ಭಾರತ ಉಗ್ರರ ಟಾರ್ಗೆಟ್ ಮಾಡಿದ್ರೆ ಪಾಕಿಸ್ತಾನ ಸೇನೆ ಮೇಲೆಯೇ ದಾಳಿ ನಡೆಸಿದ ಬಲೂಚ್ ಆರ್ಮಿ: 12 ಪಾಕ್ ಸೈನಿಕರು ಸಾವು

ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವು ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಉಗ್ರ ದಾಳಿಯ ನಂತರ, ಭಾರತವು ಹಲವು ನಿರ್ಬಂಧಗಳನ್ನು ವಿಧಿಸಿದೆ. ನಂತರ ಭಾರತೀಯ ಸಶಸ್ತ್ರ ಪಡೆಗಳ ಆಪರೇಷನ್ ಸಿಂಧೂರ್ ಪಾಕಿಸ್ತಾನಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿದೆ. ಈಗ ಬಲೂಚ್ ಆರ್ಮಿ ಸರದಿ. ಬಲೂಚ್ ಯೋಧರ ದಾಳಿಗೆ 12 ಮಂದಿ ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ.

ಭಾರತ ಉಗ್ರರ ಟಾರ್ಗೆಟ್ ಮಾಡಿದ್ರೆ ಪಾಕಿಸ್ತಾನ ಸೇನೆ ಮೇಲೆಯೇ ದಾಳಿ ನಡೆಸಿದ ಬಲೂಚ್ ಆರ್ಮಿ: 12 ಪಾಕ್ ಸೈನಿಕರು ಸಾವು
ದಾಳಿಗೂ ಮುನ್ನ ಹಾಗೂ ದಾಳಿಯ ನಂತರದ ಚಿತ್ರ (ಚಿತ್ರ ಕೃಪೆ: ಬಲೂಚ್ ಲಿಬರೇಶನ್ ಆರ್ಮಿ)
Image Credit source: Twitter

Updated on: May 08, 2025 | 7:35 AM

ನವದೆಹಲಿ, ಮೇ 8: ಭಾತದ ಸಿಂದೂರ್ ಕಾರ್ಯಾಚರಣೆ ಬೆನ್ನಲ್ಲೇ ಈಗ ಬಲೂಚಿಸ್ತಾನ ಸೇನೆ ಕೂಡ ಪಾಕಿಸ್ತಾನಕ್ಕೆ (Pakistan) ಆಘಾತ ನೀಡಿದೆ. ಪಾಕಿಸ್ತಾನಿ ಸೇನಾ ವಾಹನದ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ನಡೆಸಿದ ದಾಳಿಯಲ್ಲಿ 12 ಮಂದಿ ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದಾರೆ. ಐಇಡಿ ಮೂಲಕ ಪಾಕ್ ಸೇನಾ ವಾಹನವನ್ನು ಸ್ಫೋಟಿಸಿರುವುದಾಗಿ ಬಲೂಚಿಸ್ತಾನ ಸೇನೆ ಹೇಳಿಕೊಂಡಿದೆ. ಈ ಘಟನೆ ಬಲೂಚಿಸ್ತಾನದ ಬೋಲಾನ್‌ನಲ್ಲಿ ನಡೆದಿದೆ. ಬಲೂಚ್ ಲಿಬರೇಶನ್ ಆರ್ಮಿಯ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ಸ್ಕ್ವಾಡ್ (STOS) ಬೋಲನ್‌ನ ಮಾಚ್ ಕುಂಡ್ ಪ್ರದೇಶದಲ್ಲಿ ರಿಮೋಟ್ ಕಂಟ್ರೋಲ್ಡ್ ಐಇಡಿಯೊಂದಿಗೆ ಬೃಹತ್ ಸ್ಫೋಟ ಮಾಡಿಸಿದೆ. ಪಾಕ್ ಸೈನಿಕರು ಮಿಲಿಟರಿ ಕಾರ್ಯಾಚರಣೆಗೆ ಹೋಗುತ್ತಿದ್ದಾಗ ಈ ದಾಳಿ ನಡೆಸಲಾಗಿದೆ.

ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನದ ಮೇಲೆ ಐಇಡಿ ಬಾಂಬ್ ದಾಳಿ ನಡೆಸಲಾಗಿದೆ. ಈ ದಾಳಿ ಮಂಗಳವಾರ ನಡೆದಿತ್ತು. ಆದರೆ ದಾಳಿಯ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ವಾಹನದಲ್ಲಿ ತೆರಳುತ್ತಿದ್ದ ಪಾಕಿಸ್ತಾನಿ ಸೈನಿಕರ ದೇಹಗಳು ಸ್ಫೋಟದ ನಂತರ ಗಾಳಿಯಲ್ಲಿ ಹಲವಾರು ಮೀಟರ್‌ಗಳಷ್ಟು ಹಾರಿರುವುದು ವಿಡಿಯೋದಲ್ಲಿ ಕಾಣಿಸಿದೆ.

ಇದನ್ನೂ ಓದಿ
ಯುದ್ಧದ ಉದ್ವಿಗ್ನತೆ: ದೇಶಾದ್ಯಂತ ಮಾಕ್​ ಡ್ರಿಲ್​ ದರ್ಶನ ಹೇಗಿತ್ತು?
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ಪಾಕಿಸ್ತಾನದೊಳಗೆ ನುಗ್ಗಿ ಹೊಡೆದ ಭಾರತ, ಆಪರೇಷನ್ ಸಿಂಧೂರಕ್ಕೆ ಜಾಗತಿಕ ಬೆಂಬಲ
ಭಾರತ ನಡೆಸಿದ ದಾಳಿಯಲ್ಲಿ ಉಗ್ರ ಮಸೂದ್ ಅಜರ್, ಹಫೀಜ್ ಸಯೀದ್ ಸಾವು?

ಬಲೂಚ್ ಲಿಬರೇಶನ್ ಆರ್ಮಿ ದಾಳಿಯ ವಿಡಿಯೋ


ಬಲೂಚ್ ಲಿಬರೇಶನ್ ಆರ್ಮಿಯ ಸೈನಿಕರು ಮಾಚ್ ಪ್ರದೇಶದಲ್ಲಿ ಸ್ಫೋಟಕಗಳೊಂದಿಗೆ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ದಾಳಿಯ ನಂತರ ತಿಳಿಸಿದೆ. ಈ ದಾಳಿಯಲ್ಲಿ ತನ್ನ ಏಳು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಮೊದಲಿಗೆ ಹೇಳಿತ್ತು. ಆದರೆ, ನಂತರದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ತಿಳಿದುಬಂದಿದೆ. ಭಯೋತ್ಪಾದಕರ ನಿರ್ಮೂಲನೆಗಾಗಿ ಆ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.

ಬಲೂಚ್ ಆರ್ಮಿ ದಾಳಿಯಲ್ಲಿ ಮೃತಪಟ್ಟವರಲ್ಲಿ ಪಾಕಿಸ್ತಾನ ಸೇನೆಯ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದ್ದಾರೆ ಎಂದು ಸೇನೆ ತಿಳಿಸಿದೆ.

ಇದನ್ನೂ ಓದಿ: ಹುತಾತ್ಮರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ; ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಸವಾಲು

ಕಳೆದ ಕೆಲವು ಸಮಯಗಳಿಂದ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನಕ್ಕೆ ಕಠಿಣ ಸವಾಲು ಒಡ್ಡುತ್ತಿದೆ. ಇದೀಗ ಪಾಕಿಸ್ತಾನದ 12 ಮಂದಿ ಯೋಧರನ್ನು ಹತ್ಯೆ ಮಾಡಿದ ಬಳಿಕ, ನಿಖರ ಗುರಿಯೊಂದಿಗೆ ಇಂತಹ ಇನ್ನಷ್ಟು ದಾಳಿಗಳನ್ನು ನಡೆಸುತ್ತೇವೆ. ಹೆಚ್ಚಿನ ದಾಳಿಗಳನ್ನು ನಡೆಸಲಿದ್ದೇವೆ ಎಂದು ಬಲೂಚ್ ಲಿಬರೇಷನ್ ಆರ್ಮಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ