ಉಕ್ರೇನ್ ಗಡಿಯಾಚೆಯಿದ್ದ ಅಮ್ಮನ ಬಳಿ ಆಕೆಯ ಇಬ್ಬರು ಮಕ್ಕಳನ್ನು ತಲುಪಿಸಿದ್ದು ಕೂಡ ಎರಡು ಮಕ್ಕಳ ಇನ್ನೊಬ್ಬ ತಾಯಿ!!
ಎರಡೂ ಮಕ್ಕಳ ಕೈ ಹಿಡಿದು ಅವರು ಗಡಿದಾಟಿದ್ದಾರೆ. ಹಂಗರಿಯ ಗಡಿಪ್ರದೇಶ ಬೆರೆಗ್ಸುವಾನಿ ಬಳಿ ಅವರು ಮಕ್ಕಳ ಜೊತೆ ಕಾಯುತ್ತಾ ನಿಂತರೂ ಅವರಮ್ಮನ ಸುಳಿವಿಲ್ಲ. ನಿರಾಶ್ರಿತರಿಗಾಗಿ ಹಾಕಿರುವ ಟೆಂಟ್ ಗಳ ಬಳಿಯಿದ್ದ ಒಂದು ಕಲ್ಲು ಬೆಂಚಿನ ಮೇಲೆ ಕೂತು ಅವರು ಕಾಯುವುದನ್ನು ಮುಂದುವರೆಸಿದ್ದಾರೆ.
ಬೆರೆಗ್ಸುವಾನಿ (ಹಂಗೇರಿ): ಉಕ್ರೇನ್ ಮೇಲೆ ರಷ್ಯಾ ಘೋಷಿಸಿರುವ ಯುದ್ಧ (Russia Ukraine War) ಕೊನೆಗೊಳ್ಳುವವರೆಗೆ ಮತ್ತು ನಂತರವೂ ಮನಮಿಡಿಯುವ ಇಂಥ ಹಲವಾರು ಕತೆಗಳು ನಮಗೆ ಸಿಗಲಿವೆ. ಈ ಕತೆ 58-ವರ್ಷ ವಯಸ್ಸಿನ ಉಕ್ರೇನಿಯನ್ ಮಹಿಳೆ ನತಾಲಿಯಾ ಅಬ್ಲಿಯೇವಾ ಹೆಸರಿನ ಮಹಿಳೆಯದ್ದು. ಈಕೆ ಒಬ್ಬ ಅಪರಿಚಿತನ ಮಕ್ಕಳನ್ನು ಉಕ್ರೇನ್ ಗಡಿಯಾಚೆ ಮಕ್ಕಳಿಗಾಗಿ ಕಾಯುತ್ತಾ ನಿಂತಿದ್ದ, ತಾನೂ ಯಾವತ್ತೂ ನೋಡಿರದ ಅವರಮ್ಮನಿಗೆ ಒಪ್ಪಿಸಬೇಕಿತ್ತು. ಮಕ್ಕಳನ್ನು ಆಕೆಗೆ ಒಪ್ಪಿಸಿದ 38-ವರ್ಷ ವಯಸ್ಸಿನ ವ್ಯಕ್ತಿ ಖಂಡಿತವಾಗಿಯೂ ಅಬ್ಲಿಯೇವಾ ಅವರ ಸ್ವಂತ ಊರಾದ ಕಮಿಯನೇಟ್ಸ್-ಪೊಡಿಲ್ಸ್ಕಿವನೇ, ಅದರೆ ಈ ಹಿಂದೆ ಅವರು ಭೇಟಿಯಾಗಿರಲಿಲ್ಲವಾದ್ದರಿಂದ ಆಕೆಗೆ ಅಪರಿಚಿತನೇ.
ಉಕ್ರೇನಲ್ಲಿ ಯುದ್ಧ ನಡೆದಿರುವುದರಿಂದ ಮಕ್ಕಳ ಸುರಕ್ಷತೆಗಾಗಿ ಈ ವ್ಯಕ್ತಿ ನೌಕರಿ ನಿಮಿತ್ತ ಇಟಲಿಯಲ್ಲಿರುವ ಹೆಂಡತಿ ಬಳಿ ಕಳಿಸಲು ನಿರ್ಧಾರಕ್ಕೆ ಬಂದು ಹಂಗರಿ ದೇಶವಿರುವ ಗಡಿಭಾಗಕ್ಕೆ ಬಂದಿದ್ದಾನೆ. ಆದರೆ ಅವನು ಗಡಿ ದಾಟಿ ಹೋಗುವಂತಿಲ್ಲ. 18-60 ವರ್ಷ ವಯಸ್ಸಿನ ಉಕ್ರೇನಿಯನ್ ಪುರುಷರು ದೇಶ ಬಿಟ್ಟು ಹೋಗಕೂಡದು ಅಂತ ಅಲ್ಲಿನ ಸರ್ಕಾರ ಫರ್ಮಾನು ಹೊರಡಿಸಿದೆ. ಸಂದರ್ಭ ಎದುರಾದರೆ ನಾಗರಿಕರು ಸಹ ಯುದ್ಧಕ್ಕೆ ಸನ್ನದ್ಧರಾಗಿರುವತೆ ಅವರೆಲ್ಲರಿಗೆ ತಿಳಿಸಲಾಗಿದೆ.
ಅವನು ತನ್ನ ಹೆಂಡತಿಗೆ ಹಂಗರಿ ಗಡಿಭಾಗಕ್ಕೆ ಬರುವಂತೆ ತಿಳಿಸಿದ್ದಾನೆ. ಆಕೆ ಎಲ್ಲಿಯವರೆಗೆ ಬಂದಿದ್ದಾಳೆ ಅಂತ ಅವನಿಗೆ ಗೊತ್ತಿಲ್ಲ. ಗಡಿ ಅಂದರೆ ಅದೇನು ಒಂದು ಗೆರೆ ಅಲ್ಲವಲ್ಲ. ಗಡಿ ದಾಟಿ ಇನ್ನೊಂದು ದೇಶಕ್ಕೆ ಹೋಗಬೇಕಾದರೆ ಕೆಲ ಕಿಲೋಮೀಟರ್ ಗಳಷ್ಟು ದೂರ ನಡೆದು ಹೋಗಬೇಕು. ಆದರೆ ಇವನು ಉಕ್ರೇನ್ ಗಡಿಭಾಗಲ್ಲಿ ನಿಂತುಕೊಳ್ಳಬೇಕು.
ಆಗಲೇ ಅವನಿಗೆ ಅಲ್ಲಿ ನತಾಲಿಯಾ ಅಬ್ಲಿಯೇವಾ ಕಾಣಿಸಿದ್ದಾರೆ. ಅವರಿಗೆ ತನ್ನ ವೃತ್ತಾಂತವನ್ನು ಹೇಳಿಕೊಂಡು ಹೇಗಾದರೂ ಮಾಡಿ ತನ್ನಿಬ್ಬರು ಮಕ್ಕಳನ್ನು ಹಂಗರಿ ಬಾರ್ಡರ್ಗೆ ಬರುವ ತನ್ನ ಹೆಂಡತಿಗೆ ತಲುಪಿಸಿ ಅಂತ ಕೇಳಿಕೊಂಡು, ಇಬ್ಬರ ಮಕ್ಕಳ (ಒಂದು ಗಂಡು ಮತ್ತೊಂದು ಹೆಣ್ಣು) ಕೈಗಳನ್ನು ಮತ್ತು ಒಂದು ಚೀಟಿಯಲ್ಲಿ ಪತ್ನಿಯ ಫೋನ್ ನಂಬರನ್ನು ಬರೆದು ಅವರ ಕೈಗಳಲ್ಲಿರಿಸಿ, ತಾನು ಬಂದ ದಿಕ್ಕಿನೆಡೆ ದರದರ ನಡೆದು ಹೋಗಿದ್ದಾನೆ.
ಒಬ್ಬ ಅಪರಿಚಿತ ಮಹಿಳಿಗೆ ತನ್ನಿಬ್ಬರು ಮಕ್ಕಳನ್ನು ಒಪ್ಪಿಸಿ ಹೋಗುವಾಗ ಅವನಿಗೆ ಏನು ಅನ್ನಿಸಿದೆಯೋ? ಏನಾದರೂ ಅಗಲಿ ಯುದ್ಧ ನಡೆಯುತ್ತಿರುವ ಉಕ್ರೇನಲ್ಲಿ ಅವರಿರುವುದು ಬೇಡ ಅಂತ ಅವನು ಮತ್ತು ಅವನ ಹೆಂಡತಿ ನಿಶ್ಚಯಿಸಿಕೊಂಡಿದ್ದರು ಅಂತ ಕಾಣುತ್ತೆ.
ನತಾಲಿಯಾ ಅಬ್ಲಿಯೇವಾ ಅವರ ತಳಮಳವನ್ನೂ ನಾವು ತಿಳಿದುಕೊಳ್ಳಬೇಕು, ಅವರಿಗೂ ಇಬ್ಬರು ಬೆಳೆದ ಮಕ್ಕಳಿದ್ದು ಒಬ್ಬ ಪೊಲೀಸ್ ಸೇವೆಯಲ್ಲಿದ್ದರೆ ಮತ್ತೊಬ್ಬ ನರ್ಸ್ ಆಗಿದ್ದಾನೆ. ಅವರು ಸಹ ಉಕ್ರೇನ್ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ದೇಶ ಬಿಟ್ಟು ಆಚೆ ಹೋಗುವ ಹಾಗಿಲ್ಲ. ಈ ಹೊಸ ಜವಾಬ್ದಾರಿ ಅವರಿಗೆ ಪೀಕಲಾಟಕ್ಕಿಟ್ಟುಕೊಂಡಿದೆ. ಮಕ್ಕಳ ಮುಗ್ಧ ಮುಖ ನೋಡಿ ಅಬ್ಲಿಯೇವಾಗೆ ಏನೇ ಎದುರಾದರೂ ಅವರನ್ನು ತಾಯಿಗೆ ತಲುಪಿಸೇ ಬೇಕು ಅಂತ ಸಂಕಲ್ಪ ಮಾಡಿಕೊಂಡಿದ್ದಾರೆ.
ಎರಡೂ ಮಕ್ಕಳ ಕೈ ಹಿಡಿದು ಅವರು ಗಡಿದಾಟಿದ್ದಾರೆ. ಹಂಗರಿಯ ಗಡಿಪ್ರದೇಶ ಬೆರೆಗ್ಸುವಾನಿ ಬಳಿ ಅವರು ಮಕ್ಕಳ ಜೊತೆ ಕಾಯುತ್ತಾ ನಿಂತರೂ ಅವರಮ್ಮನ ಸುಳಿವಿಲ್ಲ. ನಿರಾಶ್ರಿತರಿಗಾಗಿ ಹಾಕಿರುವ ಟೆಂಟ್ ಗಳ ಬಳಿಯಿದ್ದ ಒಂದು ಕಲ್ಲು ಬೆಂಚಿನ ಮೇಲೆ ಕೂತು ಅವರು ಕಾಯುವುದನ್ನು ಮುಂದುವರೆಸಿದ್ದಾರೆ. ಅಷ್ಟೊತ್ತಿಗೆ, ಮಗುವಿನ ಜೇಬಿನಲ್ಲಿದ್ದ ಫೋನ್ ರಿಂಗುಣಿಸಲಾರಂಭಿಸಿದೆ. ಅದನ್ನು ಕೈಗೆತ್ತಿಕೊಂಡ ಅವನು ಹರ್ಷದಿಂದ ಜೋರಾಗಿ ಕಿರುಚಿದ್ದಾನೆ.
ಹೌದು, ಕರೆ ಮಾಡಿದ್ದು ಅವರಮ್ಮ. ಆಕೆ ಗಡಿಭಾಗಕ್ಕೆ ಹತ್ತಿರ ಬಂದುಬಿಟ್ಟಿದ್ದಳು. ಅದಾದ ಕೆಲವೇ ನಿಮಿಷಗಳಲ್ಲಿ ಆಕೆ ಮಕ್ಕಳು ಮತ್ತು ಅಬ್ಲಿಯೇವಾ ಇದ್ದಲ್ಲಿಗೆ ಬಂದುಬಿಟ್ಟಳು. ಅಬ್ಲಿಯೇವಾ ಜೊತೆ ನಿಂತಿದ್ದ ಮಗನನ್ನು ಅಪ್ಪಿಕೊಂಡು ಮುದ್ದಾಡಿದಳು. ಅಬ್ಲಿಯೇವಾ ಚಿಕ್ಕಮಗುವನ್ನು ಅಲ್ಲೇ ನಿಂತಿದ್ದ ಕಾರಿನ ಹಿಂಬದಿಯ ಸೀಟಿನಲ್ಲಿ ಮಲಗಿಸಿದ್ದಳು. ನಡೆದು ದಣಿದಿದ್ದ ಮಗುವಿಗೆ ನಿದ್ರೆ ಹತ್ತಿಬಿಟ್ಟಿತ್ತು.
ಮಕ್ಕಳ ತಾಯಿ 33-ವರ್ಷದ ಌನಾ ಸೆಮ್ಯುಕ್ ಅಬ್ಲಿಯೇವಾ ಕೈಹಿಡಿದು ಅವರ ಮುಖ ನೋಡುತ್ತಾ ನಿಂತು ಬಿಟ್ಟಳು. ಆಕೆಯ ಕಣ್ಣುಗಳಿಂದು ನೀರು ಧಾರಾಕಾರವಾಗಿ ಸುರಯುತಿತ್ತು. ಅಭ್ಲಿಯೇವಾ ಆಕೆಯನ್ನು ತಬ್ಬಿಕೊಂಡು ತಲೆ ನೇವರಿಸಿದರು. ಇಳಿ ಸಂಜೆಯ ಹೊತ್ತಿನಲ್ಲಿ ಅವರಿಬ್ಬರು ಬಹಳ ಹೊತ್ತಿನವರೆಗೆ ತಬ್ಬಿಕೊಂಡೇ ಇದ್ದರು.
‘ಎಲ್ಲ ಸರಿಹೋಗುತ್ತೆ ಅಂತ ನಾನು ಮಕ್ಕಳಿಗೆ ಹೇಳುತ್ತೇನೆ. ಒಂದೆರಡು ವಾರಗಳ ನಂತರ ಯುದ್ಧ ಕೊನೆಗೊಳ್ಳುತ್ತದೆ, ನಾವು ಮನೆಗೆ ಹೋಗಬಹುದು,’ ಎಂದು ಸೆಮ್ಯುಕ್ ಹೇಳಿದರು.