ಪತ್ರಕರ್ತನ ಬಂಧನಕ್ಕಾಗಿ ಪ್ರಯಾಣಿಕರ ವಿಮಾನದ ಮೇಲೆ ಫೈಟರ್​ ಜೆಟ್ ಛೂ ಬಿಟ್ಟ ಬೆಲರೂಸ್ ಅಧ್ಯಕ್ಷ

|

Updated on: May 24, 2021 | 1:49 PM

ಆಡಳಿತ ವ್ಯವಸ್ಥೆಯೇ ಈ ರೀತಿ ವರ್ತಿಸಿರುವುದನ್ನು ಖಂಡಿಸಿರುವ ಜಾಗತಿಕ ಸಮುದಾಯ, ‘ಇದು ಸರ್ಕಾರದ ಭಯೋತ್ಪಾದನೆ’ ಎಂದು ವಿಶ್ಲೇಷಿಸಿದೆ. ಬಂಧನವನ್ನು ಬೆಲರೂಸ್ ಸರ್ಕಾರ ಒಪ್ಪಿಕೊಂಡಿಲ್ಲ. ಆದರೆ ಸಹಪ್ರಯಾಣಿಕರು ಈ ವಿಷಯವನ್ನು ದೃಢಪಡಿಸಿದ್ದಾರೆ.

ಪತ್ರಕರ್ತನ ಬಂಧನಕ್ಕಾಗಿ ಪ್ರಯಾಣಿಕರ ವಿಮಾನದ ಮೇಲೆ ಫೈಟರ್​ ಜೆಟ್ ಛೂ ಬಿಟ್ಟ ಬೆಲರೂಸ್ ಅಧ್ಯಕ್ಷ
ಬಂಧಿತ ಪತ್ರಕರ್ತ ರೊಮನ್ ಪ್ರೊಟಸೆವಿಕ್
Follow us on

ಮಿನ್​ಸ್ಕ್​: ಆಡಳಿತಾರೂಢ ಸರ್ಕಾರವನ್ನು ಖಂಡತುಂಡ ವಿರೋಧಿಸುವ ಪತ್ರಕರ್ತನ ಬಂಧನಕ್ಕಾಗಿ ಆತನಿದ್ದ ಪ್ರಯಾಣಿಕರ ವಿಮಾನದ ಅತಿ ಸಮೀಪವೇ ಫೈಟರ್​ ಜೆಟ್​ ಹಾರಿಸಿ, ವಿಮಾನವನ್ನು ಬಲವಂತವಾಗಿ ಕೆಳಗಿಳಿಸಿದ ಘಟನೆ ಬೆಲರೂಸ್​ ರಾಜಧಾನಿ ಮಿನ್​ಸ್ಕ್​ ನಗರದಲ್ಲಿ ಭಾನುವಾರ ನಡೆದಿದೆ. ಆಡಳಿತ ವ್ಯವಸ್ಥೆಯೇ ಈ ರೀತಿ ವರ್ತಿಸಿರುವುದನ್ನು ಖಂಡಿಸಿರುವ ಜಾಗತಿಕ ಸಮುದಾಯ, ‘ಇದು ಸರ್ಕಾರದ ಭಯೋತ್ಪಾದನೆ’ ಎಂದು ವಿಶ್ಲೇಷಿಸಿದೆ.

ರೊಮನ್ ಪ್ರೊಟಸೆವಿಕ್ ಎಂಬ 26 ವರ್ಷದ ಭಿನ್ನಮತೀಯ ಪತ್ರಕರ್ತ ದೇಶಭ್ರಷ್ಟನಾಗಿ ಪೊಲೆಂಡ್​ನಲ್ಲಿ ವಾಸವಿದ್ದ. ಗ್ರೀಸ್​ನ ಅಥೆನ್ಸ್​ನಿಂದ ವಿಲ್ನಿನ್ಯೂಸ್ ನಗರಕ್ಕೆ ಹೋಗುತ್ತಿರುವ ವಿಮಾನದಲ್ಲಿ ಆತ ಇರುವುದನ್ನು ತಿಳಿದ ಬೆಲರೂಸ್ ಅಧಿಕಾರಿಗಳು ವಿಮಾವನ್ನು ಬಲವಂತವಾಗಿ ರಾಜಧಾನಿ ಮಿನ್​ಸ್ಕ್​ ನಗರದಲ್ಲಿ ಇಳಿಸಿ, ಆತನನ್ನು ಬಂಧಿಸಿದರು. ವಿಮಾನವನ್ನು ಭದ್ರತಾ ಕಾರಣಗಳಿಂದಾಗಿ ತುರ್ತಾಗಿ ಇಳಿಸಬೇಕಾಯಿತು ಎಂದು ಅಧಿಕಾರಿಗಳು ನಂತರ ಸಮರ್ಥನೆ ಕೊಟ್ಟುಕೊಂಡರು.

ಈ ಬಂಧನವನ್ನು ಬೆಲರೂಸ್ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ ವಿಲ್​ನ್ಯೂಸ್​ ನಗರದಲ್ಲಿ ವಿಮಾನದಿಂದ ಇಳಿದ ಪ್ರಯಾಣಿಕರಲ್ಲಿ ಪ್ರೊಟಸೆವಿಕ್ ಇರಲಿಲ್ಲ. ವಿಮಾನವು ಮಿನ್​ಸ್ಕ್​ಗೆ ಮಾರ್ಗ ಬದಲಿಸಿದಾಗ ಪ್ರೊಟಸೆವಿಕ್ ಭಯದಿಂದ ಕುಳಿತಿದ್ದರು. ಆದರೆ ಕಿರುಚಾಡಲಿಲ್ಲ ಎಂದು ಹಲವು ಪ್ರಯಾಣಿಕರು ಹೇಳಿದ್ದಾರೆ. ‘ವಿಮಾನದ ಮಾರ್ಗ ಬದಲಾವಣೆ ಘೋಷಣೆಯಾದ ನಂತರ ಪ್ರಯಾಣಿಕರ ಕಡೆಗೆ ತಿರುಗಿದ ಪ್ರೊಟಸೆವಿಕ್ ತಾನು ಮರಣದಂಡನೆ ಎದುರಿಸುತ್ತಿರುವುದಾಗಿ ತಿಳಿಸಿದರು’ ಎಂದು ವಿಮಾನದಲ್ಲಿದ್ದ ಲಿಥೋನಿಯಾದ ಮೊನಿಕಾ ಸಿಮ್​ಕೇನ್ ಹೇಳಿಕೆಯನ್ನು ಎಎಫ್​ಪಿ ಸುದ್ದಿಸಂಸ್ಥೆ ಉಲ್ಲೇಖಿಸಿದೆ.

ಒಬ್ಬ ಪತ್ರಕರ್ತನನ್ನು ಬಂಧಿಸಲು ಇಂಥ ಕೆಟ್ಟ ಕ್ರಮ ಬಳಸಿ, ಪ್ರಯಾಣಿಕರ ವಿಮಾನದ ಮಾರ್ಗ ಬದಲಾವಣೆ ಮಾಡಿದ ಬೆಲರೂಸ್​ ಸರ್ಕಾರದ ವಿರುದ್ಧ ಹೇರಿರುವ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲು ಐರೂಪ್ಯ ಒಕ್ಕೂಟ ಚಿಂತನೆ ನಡೆಸಿದೆ. ತಮ್ಮನ್ನು ವಿರೋಧಿಸುವವರನ್ನು ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್​ ಲುಕಶೆಂಕೊ ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಬೇಟೆಯಾಡಿದ್ದರು. ಪ್ರತಿಭಟನೆಗಳನ್ನು ಉಗ್ರವಾಗಿ ಹತ್ತಿಕ್ಕಿದ್ದರು. ಸೋಮವಾರ ನಡೆಯಲಿರುವ ಐರೋಪ್ಯ ಒಕ್ಕೂಟದ ಸಭೆಯಲ್ಲಿ ಈ ವಿಚಾರವೂ ಚರ್ಚೆಗೆ ಬರುವ ನಿರೀಕ್ಷೆಯಿದೆ.

ಬಂಧಿತ ಪತ್ರಕರ್ತ ಪ್ರೊಟೊಸೆವಿಕ್ ಬಿಡುಗಡೆಗೆ ಆಗ್ರಹಿಸಿರುವ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಬೆಲರೂಸ್ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ‘ಬೆಲರೂಸ್​ನ ಸರ್ವಾಧಿಕಾರಿ ಲುಕಶೆಂಕ ಮಾಡಿದ ಈ ದುಸ್ಸಾಹಸವು ವಿಮಾನದಲ್ಲಿದ್ದ 120 ಪ್ರಯಾಣಿಕರ ಜೀವಗಳನ್ನೂ ಆಪತ್ತಿಗೆ ಸಿಲುಕಿಸಿತ್ತು. ಇದರಲ್ಲಿ ಅಮೆರಿಕದ ಪ್ರಜೆಗಳೂ ಇದ್ದರು’ ಎಂದು ಆಂಟೊನಿ ಹೇಳಿದ್ದಾರೆ.

ರಷ್ಯ ಗುಪ್ತಚರ ಇಲಾಖೆ ಕೈವಾಡದ ಶಂಕೆ
ಪ್ರಯಾಣಿಕರ ವಿಮಾನವನ್ನು ಬಲವಂತವಾಗಿ ಕೆಳಗಿಳಿಸಿದ ಬೆಲರೂಸ್ ಸರ್ಕಾರದ ಈ ದುಸ್ಸಾಹಸದ ಹಿಂದೆ ರಷ್ಯದ ಗುಪ್ತಚರ ಇಲಾಖೆ ಕೆಜಿಬಿಯ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿದ್ದ ಬೆಲರೂಸ್​ ಸರ್ಕಾರದ ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ವಿಮಾನವು ಬೆಲರೂಸ್​ ವಾಯುಗಡಿ ಪ್ರವೇಶಿಸಿದ ತಕ್ಷಣ ವಿಮಾನದಲ್ಲಿ ಬಾಂಬ್ ಇದೆ ಎಂದು ಗುಲ್ಲೆಬ್ಬಿಸಿದ್ದರು. ವಿಮಾನದ ಸಿಬ್ಬಂದಿಯೊಬ್ಬಂದಿಗೆ ರಷ್ಯ ಗುಪ್ತಚರ ಸಂಸ್ಥೆ ಕೆಜಿಬಿಯ ಅಧಿಕಾರಿಗಳು ಸಂಘರ್ಷಕ್ಕೂ ಇಳಿದಿದ್ದರು. ಈ ಬೆಳವಣಿಗೆಯ ನಂತರ ಬೆಲರೂಸ್​ನ ವಿಮಾನ ಸಂಚಾರ ನಿಯಂತ್ರಣ ಅಧಿಕಾರಿಗಳು ಭದ್ರತೆಯ ಕಾರಣ ಮುಂದೊಡ್ಡಿ ವಿಮಾನವನ್ನು ತಕ್ಷಣವೇ ಮಿನ್​ಸ್ಕ್​ ನಿಲ್ದಾಣದಲ್ಲಿ ಇಳಿಸಬೇಕೆಂದು ಆದೇಶಿಸಿತ್ತು.

ಈಗಾಗಲೇ ಹಲವು ನಿರ್ಬಂದಗಳನ್ನು ಎದುರಿಸುತ್ತಿರುವ ಬೆಲರೂಸ್​ನ ಲುಕಶೆಂಕೊ ನೇತೃತ್ವದ ಸರ್ಕಾರದ ಬಗ್ಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಈ ಬೆಳವಣಿಗೆಯ ನಂತರ ಮತ್ತೆ ಕಠಿಣವಾಗಿ ಮಾತನಾಡಿದೆ. ಬೆಲರೂಸ್​ನಲ್ಲಿ ಪತ್ರಕರ್ತರು ಮತ್ತು ಚಳವಳಿಕಾರರನ್ನು ಬಂಧಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಗೆ ಕೊರೊನಾ ವೈರಸ್; ಕಣ್ಣೀರು ಹಾಕುತ್ತ ವಿಡಿಯೋ ಮಾಡಿದ ನಟಿ

ಇದನ್ನೂ ಓದಿ: ಭಾರತದಲ್ಲಿ ರೂಪಾಂತರ ವೈರಸ್ ವಿರುದ್ಧ ಎರಡು ಡೋಸ್ ಲಸಿಕೆ ಮಾತ್ರ ಬಲವಾದ ರಕ್ಷಣೆ ಒದಗಿಸಬಲ್ಲದು: ವರದಿ

Published On - 1:37 pm, Mon, 24 May 21