ಸರಣಿ ಭೂಕಂಪಗಳಿಗೆ ನಲುಗಿದ ಪಶ್ಚಿಮ ಅಫ್ಘಾನಿಸ್ತಾನ, 320 ಮಂದಿ ಸಾವು

|

Updated on: Oct 08, 2023 | 6:50 AM

Afghanistan Herat Earthquake: ಪಶ್ಚಿಮ ಅಫ್ಘಾನಿಸ್ತಾನದಲ್ಲಿ 5.5, 4.7, 6.3, 5.9 ಮತ್ತು 4.6 ತೀವ್ರತೆಯ ಐದು ಭೂಕಂಪನಗಳು ಸಂಭವಿಸಿದ್ದು, 320 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳುವಂತೆ ಭೂಕುಸಿತಗಳು ಮತ್ತು ಕಟ್ಟಡ ಕುಸಿತದ ವರದಿಗಳ ಮಧ್ಯೆ ಸಾವಿನ ಸಂಖ್ಯೆ ಹೆಚ್ಚಾಗಬಹುದು.

ಸರಣಿ ಭೂಕಂಪಗಳಿಗೆ ನಲುಗಿದ ಪಶ್ಚಿಮ ಅಫ್ಘಾನಿಸ್ತಾನ, 320 ಮಂದಿ ಸಾವು
ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಟ್ಟಡಗಳಿಂದ ಹೊರಗೆ ಓಡಿ ಬಂದ ಜನರು
Image Credit source: AFP Photo
Follow us on

ಕಾಬೂಲ್, ಅ.8: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸುಮಾರು 11 ಗಂಟೆ ವೇಳೆಗೆ 6.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು, 320 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳುವಂತೆ, ಭೂಕುಸಿತಗಳು ಮತ್ತು ಕಟ್ಟಡ ಕುಸಿತದ ವರದಿಗಳ ಮಧ್ಯೆ ಸಾವಿನ ಸಂಖ್ಯೆ ಹೆಚ್ಚಾಗಬಹುದು.

ಭೂಕಂಪನವು ಪ್ರದೇಶದ ಅತಿದೊಡ್ಡ ನಗರವಾದ ಹೆರಾತ್‌ನ ವಾಯುವ್ಯಕ್ಕೆ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿದೆ. ಪ್ರಮುಖ ಕಂಪನವು 5.5, 4.7, 6.3, 5.9 ಮತ್ತು 4.6 ರ ತೀವ್ರತೆಯೊಂದಿಗೆ ಸಂಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ನಿವಾಸಿಗಳು ಮತ್ತು ವ್ಯಾಪಾರಿಗಳ ಗುಂಪು ನಗರದಲ್ಲಿ ಕಟ್ಟಡಗಳಿಂದ ಓಡಿ ಹೋಗುತ್ತಿರುವುದನ್ನು ಕಾಣಬಹುದು. “ನಾವು ನಮ್ಮ ಕಚೇರಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕಟ್ಟಡ ಅಲುಗಾಡಲಾರಂಭಿಸಿತು. ವಾಲ್ ಪ್ಲಾಸ್ಟರ್‌ಗಳು ಬೀಳಲು ಪ್ರಾರಂಭಿಸಿದವು ಮತ್ತು ಗೋಡೆಗಳು ಬಿರುಕು ಬಿಟ್ಟವು, ಕೆಲವು ಗೋಡೆಗಳು ಮತ್ತು ಕಟ್ಟಡದ ಭಾಗಗಳು ಕುಸಿದವು” ಎಂದು 45 ವರ್ಷದ ಹೆರಾತ್ ನಿವಾಸಿ ಬಶೀರ್ ಅಹ್ಮದ್ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಜಪಾನ್​ನಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

“ನನ್ನ ಕುಟುಂಬವನ್ನು ಸಂಪರ್ಕಿಸಲು ನನಗೆ ಸಾಧ್ಯವಾಗುತ್ತಿಲ್ಲ, ನೆಟ್‌ವರ್ಕ್ ಸಂಪರ್ಕ ಕಡಿತಗೊಂಡಿದೆ. ನಾನು ತುಂಬಾ ಚಿಂತೆ ಮತ್ತು ಭಯದಲ್ಲಿದ್ದೇನೆ, ಇದು ಭಯಾನಕವಾಗಿದೆ” ಎಂದು ಬಶೀರ್ ಹೇಳಿದರು.

“ಗ್ರಾಮೀಣ ಮತ್ತು ಪರ್ವತ ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿವೆ” ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು ಹೇಳಿದ್ದಾಗಿ ವರದಿ ಮಾಡಿದೆ. ಪ್ರಸ್ತುತ, ನಮ್ಮ ಬಳಿ ಎಲ್ಲಾ ಮಾಹಿತಿ ಮತ್ತು ವಿವರಗಳಿಲ್ಲ ಎಂದು ಅವರು ಹೇಳಿದರು. ಅದಾಗ್ಯೂ, USGS ಪ್ರಾಥಮಿಕ ವರದಿಯು ನೂರಾರು ಸಾವುನೋವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತದೆ.

ಹೆರಾತ್ ಅಫ್ಘಾನಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲಾಗಿದೆ. ಅಂದಾಜು 1.9 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಕಳೆದ ವರ್ಷ ಜೂನ್‌ನಲ್ಲಿ 5.9 ತೀವ್ರತೆಯ ಭೂಕಂಪನದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹತ್ತಾರು ಜನರು ನಿರಾಶ್ರಿತರಾಗಿದ್ದರು. ಇದಕ್ಕೂ ಮುನ್ನ, ಮಾರ್ಚ್‌ನಲ್ಲಿ ಈಶಾನ್ಯ ಅಫ್ಘಾನಿಸ್ತಾನದ ಜುರ್ಮ್ ಬಳಿ ಸಂಭವಿಸಿದ ಭೂಕಂಪದ ನಂತರ ಅಫ್ಘಾನಿಸ್ತಾನದಲ್ಲಿ 13 ಜನರು ಸಾವನ್ನಪ್ಪಿದ್ದರು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ