ಶೇಖ್ ಹಸೀನಾಗೆ ಮತ್ತೊಂದು ಶಾಕ್; ಬಾಂಗ್ಲಾದೇಶದಿಂದ ಮಾಜಿ ಪ್ರಧಾನಿ ವಿರುದ್ಧ 2ನೇ ಬಂಧನ ವಾರಂಟ್ ಜಾರಿ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರೀ ಹಿನ್ನಡೆಯಾಗಿದೆ. ಬಾಂಗ್ಲಾದೇಶ ಕೋರ್ಟ್ ಎರಡನೇ ಬಂಧನ ವಾರಂಟ್ ಹೊರಡಿಸಿದೆ. ಬಾಂಗ್ಲಾದಲ್ಲಿ ವಿದ್ಯಾರ್ಥಿ ನೇತೃತ್ವದ ಕ್ರಾಂತಿಯಿಂದ ಅಧಿಕಾರದಿಂದ ಕೆಳಗಿಳಿದ ನಂತರ ಆಗಸ್ಟ್‌ನಲ್ಲಿ ಭಾರತಕ್ಕೆ ಬಂದು ಆಶ್ರಯ ಪಡೆದ 77 ವರ್ಷದ ಶೇಖ್ ಹಸೀನಾಗೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಬಾಂಗ್ಲಾದೇಶ ಈಗಾಗಲೇ ಬಂಧನ ವಾರಂಟ್ ಹೊರಡಿಸಿದೆ. ಜುಲೈ-ಆಗಸ್ಟ್ ಪ್ರತಿಭಟನೆಗಳು ಮತ್ತು ದಂಗೆಯ ಸಮಯದಲ್ಲಿ ನಡೆಸಿದ ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಐಸಿಟಿ ಅಕ್ಟೋಬರ್ 17ರಂದು ಮಾಜಿ ಪ್ರಧಾನಿ ವಿರುದ್ಧ ಮೊದಲ ಬಂಧನ ವಾರಂಟ್ ಹೊರಡಿಸಿತು. ಇದೀಗ 2ನೇ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಢಾಕಾ: ಬಾಂಗ್ಲಾದೇಶದ ನ್ಯಾಯಾಲಯವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ಅವಧಿಯಲ್ಲಿ ಬಲವಂತದ ನಾಪತ್ತೆ ಆರೋಪದ ಮೇಲೆ ಎರಡನೇ ಬಂಧನ ವಾರಂಟ್ ಹೊರಡಿಸಿದೆ ಎಂದು ಮುಖ್ಯ ಪ್ರಾಸಿಕ್ಯೂಟರ್ ಇಂದು ತಿಳಿಸಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಢಾಕಾ ಈಗಾಗಲೇ ಶೇಖ್ ಹಸೀನಾಗೆ ಬಂಧನ ವಾರಂಟ್ ಹೊರಡಿಸಿದೆ. ದೇಶೀಯ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ (ICT) ಮುಖ್ಯ ಪ್ರಾಸಿಕ್ಯೂಟರ್ ತಾಜುಲ್ ಇಸ್ಲಾಂ ಅವರ ಪ್ರಕಾರ, ಶೇಖ್ ಹಸೀನಾ ಮತ್ತು ಅವರ ಮಿಲಿಟರಿ ಸಲಹೆಗಾರ, ಮಿಲಿಟರಿ ಸಿಬ್ಬಂದಿ ಮತ್ತು ಇತರ ಕಾನೂನು ಜಾರಿ ಅಧಿಕಾರಿಗಳು ಸೇರಿದಂತೆ 11 ಇತರರಿಗೆ ಹೊಸ ವಾರಂಟ್ ಹೊರಡಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳ ನಂತರ ಅವಾಮಿ ಲೀಗ್ ಆಡಳಿತವನ್ನು ಉರುಳಿಸಿದ ನಂತರ ಭಾರತಕ್ಕೆ ಪಲಾಯನ ಮಾಡಿದ ಶೇಖ್ ಹಸೀನಾ ವಿರುದ್ಧ ಐಸಿಟಿಯ ಎರಡನೇ ಬಂಧನ ವಾರಂಟ್ ಇದಾಗಿದೆ. ಅವರ ವಿರುದ್ಧ ನ್ಯಾಯಮಂಡಳಿ ಇದುವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ: ಶೇಖ್ ಹಸೀನಾ ಹಸ್ತಾಂತರ ಕೋರಿ ಭಾರತಕ್ಕೆ ಬಾಂಗ್ಲಾದೇಶದಿಂದ ಪತ್ರ ರವಾನೆ
ಶೇಖ್ ಹಸೀನಾ ಅವರ ಆಳ್ವಿಕೆಯಲ್ಲಿ 500ಕ್ಕೂ ಹೆಚ್ಚು ಜನರನ್ನು ಬಾಂಗ್ಲಾದೇಶದ ಭದ್ರತಾ ಸಿಬ್ಬಂದಿ ಅಪಹರಿಸಿದ್ದರು. ಕೆಲವರನ್ನು ಹಲವು ವರ್ಷಗಳ ಕಾಲ ರಹಸ್ಯ ರೀತಿ ಬಂಧಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ನೇತೃತ್ವದ ಕ್ರಾಂತಿಯಿಂದ ತನ್ನ ಆಡಳಿತವನ್ನು ಉರುಳಿಸಿದ ನಂತರ 77 ವರ್ಷದ ಶೇಖ್ ಹಸೀನಾ ಆಗಸ್ಟ್ 5ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಡಿಸೆಂಬರ್‌ನಲ್ಲಿ ಬಾಂಗ್ಲಾದೇಶವು ಆಕೆಯನ್ನು ವಿಚಾರಣೆಯನ್ನು ಎದುರಿಸಲು ವಾಪಾಸ್ ಕಳುಹಿಸುವಂತೆ ಭಾರತವನ್ನು ಮನವಿ ಮಾಡಿತ್ತು. ಆದರೆ, ಈ ಬೇಡಿಕೆಗೆ ಭಾರತ ಪ್ರತಿಕ್ರಿಯಿಸಲು ನಿರಾಕರಿಸಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ