ಜಪಾನ್​ನಲ್ಲಿ ಹಕ್ಕಿಜ್ವರದ ಭೀತಿ: 11 ಸಾವಿರ ಕೋಳಿಗಳನ್ನು ಕೊಂದು ಹೂಳಲು ನಿರ್ಧಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 7:10 PM

ಶಿಗಾ ಪ್ರಾಂತ್ಯದ ಹಿಗಾಶಿಯೋಮಿ ಎಂಬಲ್ಲಿನ ಒಂದು ಮೊಟ್ಟೆ ಫಾರ್ಮ್​ನಲ್ಲಿ ಈ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿತು. ಅಲ್ಲಿನ ಪೌಲ್ಟ್ರಿ ಫಾರ್ಮ್​ಗಳಲ್ಲಿರುವ 11,000ಕ್ಕೂ ಅಧಿಕ ಕೋಳಿಗಳನ್ನು ಕೊಂದು ಮಣ್ಣಿನಲ್ಲಿ ಹೂತುಬಿಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ಜಪಾನ್​ನಲ್ಲಿ ಹಕ್ಕಿಜ್ವರದ ಭೀತಿ: 11 ಸಾವಿರ ಕೋಳಿಗಳನ್ನು ಕೊಂದು ಹೂಳಲು ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us on

ಟೊಕಿಯೊ: ಕೊವಿಡ್-19 ಪಿಡುಗಿನಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಜಪಾನ್​ಗೆ ಈಗ ಹಕ್ಕಿ ಜ್ವರದ ಸೋಂಕಿನ ಆತಂಕ ಕಾಣಿಸಿಕೊಂಡಿದೆ. ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ಜನರು ಮತ್ತು ಸ್ಥಳೀಯ ಆಡಳಿತಗಳಲ್ಲಿ ಆತಂತ ಮೂಡಿದೆ. ಅಧಿಕೃತ ಮೂಲಗಳ ಪ್ರಕಾರ ಜಪಾನಿನ 10ಕ್ಕೂ ಪ್ರಾಂತ್ಯಗಳ ಪೈಕಿ ಏವಿಯನ್ ಫ್ಲೂ ಹೆಸರಿನ ಸೋಂಕು ಪತ್ತೆಯಾಗಿದೆ.

ಶಿಗಾ ಪ್ರಾಂತ್ಯದ ಹಿಗಾಶಿಯೋಮಿ ಎಂಬಲ್ಲಿನ ಒಂದು ಮೊಟ್ಟೆ ಫಾರ್ಮ್​ನಲ್ಲಿ ಈ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿತು. ಅಲ್ಲಿನ ಪೌಲ್ಟ್ರಿ ಫಾರ್ಮ್​ಗಳಲ್ಲಿರುವ 11,000ಕ್ಕೂ ಅಧಿಕ ಕೋಳಿಗಳನ್ನು ಕೊಂದು ಮಣ್ಣಿನಲ್ಲಿ ಹೂತುಬಿಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದೇ ಸ್ವರೂಪದ ಹಕ್ಕಿಜ್ವರ ಸುಮಾರು ಒಂದು ತಿಂಗಳು ಮುಂಚೆ ಕಗವಾ ಹೆಸರಿನ ಪ್ರಾಂತ್ಯದಲ್ಲಿರುವ ಪೌಲ್ಟ್ರಿ ಫಾರ್ಮ್​ಗಳಲ್ಲಿ ಕಾಣಿಸಿಕೊಂಡಿತ್ತು.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ನೀಡಿರುವ ಮಾಹಿತಿಯನ್ವಯ, ಜಪಾನ್ ಮತ್ತು ಅದರ ನೆರೆರಾಷ್ಟ್ರ ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿರುವ ಈ ಸೋಂಕು, ಪ್ರಪಂಚದಾದ್ಯಂತ ಪೌಲ್ಟ್ರಿಗಳ ಮೇಲೆ ಘಾತಕ ಪರಿಣಾಮ ಬೀರುತ್ತಿರುವ ಎರಡು ಏವಿಯನ್ ಇನ್​ಫ್ಲುಯೆಂಜಾಗಳಲ್ಲಿ ಒಂದಾಗಿದೆ. ಏಷ್ಯಾ ಮತ್ತು ವಿಶ್ವದ ಬೇರೆಡೆಗಳಲ್ಲಿ ಹಬ್ಬುತ್ತಿರುವ ಈ ವೈರಸ್ ಮೊದಲಿಗೆ ಕಾಡಿನ ಪಕ್ಷಿಗಳಲ್ಲಿ ಕಾಣಿಸಿಕೊಂಡಿತ್ತು ಎಂದು ಎಫ್​ಎಒ ಹೇಳಿದೆ.

ಪೌಲ್ಟ್ರಿ ಫಾರ್ಮ್​ನಲ್ಲಿನ ಕೋಳಿಗಳನ್ನು ಕೊಲ್ಲಲು ತೆಗೆದುಕೊಂಡು ಹೋಗಲಾಗುತ್ತಿದೆ

‘ಜಪಾನ್​ನಲ್ಲಿ ಪತ್ತೆಯಾಗಿರುವ ವೈರಸ್ ಕೊರಿಯಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಹೆಚ್ಚು ಕಡಿಮೆ ಒಂದೇ ತೆರನಾಗಿವೆ. ಈ ವರ್ಷದ ಆರಂಭದಲ್ಲಿ ಯುರೋಪ್​ನಲ್ಲಿ ಪೌಲ್ಟ್ರಿ ಫಾರ್ಮ್​ಗಳಲ್ಲಿ ಕಾಣಿಸಿಕೊಂಡಿದ್ದ ವೈರಸ್ ಅನ್ನು ಅವು ಹೋಲುತ್ತವೆ. ಆದರೆ ಈಗ ಯುರೋಪ್​ನಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರದ ವೈರಸ್​ನೊಂದಿಗೆ ಸಾಮ್ಯತೆ ಹೊಂದಿಲ್ಲ. ಇದರರ್ಥ ನಾವೀಗ ಯುರೋಪ್ ಮತ್ತು ಪೂರ್ವ ಏಷ್ಯಾಗಳಲ್ಲಿ ತಲ್ಲಣ ಹುಟ್ಟಿಸುತ್ತಿರುವ ಎರಡು ವಿಭಿನ್ನ ಬಗೆಯ ಹೆಚ್5ಎನ್8 ಎಚ್​ಪಿಐಗಳೊಂದಿಗೆ ಹೋರಾಡಬೇಕಿದೆ’ ಎಂದು ಎಫ್​ಎಒನ ಪಶು ಆರೋಗ್ಯ ಅಧಿಕಾರಿ ಮಧುರ್ ದಿಂಗ್ರಾ ಹೇಳಿದ್ದಾರೆ.

ಆಫ್ರಿಕಾದಲ್ಲೂ ಈ ಹಕ್ಕಿಜ್ವರ ಹಬ್ಬುವ ಸಾಧ್ಯತೆಯಿರುವುದರಿಂದ ಎಫ್​ಎಒ ಅಧಿಕಾರಿಗಳು ಅಲ್ಲಿನ ಅಧಿಕಾರಿಗಳಿಗೆ ಎಚ್ಚರವಹಿಸುವಂತೆ ಸಂದೇಶ ರವಾನಿಸಿದ್ದಾರೆ. ಜಪಾನ್​ನಲ್ಲಿ 10 ಪ್ರಾಂತ್ಯಗಳಲ್ಲಿ ಏವಿಯನ್ ಫ್ಲೂ ಪತ್ತೆಯಾಗಿದ್ದು, ಮೂಲಗಳ ಪ್ರಕಾರ ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಕೊಂದು ಸಮಾಧಿ ಮಾಡಲಾಗಿದೆ. ಜರ್ಮನಿಯೂ ಸೇರಿದಂತೆ 7 ರಾಷ್ಟ್ರಗಳಿಂದ ಪೌಲ್ಟ್ರಿಗಳಿಗೆ ಸಂಬಂಧಿಸಿದ ರಫ್ತುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಜಪಾನಿನಲ್ಲಿ ಸುಮಾರು 1,850 ಲಕ್ಷ ಮೊಟ್ಟೆಯಿಡುವ ಕೋಳಿಗಳು ಮತ್ತು ಸುಮಾರು 1,380 ಲಕ್ಷ ಬ್ರಾಯ್ಲರ್ ಕೋಳಿಗಳಿವೆ ಎಂದು ತಿಳಿದುಬಂದಿದೆ.