ವಿಚಾರಾಣಾಧೀನ ಕೈದಿಯಾಗಿದ್ದ ಅಮೆರಿಕದ ಗರ್ಭಿಣಿ ಮಹಿಳೆಯೊಬ್ಬಳನ್ನು ಪೋಲಿಸರು ಅಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಸ್ಟಾರ್ ಬಕ್ಸ್ (Starbucks) ಎಂಬಲ್ಲಿ ವಾಹನವನ್ನು ನಿಲ್ಲಿಸಿದ್ದು ಗರ್ಭಪಾತದಲ್ಲಿ (miscarriage) ಪರ್ಯಾವಸನಗೊಂಡ ಕಾರಣ ಆಕೆ ಪರಿಹಾರ ರೂಪದಲ್ಲಿ ರೂ. 3.86 ಕೋಟಿ ಪಡೆದಿದ್ದಾಳೆ ಎಂದು ಲಾಸ್ ಏಂಜಲೀಸ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. 2016ರ ರಲ್ಲಿ ಸದರಿ ಘಟನೆ ನಡೆದಾಗ ಸಾಂಡ್ರಾ ಕ್ವಿನೋನ್ (Sandra Quinones) ಹೆಸರಿನ ಮಹಿಳೆಯು ಆರೇಂಜ್ ಕೌಂಟಿ ಜೈಲಿನಲ್ಲಿದ್ದಳು ಮತ್ತು ಗರ್ಭಿಣಿಯಾಗಿದ್ದಳು ಎಂದು ಪತ್ರಿಕೆ ಹೇಳಿದೆ. ಅಗ 28-ವರ್ಷ-ವಯಸ್ಸಿನವಳಾಗಿದ್ದ ಸಾಂಡ್ರಾ ತನಗೆ ಸ್ರಾವ ಶುರುವಾದಾಗ ಅಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಪೊಲೀಸರಿಗೆ ತಿಳಿಸಿದ್ದಾಳೆ.
ಆದರೆ ಆಸ್ಪತ್ರೆ ತಲುಪುವುದು ತಡವಾದ ಕಾರಣ ಅವಳಿಗೆ ಗರ್ಭಪಾತವಾಗಿದೆ.
ಈಗಾಗಲೇ ಜೈಲಿನಿಂದ ಹೊರಬಂದಿರುವ ಸಾಂಡ್ರಾ ತಾನು ಆಸ್ಪತ್ರೆ ತಲುಪುವುದು ಎರಡು ಗಂಟೆ ತಡವಾಯಿತು, ಅದಕ್ಕೆ ಪೊಲೀಸರೇ ಕಾರಣ ಎಂದು ಮೊಕದ್ದಮೆಯೊಂದನ್ನು ಹೂಡಿದ್ದಳು.
ಆರೇಂಜ್ ಕೌಂಟಿ ಬೋರ್ಡ್ನ ಮೇಲ್ವಿಚಾರಕರು ಮಂಗಳವಾರದಂದು ಈಗ 34-ವರ್ಷ ವಯಸ್ಸಿನವಳಾಗಿರುವ ಸಾಂಡ್ರಾಗೆ ಆರಂಕಿ ಮೊತ್ತದ ಪರಿಹಾರ ನೀಡಲು ಸಮ್ಮತಿಸುದೆ ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಅದು ಅಂತಿಮಗೊಳ್ಳುವ ಮೊದಲು ಸಾಂಡ್ರಾ ನಿಗದಿಪಡಿಸಿರುವ ಪರಿಹಾರ ಮೊತ್ತಕ್ಕೆ ತನ್ನ ಅಂಗೀಕಾರ ಸೂಚಿಸಬೇಕಾಗುತ್ತದೆ ಎಂದು ಆರೇಂಜ್ ಕೌಂಟಿ ರಿಜಿಸ್ಟರ್ ಹೇಳಿದೆ.
ಸಾಂಡ್ರಾ ಅವರ ವಕೀಲ ರಿಚರ್ಡ್ ಹರ್ಮನ್ ಅವರು ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಪ್ರಕಾರ ಆಕೆ ವಿಚಲಿತಳಾಗಿದ್ದಳು, ನಿರಾಶ್ರಿತಳಾಗಿದ್ದಳು ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು, ಆದಾಗ್ಯೂ ಎದೆಗುಂದದೆ ಕಾನೂನು ಹೋರಾಟ ನಡೆಸಿದಳು, ಎಂದಿದ್ದಾರೆ.
ತನ್ನ ಮನವಿಯಲ್ಲಿ ಆಕೆ ಪೊಲೀಸರು ಅಂಬ್ಯುಲೆನ್ಸ್ ಗೆ ಕರೆ ಮಾಡುವ ಯೋಚನೆಯನ್ನೇ ಮಾಡಲಿಲ್ಲ ಮತ್ತು ಸ್ಟಾರ್ ಬಕ್ಸ್ ನಲ್ಲಿ ನನ್ನನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿ ನನಗೆ ವೈದ್ಯಕೀಯ ನೆರವು ಸಿಗದಂತೆ ಮಾಡಿದರು ಎಂದು ಹೇಳಿದ್ದಾಳೆ.
ಹಾಗೆ ನೋಡಿದರೆ, ಅಕ್ಟೋಬರ್ 2020 ರಲ್ಲಿ ಫೆಡರಲ್ ಕೋರ್ಟೊಂದು ಸಾಂಡ್ರಾಳ ಮೊಕದ್ದಮೆಯನ್ನು ತಿರಸ್ಕರಿಸಿತ್ತು, ಆದರೆ ಕಳೆದ ವರ್ಷ ಆಕೆ ಮೇಲ್ಮನವಿ ಸಲ್ಲಿಸಿದ್ದಳು.
ಸಾಂಡ್ರಾಳನ್ನು ಪೊಲೀಸರು ಆಂತಿಮವಾಗಿ ಆಸ್ಪತ್ರೆ ತಲುಪಿಸಿದರಾದರೂ ಆಕೆಯ ಭ್ರೂಣ ಬದುಕುಳಿಯಲಿಲ್ಲ ಎಂದು ಆಕೆಯ ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ನ್ಯೂ ಯಾರ್ಕ್ ಪೋಸ್ಟ್ ವರದಿ ಮಾಡಿದೆ. ಗರ್ಭಪಾತವಾದ ಬಳಿಕ ಸಾಂಡ್ರಾ ವಿಸ್ತೃತ ಅವಧಿಯನ್ನು ಜೈಲಿನಲ್ಲಿ ಕಳೆದಳೆಂದು ಆಕೆಯ ಲಾಯರ್ ಹೇಳಿದ್ದಾರೆ.