
ಢಾಕಾ, ಡಿಸೆಂಬರ್ 27: ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ (Bangladesh) ಅಲ್ಪಸಂಖ್ಯಾತರ ಮೇಲೆ ದಾಳಿಯಾಗುವುದು (Attack on minorities) ತೀರಾ ಸಾಮಾನ್ಯವಾಗಿ ಹೋಗಿದೆ. ಆ ದೇಶದ ಅಲ್ಪಸಂಖ್ಯಾತ ಮಾನವ ಹಕ್ಕು ಸಂಸ್ಥೆಯಾದ ಎಚ್ಆರ್ಸಿಬಿಎಂ (HRCBM) ಪ್ರಕಾರ, ಕಳೆದ ವರ್ಷದ ಡಿಸೆಂಬರ್ನಿಂದ ಈ ವರ್ಷದ ಜೂನ್ವರೆಗೆ ಆರು ತಿಂಗಳಲ್ಲಿ ಧರ್ಮನಿಂದನೆ ಆರೋಪದ ಮೇಲೆ ಹಿಂದೂಗಳ ಮೇಲೆ ಹಲ್ಲೆಯಾಗಿರುವ 71ಕ್ಕೂ ಹೆಚ್ಚು ಘಟನೆಗಳು ಸಂಭವಿಸಿವೆಯಂತೆ.
ಬಾಂಗ್ಲಾದೇಶದ ವಿವಿಧ ಪ್ರದೇಶಗಳಲ್ಲಿರುವ ರಂಗಪುರ್, ಚಾಂದಪುರ್, ಚತ್ತೋಡಗ್ರಾಮ್, ದಿನಾಜ್ಪುರ್, ಲಾಲ್ಮೋನಿರ್ಹತ್, ಸುನಾಮ್ಗಂಜ್, ಖುಲ್ನಾ, ಕಾಮಿಲ್ಲಾ, ಗಾಜಿಪುರ್, ತಾಂಗೇಲ್, ಸೈಲತ್ ಸೇರಿದಂತೆ 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿ ಈ ವರದಿಯು ಅಂಕಿ ಅಂಶ ನೀಡಿದೆ. ಗಮನಾರ್ಹ ಅಂಶ ಎಂದರೆ ಅಲ್ಲೋ ಇಲ್ಲೋ ಕೆಲವೇ ಕಡೆ ಮಾತ್ರ ಇಂಥ ಘಟನೆಗಳು ನಡೆದಿಲ್ಲ. ಬದಲಾಗಿ, ಬಾಂಗ್ಲಾದೇಶದ ಹೆಚ್ಚಿನ ಪ್ರದೇಶಗಳಲ್ಲಿ, ಮತ್ತು ಬಾರಿ ಬಾರಿ ಈ ಹಲ್ಲೆ ಘಟನೆಗಳು ಸಂಭವಿಸಿವೆ. ಇದನ್ನು ಗಮನಿಸಿದಾಗ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆಯ ಸ್ಥಿತಿ ಇರುವುದು ಕಾಣುತ್ತದೆ ಎಂಬುದು ಮಾನವ ಹಕ್ಕುಗಳ ಈ ವರದಿಯು ಹೇಳುತ್ತದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ
ಇತ್ತೀಚೆಗೆ ದೀಪ್ ಚಂದ್ರ ದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಧರ್ಮನಿಂದನೆ (Blasphemy charges) ಆರೋಪದ ಮೇಲೆ ಹಲ್ಲೆ ಮಾಡಿ ಸಜೀವವಾಗಿ ಸುಟ್ಟುಹಾಕಿದ್ದರು. ಆದರೆ, ದೀಪು ಚಂದ್ರ ದಾಸ್ ಯಾವುದೇ ಧರ್ಮನಿಂದನೆ ಮಾಡಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಮಾನವ ಹಕ್ಕು ಆಯೋಗದ ವರದಿ ಕೂಡ ಅದು ತಿಳಿಸಿದ 71 ಪ್ರಕರಣಗಳಲ್ಲಿ ಹೆಚ್ಚಿನವುಗಳು ಸುಳ್ಳು ಆರೋಪವೇ ಆಗಿವೆ ಎಂದಿದೆ.
ದೀಪುಚಂದ್ರ ದಾಸ್ನನ್ನು ಸಜೀವವಾಗಿ ಸುಟ್ಟುಹಾಕಿದ ಪ್ರಕರಣವು ಮಲೇಷ್ಯಾ ಸಂಸತ್ನಲ್ಲಿ ಸದ್ದು ಮಾಡಿದೆ. ಅಲ್ಲಿಯ ಅನೇಕ ಸಂಸದರು ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷಾತೀತವಾಗಿ ಸಂಸದರು ಬೆಂಬಲ ಕೊಡುತ್ತಿದ್ದಾರೆ ಎಂದು ಸಂಸದ ಆರ್.ಎಸ್.ಎನ್. ರಾಯರ್ ಅವರು ಹೇಳಿದ್ದಾರೆ. ಹಾಗೆಯೇ, ಬಾಂಗ್ಲಾದೇಶೀ ವೀಸಾ ನೀಡಲು ಮತ್ತು ಮಲೇಷ್ಯಾಗೆ ಬಾಂಗ್ಲಾದೇಶಿಗರ ಪ್ರವೇಶಕ್ಕೆ ನಿರ್ಬಂಧ ಏರುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಸಂಸದರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ
‘ಧಾರ್ಮಿಕ ಗುರುತಿನ ಕಾರಣಕ್ಕೆ ಯಾವುದೇ ವ್ಯಕ್ತಿಯ ಮೇಲೂ ಹಿಂಸಾಚಾರ ಆಗಬಾರದು. ಅಲ್ಪಸಂಖ್ಯಾತರ ಹಕ್ಕು ಮತ್ತು ಸುರಕ್ಷತೆಯನ್ನು ಸದಾ ಕಾಪಾಡಬೇಕು. ಆ ರೀತಿಯ ದ್ವೇಷ ಮತ್ತು ಅಸಹನೆಗೆ ಯಾವುದೇ ಸಮಾಜದಲ್ಲೂ ಜಾಗ ಇರಬಾರದು’ ಎಂದು ಮಲೇಷ್ಯಾ ಸಂಸದರಾದ ರಾಯರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ