ಇಸ್ಲಾಮಾಬಾದ್, ಆ.12: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೆನೆಟರ್ ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಇಂದು (ಆ.12) ನೇಮಕ ಮಾಡಲಾಗಿದೆ. ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ನಡುವಿನ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳ ಮೇಲ್ವಿಚಾರಣೆಗಾಗಿ ಹಂಗಾಮಿ ಪ್ರಧಾನಿಯಾಗಿ -ಉಲ್-ಹಕ್ ಕಾಕರ್ ಅವರನ್ನು ಈ ಸಭೆಯಲ್ಲಿ ಹೆಸರಿಸಲಾಗಿದೆ.
ಅನ್ವರ್-ಉಲ್-ಹಕ್ ಕಾಕರ್ ಅವರು ಬಲೂಚಿಸ್ತಾನ್ ಅವಾಮಿ ಪಕ್ಷದ (ಬಿಎಪಿ) ಸಂಸದರಾಗಿದ್ದು. ಅವರು ಮುಂದಿನ ಚುನಾವಣೆವರೆಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಶಿಫಾರಸಿನ ಮೇರೆಗೆ ಬುಧವಾರ ಸಂಜೆ ಸಂಸತ್ ವಿಸರ್ಜಿಸಿದ್ದು, ಸಾರ್ವತ್ರಿಕ ಚುನಾವಣೆಗೆ ಮುಂದಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಸಂಸತ್ ವಿಸರ್ಜನೆ: 90 ದಿನಗಳಲ್ಲಿ ಚುನಾವಣೆ ನಡೆಸಲು ಕಾಲಾವಕಾಶ
ಇನ್ನು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಪಾಕಿಸ್ತಾನದ ಅಧ್ಯಕ್ಷರು 90 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ಹೊರಹೋಗುವ ಸರ್ಕಾರ ಮುಂದಿನ ವರ್ಷಕ್ಕೆ ಚುನಾವಣೆ ವಿಳಂಬವಾಗಬಹುದು ಎಂದು ಎಚ್ಚರಿಸಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಆರ್ಥಿಕ ಅಸ್ಥಿರತೆ ಉಂಟಾಗಿದ್ದು ಚುನಾವಣೆ ನಡೆಸಲು ಹಣವಿಲ್ಲದ ಕಾರಣ ಚುನಾವಣೆ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದೆ. ಆದರೆ ಇದೀಗ ಚುನಾವಣೆಗೆ 90 ದಿನಗಳ ಕಾಲಾವಕಾಶ ಇರುವ ಸಮಯದಲ್ಲಿ ಹಂಗಾಮಿ ಪ್ರಧಾನಿಯನ್ನು ಆಯ್ಕೆ ಮಾಡಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Sat, 12 August 23