India Pakistan: ಪಾಕಿಸ್ತಾನದ ರಾಜಕೀಯ ವಿದ್ಯಮಾನ; ಭಾರತದ ಮೇಲೇನು ಪರಿಣಾಮ

ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಭಾರತ ಮತ್ತು ಇತರ ದೇಶಗಳ ಮೇಲೆ ಬೀರಬಹುದಾದ ಪರಿಣಾಮಗಳ ವಿಶ್ಲೇಷಣೆ ಇಲ್ಲಿದೆ.

India Pakistan: ಪಾಕಿಸ್ತಾನದ ರಾಜಕೀಯ ವಿದ್ಯಮಾನ; ಭಾರತದ ಮೇಲೇನು ಪರಿಣಾಮ
ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 10, 2022 | 10:46 AM

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ ಪ್ರಧಾನಿ ಹುದ್ದೆಯಿಂದ ಪದಚ್ಯುತರಾಗಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ನಡೆದ ಹಲವು ನಾಟಕೀಯ ಬೆಳವಣಿಗೆಗಳು ದೀರ್ಘಾವಧಿಗೆ ಪರಿಣಾಮ ಬೀರಲಿವೆ. ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಸಂಭವಿಸುವ ಬೆಳವಣಿಗೆಗಳು ಸಹಜವಾಗಿಯೇ ಇತರ ರಾಷ್ಟ್ರಗಳ ಮೇಲೆಯೂ ಪರಿಣಾಮ ಬೀರುತ್ತವೆ. 22 ಕೋಟಿ ಜನಸಂಖ್ಯೆಯ ಅಣ್ವಸ್ತ್ರ ಸಜ್ಜಿತ ದೇಶವು ಅಫ್ಘಾನಿಸ್ತಾನ ಮತ್ತು ಚೀನಾದ ಆಡಳಿತಗಳೊಂದಿಗೆ ರಾಜತಾಂತ್ರಿಕ ಮೈತ್ರಿ ಹೊಂದಿದೆ. ಇರಾನ್​ನೊಂದಿಗೆ ಅಷ್ಟಕ್ಕಷ್ಟೇ ಎಂಬಂತೆ ಪಾಕ್ ಸಂಬಂಧ ಇದೆ. ಆದರೆ ಭಾರತದೊಂದಿಗೆ ಮಾತ್ರ ಅಲ್ಲಿನ ಅಧಿಕಾರಸ್ಥರ ದ್ವೇಷ ಯಥಾಸ್ಥಿತಿ ಮುಂದುವರಿಯುತ್ತದೆ. ಹೀಗಾಗಿಯೇ ಭಾರತವು ಪಾಕಿಸ್ತಾನದ ಎಲ್ಲ ಬೆಳವಣಿಗೆಗಳನ್ನೂ ಕುತೂಹಲದಿಂದ ಗಮನಿಸುವ ಜೊತೆಗೆ ಸಂಭವನೀಯ ಪರಿಣಾಮಗಳನ್ನು ವಿಶ್ಲೇಷಿಸುತ್ತಿರುತ್ತದೆ. 2018ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಇಮ್ರಾನ್ ಖಾನ್ ಅಮೆರಿಕ ವಿರೋಧಿ ಹೇಳಿಕೆಗಳನ್ನು ಒಂದಾದ ಮೇಲೆ ಒಂದರಂತೆ ನೀಡುತ್ತಲೇ ಹೋದರು. ಚೀನಾದೊಂದಿಗೆ ಇನ್ನಷ್ಟು ಮೈತ್ರಿ ಮಾಡಿಕೊಳ್ಳುವ ಉತ್ಸಾಹ ತೋರಿಸಿದರು. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ದಿನವೇ ಇಮ್ರಾನ್ ಖಾನ್ ರಷ್ಯಾ ರಾಜಧಾನಿ ಮಾಸ್ಕೊದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಒಟ್ಟಾರೆ ವಿದೇಶಾಂಗ ವ್ಯವಹಾರಗಳ ರೀತಿ ಮುಂದಿನ ದಿನಗಳಲ್ಲಿ ಬದಲಾಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಮಿಲಿಟರಿಯ ಬಿಗಿಮುಷ್ಠಿಯಲ್ಲಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಇಮ್ರಾನ್​ ಖಾನ್​ರ ನಡೆಯಿಂದ ಅಮೆರಿಕ ಸಂಬಂಧ ಹದಗೆಡುವುದಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ.

ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಭಾರತ ಮತ್ತು ಇತರ ದೇಶಗಳ ಮೇಲೆ ಬೀರಬಹುದಾದ ಪರಿಣಾಮಗಳ ವಿಶ್ಲೇಷಣೆ ಇಲ್ಲಿದೆ.

ಭಾರತ: ಇಮ್ರಾನ್ ಹೋಗಿದ್ದೇ ಒಳ್ಳೇದಾಯ್ತು

1947ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸುವುದರೊಂದಿಗೆ ಒಂದಾಗಿದ್ದ ದೇಶವೂ ವಿಭಜನೆಯಾಗಿ ಪಾಕಿಸ್ತಾನ ಸೃಷ್ಟಿಯಾಯಿತು. ಅಲ್ಲಿಂದ ಇಲ್ಲಿಯವರೆಗೂ ಎರಡೂ ದೇಶಗಳು ಮೂರು ಪೂರ್ಣ ಪ್ರಮಾಣ ಯುದ್ಧಗಳಲ್ಲಿ ಸೆಣೆಸಿವೆ. ಈ ಪೈಕಿ ಎರಡು ಯುದ್ಧಗಳು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಯಲ್ಲಿ ನಡೆದಿದೆ. ಗಡಿ ನಿಗದಿ, ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳಲ್ಲಿ ಎರಡೂ ದೇಶಗಳ ನಡುವೆ ಸಾಕಷ್ಟು ಗೊಂದಲಗಳಿವೆ. ರಾಜತಾಂತ್ರಿಕ ಸಂಬಂಧವೂ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದರು. ಆದರೆ ಭಾರತದ ಆಂತರಿಕ ವಿದ್ಯಮಾನಗಳ ಬಗ್ಗೆ ಹಲವು ಬಾರಿ ನಾಲಿಗೆ ಹರಿಬಿಟ್ಟಿದ್ದರು. ಇದು ಎರಡೂ ದೇಶಗಳ ನಡುವಣ ವಿಶ್ವಾಸದ ಮೇಲೆ ಪರಿಣಾಮ ಬೀರಿತು. ಮಾತುಕತೆ ನಡೆಸಲು ಪೂರಕವಾದ ವಾತಾವರಣ ನಿರ್ಮಿಸಲು ಸರಿಯಾದ ಪ್ರಯತ್ನಗಳೇ ನಡೆಯಲಿಲ್ಲ. ಪಾಕಿಸ್ತಾನದ ವಿದೇಶಾಂಗ ನೀತಿ ಮತ್ತು ರಕ್ಷಣಾ ವಿದ್ಯಮಾನಗಳನ್ನು ಅಲ್ಲಿನ ಮಿಲಿಟರಿಯೇ ನಿರ್ವಹಿಸುವ ಕಾರಣ ಇಮ್ರಾನ್ ಪದಚ್ಯುತಿಯಿಂದ ಭಾರತದ ವಿಚಾರದಲ್ಲಿ ಪಾಕಿಸ್ತಾನದ ನಿಲುವು ಬದಲಾಗುವುದು ಅಥವಾ ಇತರ ಯಾವುದೇ ಪ್ರಮುಖ ಬೆಳವಣಿಗೆ ನಡೆಯುವ ಸಾಧ್ಯತೆ ಕಡಿಮೆ.

ಆದರೆ ಪಾಕಿಸ್ತಾನದ ಮಿಲಿಟರಿ ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗೆ ಶಾಂತಿ ಸ್ಥಾಪನೆಗೆ ಒಲವು ತೋರುತ್ತಿದೆ. ಮಿಲಿಟರಿಯೊಂದಿಗೆ ಸಂಘರ್ಷ ಮಾಡಿಕೊಂಡಿದ್ದ ಇಮ್ರಾನ್ ಪದಚ್ಯುತಿಯಿಂದ ಭಾರತ-ಪಾಕ್ ಸಂಬಂಧ ಸುಧಾರಣೆಗೆ ಅನುಕೂಲವಾಗಬಹುದು ಎಂದು ರಾಜಕೀಯ ವಿಶ್ಲೇಷಕ ಕರಣ್ ಥಾಪರ್ ಹೇಳುತ್ತಾರೆ. ‘ಭಾರತವು ಒಪ್ಪಿದರೆ ಕಾಶ್ಮೀರ ವಿಚಾರದಲ್ಲಿ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ’ ಎಂದು ಪಾಕಿಸ್ತಾನದ ಸೇನಾಧಿಕಾರಿ ಜನರಲ್ ಖಮಾರ್ ಜಾವೆದ್ ಬಾಜ್ವಾ ಹೇಳಿದ್ದರು. ಹೊಸದಾಗಿ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರ ಈ ಆಶಯವನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಅಫ್ಘಾನಿಸ್ತಾನ: ತಾಲೀಬಾನ್​ಗೆ ಕಷ್ಟ

ಪಾಕಿಸ್ತಾನದ ಮಿಲಿಟರಿ ಇಂಟೆಲಿಜೆನ್ಸ್ ಏಜೆನ್ಸಿ (ಐಎಸ್​ಐ) ಮತ್ತು ಇಸ್ಲಾಮಿ ತೀವ್ರವಾದಿಗಳಾದ ತಾಲಿಬಾನ್ ಆಡಳಿತಗಾರರ ನಡುವಣ ಸಂಬಂಧ ಈಚಿನ ದಿನಗಳಲ್ಲಿ ಹಳಸಿದೆ. ಕಾಬೂಲ್ ಗೆದ್ದು ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡರೂ ಅವರ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟು ಶಮನಗೊಂಡಿಲ್ಲ. ವಿಶ್ವದಲ್ಲಿ ಅಫ್ಘಾನಿಸ್ತಾನವು ಅಕ್ಷರಶಃ ಏಕಾಂಗಿಯಾಗಿದೆ. ಕತಾರ್ ಹೊರತುಪಡಿಸಿದರೆ ಬೇರೆ ಯಾವುದೇ ದೇಶದಿಂದ ಅಫ್ಘಾನಿಸ್ತಾನಕ್ಕೆ ನೆರವು ಸಿಗುತ್ತಿಲ್ಲ. ಪಾಕಿಸ್ತಾನವನ್ನೇ ನೆಲೆ ಮಾಡಿಕೊಂಡಿದ್ದ ತಾಲಿಬಾನಿಗಳು ಇದೀಗ ಪಾಕ್ ಆಡಳಿತವು ತಮ್ಮಿಂದ ದೂರ ಸರಿಯುತ್ತಿರುವುದನ್ನು ಗಮನಿಸಿ ಸಿಟ್ಟಿಗೆದ್ದಿದ್ದಾರೆ. ಎರಡೂ ದೇಶಗಳ ಗಡಿಯಲ್ಲಿ ಆಗಾಗ ಸಂಘರ್ಷಗಳೂ ವರದಿಯಾಗುತ್ತಿದ್ದು ಸಾವುನೋವು ಸಾಮಾನ್ಯ ಎಂಬಂತೆ ಆಗಿದೆ. ಪಾಕಿಸ್ತಾನದಲ್ಲಿ ಇಸ್ಲಾಮ್ ತೀವ್ರವಾದಿಗಳ ಉಪಟಳ ಹೆಚ್ಚಾಗುತ್ತಿರುವುದರಿಂದ, ಅಫ್ಘಾನಿಸ್ತಾನದಿಂದ ಒಳನುಸುಳುವಿಕೆ ಕಡಿಮೆಯಾಗಬೇಕು ಎಂದು ಪಾಕಿಸ್ತಾನವು ಆಗ್ರಹಿಸುತ್ತಿದೆ. ಪ್ರಧಾನಿಯಾಗಿದ್ದಾಗ ಇಮ್ರಾನ್ ಖಾನ್ ತಾಲಿಬಾನ್ ಆಡಳಿತವನ್ನು ಹೆಚ್ಚು ಟೀಕಿಸಿರಲಿಲ್ಲ.

ಚೀನಾ: ನಂಟು ಬಿಗಿಯಾದೀತು ಅಮೆರಿಕದಿಂದ ದೂರವಾಗುತ್ತಿದ್ದ ಪಾಕಿಸ್ತಾನಕ್ಕೆ ಆಸರೆಯಾಗಿದ್ದ ಚೀನಾ. ಇಮ್ರಾನ್ ಖಾನ್ ಸಹ ಹಲವು ಬಾರಿ ಚೀನಾವನ್ನು ಹೊಗಳಿದಿದ್ದರು. 60 ಶತಕೋಟಿ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (China-Pakistan Economic Corridor – CPEC) ಹೆಸರಿನ ಮಹತ್ವದ ಯೋಜನೆಯೊಂದು ಪಾಕಿಸ್ತಾನದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಗೆ ಒತ್ತಾಸೆಯಾಗಿ ಇದ್ದವರು ಸಂಭಾವ್ಯ ಪ್ರಧಾನಿ ಶೆಹಬಾಜ್ ಷರೀಫ್. ಪಂಜಾಬ್ ಪ್ರಾಂತ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಾಗಲೂ ಹಲವು ಬಾರಿ ಇವರು ಚೀನಾದೊಂದಿಗೆ ನೇರವಾಗಿ ಒಪ್ಪಂದಗಳನ್ನು ಮಾಡಿಕೊಂಡು,, ಯೋಜನೆಗಳನ್ನು ತಂದಿದ್ದರು. ಇವರು ಪಾಕಿಸ್ತಾನದ ಪ್ರಧಾನಿಯಾದರೆ ಪಾಕಿಸ್ತಾನ-ಚೀನಾ ನಂಟು ಮತ್ತಷ್ಟು ಬಿಗಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಪಾಲಿಗೆ ಇದು ಅಷ್ಟು ಒಳ್ಳೆಯ ಬೆಳವಣಿಗೆ ಅಲ್ಲ.

ಅಮೆರಿಕ: ಮುಂದುವರಿದೀತು ನಿರ್ಲಕ್ಷ್ಯ ಉಕ್ರೇನ್-ರಷ್ಯಾ ಸಂಘರ್ಷ ನಿರ್ವಹಣೆಯಲ್ಲಿ ಸಿಲುಕಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪಾಕಿಸ್ತಾನದ ರಾಜಕೀಯ ಬೆಳವಣಿಗೆಗೆ ಹೆಚ್ಚು ಮಹತ್ವ ಕೊಡುವುದು ಅನುಮಾನ. ಆದರೆ ರಷ್ಯಾ ಕಾರಣದಿಂದಾಗಿ ಭಾರತ ಮತ್ತು ಅಮೆರಿಕ ಪರಸ್ಪರ ದೂರ ಆಗುತ್ತಿವೆ. ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮತ್ತು ತನ್ನ ತಾಳಕ್ಕೆ ತಕ್ಕಂತೆ ಭಾರತ ಕುಣಿಯುವಂತೆ ಮಾಡುವುದು ಅಮೆರಿಕದ ಸದ್ಯದ ಆದ್ಯತೆಯಾಗಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಇದ್ದಷ್ಟು ವರ್ಷವೂ ಪಾಕಿಸ್ತಾನದ ಬಗ್ಗೆ ಅಮೆರಿಕ ಮಹತ್ವ ಕೊಡುತ್ತಿತ್ತು. ಆದರೆ ಇದೀಗ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲೇಬೇಕು ಎನ್ನುವ ಯಾವುದೇ ಒತ್ತಡ ಅಮೆರಿಕ ಮೇಲಿಲ್ಲ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ದಿನವೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಷ್ಯಾಗೆ ಭೇಟಿ ನೀಡಿದ್ದು ಸಹ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಭೇಟಿಯ ನಂತರ ಎರಡೂ ನಡುವಣ ಸಂಬಂಧ ಹಳಸಿದೆ. ಇದೀಗ ಇಮ್ರಾನ್ ಖಾನ್ ತಮ್ಮ ಪದಚ್ಯುತಿಗೆ ಅಮೆರಿಕ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಈ ಹೇಳಿಕೆಗೆ ಪಾಕಿಸ್ತಾನದ ಮಿಲಿಟರಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬೆಳವಣಿಗೆಯನ್ನು ವಿಶ್ಲೇಷಿಸುವುದಾದರೆ ಮುಂದಿನ ದಿನಗಳಲ್ಲಿ ಅಮೆರಿಕದೊಂದಿಗೆ ಸಂಬಂಧ ಸುಧಾರಣೆಗೆ ಪಾಕಿಸ್ತಾನ ಯತ್ನಿಸಲಿದೆ, ಆದರೆ ಪಾಕ್​ನತ್ತ ಅಮೆರಿಕದ ನಿರ್ಲಕ್ಷ್ಯ ಧೋರಣೆ ಮುಂದುವರಿಯಲಿದೆ ಎಂದು ಹೇಳಬಹುದು.

ಇದನ್ನೂ ಓದಿ: ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿದ್ದು ನಾಲಿಗೆ ಹರಿಬಿಟ್ಟ ಇಮ್ರಾನ್ ಖಾನ್: ತುಟಿದ ಜಾರಿದ ಈ 8 ಮಾತುಗಳಿಂದ ಸೃಷ್ಟಿಯಾಗಿತ್ತು ವಿವಾದ

ಇದನ್ನೂ ಓದಿ: Key Players: ಕ್ಲೀನ್ ಬೋಲ್ಡ್; ಇಮ್ರಾನ್ ಖಾನ್​ ಪದಚ್ಯುತಿಗೆ ಪ್ಲಾನ್ ಮಾಡಿದ ಪಾಕ್ ರಾಜಕಾರಣಿಗಳಿವರು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ