ಬಾಂಡಿ ಬೀಚ್ ದಾಳಿ; ಉಗ್ರನತ್ತ ಜಿಗಿದು ರೈಫಲ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ದೃಶ್ಯ

Bondi beach shooting: ಆಸ್ಟ್ರೇಲಿಯಾದ ಸಿಡ್ನಿ ನಗರದ ಜನಪ್ರಿಯ ಬಾಂಡಿ ಬೀಚ್​ನಲ್ಲಿ ಮೂವರು ಉಗ್ರರು ಅಟ್ಟಹಾಸ ಮೆರೆದು ಹಲವರನ್ನು ಬಲಿಪಡೆದಿದ್ದಾರೆ. ಈ ವೇಳೆ, ನಿರಾಯುಧರಾದ ವ್ಯಕ್ತಿಯೊಬ್ಬರು ಉಗ್ರನೊಬ್ಬನ ಮೇಲೆ ಎರಗಿ ರೈಫಲ್ ಕಿತ್ತುಕೊಂಡು ಓಡಿಸಿ ಸಾಹಸ ಮೆರೆದಿದ್ದಾರೆ. ಈ ಘಟನೆಯ ದೃಶ್ಯ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಂಡಿ ಬೀಚ್ ದಾಳಿ; ಉಗ್ರನತ್ತ ಜಿಗಿದು ರೈಫಲ್ ಕಿತ್ತುಕೊಂಡ ವ್ಯಕ್ತಿಯ ಸಾಹಸದ ವಿಡಿಯೋ ದೃಶ್ಯ
ಬಾಂಡಿ ಬೀಚ್

Updated on: Dec 14, 2025 | 5:07 PM

ಸಿಡ್ನಿ, ಡಿಸೆಂಬರ್ 14: ಸಿಡ್ನಿಯ ಜನಪ್ರಿಯ ಬಾಂಡಿ ಬೀಚ್​ನಲ್ಲಿ (Bondi Beach) ಭಾನುವಾರ ಸಂಜೆ ಮೂವರು ಉಗ್ರರು ಸಾರ್ವಜನಿಕರ ಮೇಲೆ ಗುಂಡಿನ ದಾಳಿ ಎಸಗಿದ ಘಟನೆ ಸಂಭವಿಸಿದೆ. ಈ ದಾಳಿ ಘಟನೆಯಲ್ಲಿ ಹತ್ತು ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ, ರೈಫಲ್ ಹಿಡಿದು ಆರ್ಭಟಿಸುತ್ತಿದ್ದ ಉಗ್ರನೊಬ್ಬನ ಮೇಲೆ ವ್ಯಕ್ತಿಯೊಬ್ಬರು ಮಿಂಚಿನಂತೆ ದಾಳಿ ಮಾಡಿ ರೈಫಲ್ ಕಿತ್ತುಕೊಂಡು ಅಟ್ಟಾಡಿಸಿದ ಘಟನೆಯ ದೃಶ್ಯವೊಂದು ವೈರಲ್ ಆಗುತ್ತಿದೆ. ಶಸ್ತ್ರ ಇಲ್ಲದೆ ಬರಿಗೈಲಿದ್ದರೂ ಉಗ್ರನ ಮೇಲೆ ಎರಗಿ ಹೋಗುವ ಸಾಹಸ ಮಾಡಿದ ಆ ವ್ಯಕ್ತಿಯ ಧೈರ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಜನರು ಪ್ರಶಂಸಿಸುತ್ತಿದ್ದಾರೆ.

ಬಾಂಡಿ ಬೀಚ್​ನಲ್ಲಿ ಮೂವರು ಉಗ್ರಗಾಮಿಗಳು ನುಗ್ಗಿ ಗುಂಡಿನ ದಾಳಿ ಎಸಗಿದ್ದಾರೆ. ಇದರಲ್ಲಿ ಒಬ್ಬ ಉಗ್ರನು ಮರವೊಂದರ ಹಿಂದೆ ಅಡಗಿ ನಿಂತು ಜನರ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುತ್ತಾನೆ. ಅಲ್ಲೇ ಸಮೀಪ ಕಾರುಗಳ ಹಿಂದೆ ಅಡಗಿದ್ದ ಸಾರ್ವಜನಿಕ ವ್ಯಕ್ತಿಯೊಬ್ಬರು ಹಿಂದಿನಿಂದ ಸದ್ದಿಲ್ಲದೇ ಹೋಗಿ ಉಗ್ರನ ಗುತ್ತಿಗೆ ಹಿಡಿದು ರೈಫಲ್ ಕಿತ್ತುಕೊಳ್ಳುತ್ತಾರೆ. ಈ ರಭಸಕ್ಕೆ ಉಗ್ರನು ಕೆಳಗೆ ಬಿದ್ದು ಓಡಲು ಯತ್ನಿಸಿದ್ದಾನೆ.

ಉಗ್ರನ ಮೇಲೆ ದಾಳಿ ಮಾಡಿದ ವಿಡಿಯೋ

ಇದನ್ನೂ ಓದಿ: ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

10 ಮಂದಿ ಸಾವು, 11 ಮಂದಿಗೆ ಗಾಯ

ಬಾಂಡಿ ಬೀಚ್​ನಲ್ಲಿ ಸಂಜೆ (ಸ್ಥಳೀಯ ಕಾಲಮಾನ) 6:30ಕ್ಕೆ ಈ ಶೂಟಿಂಗ್ ನಡೆದಿದೆ. ಮೂವರು ಉಗ್ರರ ದಾಳಿಯಲ್ಲಿ ಒಂಬತ್ತು ಮಂದಿ ಸಾರ್ವಜನಿಕರು ಬಲಿಯಾಗಿದ್ದಾರೆ. ಓರ್ವ ಉಗ್ರನ ಹತ್ಯೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ 11 ಮಂದಿಗೆ ಗಾಯವೂ ಆಗಿದೆ. ಗಾಯಗೊಂಡವರಲ್ಲಿ ಇಬ್ಬರು ಪೊಲೀಸರೂ ಇದ್ದಾರೆ.

ಯಹೂದಿಗಳನ್ನು ಗುರಿ ಮಾಡಿದ್ದರಾ ಉಗ್ರರು?

ಉಗ್ರಗಾಮಿಗಳು ಯಾರು, ಯಾವ ಸಂಘಟನೆಯವರು ಎನ್ನುವ ಮಾಹಿತಿ ಇಲ್ಲ. ಆದರೆ, ಸಿಡ್ನಿಯಲ್ಲಿನ ಈ ಜನಪ್ರಿಯ ಬೀಚ್​ನಲ್ಲಿ ಯಹೂದಿಗಳ ಹನುಕ್ಕಾ ಆಚರಣೆ ಸಂಜೆ 5 ಗಂಟೆಯಿಂದಲೇ ನಡೆಯುತ್ತಿತ್ತು. ಮೂರು ದಿನಗಳ ಹಬ್ಬದಲ್ಲಿ ಇವತ್ತಿನದು ಮೊದಲ ದಿನವಾಗಿತ್ತು.

ಇದನ್ನೂ ಓದಿ: ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್​ಲೈನ್ಸ್​ಗೆ ಮುಳುವಾಯಿತಾ?

ಬಾಂಡಿ ಬೀಚ್​ನಲ್ಲಿ ಉಗ್ರರ ದಾಳಿ ಘಟನೆಯನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್ ಬಲವಾಗಿ ಖಂಡಿಸಿದ್ದು, ಇದು ಯಹೂದಿಗಳನ್ನು ಗುರಿ ಮಾಡಿ ಎಸಗಿದ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sun, 14 December 25