ ಓದಿ: ಬೆಂಗಳೂರಿನ ಅಕ್ಷತಾ ಮೂರ್ತಿ ಬ್ರಿಟನ್ನ ಎಲಿಜಬೆತ್ ರಾಣಿಗಿಂತ ಶ್ರೀಮಂತೆ!
Published On - 12:22 pm, Sun, 10 April 22