ಕೋವಿಡ್-19 ತಂದೊಡ್ಡುವ ಅಪಾಯದ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ಗೆ ಅರಿವಿರಲಿಲ್ಲ: ಆಪ್ತನ ಅರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 26, 2021 | 7:28 PM

ಏಪ್ರಿಲ್ 2020ರಲ್ಲಿ ಖುದ್ದು ತಾವೇ ಕೊರೊನಾ ವೈರಸ್​ನಿಂದ ಸೋಂಕಿತರಾಗಿ ತೀವ್ರ ಸ್ವರೂಪದ ಚಿಕಿತ್ಸೆ ಪಡೆದಾಗಲೇ ಜಾನ್ಸನ್​ಗೆ ಅದೆಷ್ಟು ಮಾರಕವೆನ್ನುವುದು ಅರ್ಥವಾಗಿರಬಹುದು ಎಂದು ಕುಮ್ಮಿಂಗ್ಸ್ ಹೇಳಿದ್ದಾರೆ.

ಕೋವಿಡ್-19 ತಂದೊಡ್ಡುವ ಅಪಾಯದ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ಗೆ ಅರಿವಿರಲಿಲ್ಲ: ಆಪ್ತನ ಅರೋಪ
ಬೊರಿಸ್​ ಜಾನ್ಸನ್
Follow us on

ಬ್ರಿಟನ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಕೊವಿಡ್-19 ಸೋಂಕು ತಂದೊಡ್ಡುವ ಅಪಾಯಗಳ ಬಗ್ಗೆ ಅದೆಷ್ಟು ನಿರಾಳತೆ ಹೊಂದಿದ್ದರೆಂದರೆ ತಾವೇ ಖುದ್ದು ವೈರಸನ್ನು ತಮ್ಮ ದೇಹದಲ್ಲಿ ಇಂಜೆಕ್ಟ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಅವರ ಮಾಜಿ ಆಪ್ತರಾಗಿರುವ ಡಾಮಿನಿಕ್ ಕುಮ್ಮಿಂಗ್ಸ್ ಅವರು ಬುಧವಾರದಂದು ಈ ಸಂಗತಿಯನ್ನು ಬ್ರಿಟಿಷ್ ಸಂಸತ್ತಿನಲ್ಲಿ ಬಹಿರಂಗಪಪಡಿಸಿ, ದೇಶದಲ್ಲಿ ಕೋವಿಡ್ ಸೋಂಕಿನ ಮೊದಲ ಅಲೆ ಎದ್ದಾಗ ಅದನ್ನು ತಡೆಯಲು ಬೊರಿಸ್ ಅಗತ್ಯವಿರುವಷ್ಟು ಪ್ರಯತ್ನಗಳನ್ನು ಮಾಡಲಿಲ್ಲವೆಂದು ಹೇಳಿದರು.

ಪ್ರಧಾನ ಮಂತ್ರಿ ಬೊರಿಸ್ ಕ್ಯಾಬಿನೆಟ್​ ಆಫೀಸ್ ಬ್ರೀಫಿಂಗ್ ರೂಮಿನಲ್ಲಿ (ಸಿಒಬಿಆರ್) ಸಭೆಗಳನ್ನು ನಡೆಸುವಾಗ ವೈರಸ್ ಹಬ್ಬುವಿಕೆ ಮತ್ತು ಅದು ರೂಪಾಂತರಗೊಳ್ಳವುದನ್ನು ತಡೆಯಲು ರಚನಾತ್ಮಕ ಕ್ರಮಗಳನ್ನು ಅವರು ಕೈಗೆತ್ತಿಕೊಳ್ಳುತ್ತಿಲ್ಲ ಅಂತ ದೇಶದ ಅನೇಕ ಅಧಿಕಾರಿಗಳು ಅಂದುಕೊಂಡಿದ್ದರು ಎಂದು ಕುಮ್ಮಿಂಗ್ಸ್ ಸಂಸತ್​ನಲ್ಲಿ ಬುಧವಾರ ಹೇಳಿದರು.

ಸಿಒಬಿಆರ್​ನಲ್ಲಿ ನಡೆಯುತ್ತಿದ್ದ ಮೀಟಿಂಗ್​ಗಳಲ್ಲಿ, ‘ಯಾರೂ ಹೆದರುವ ಅಗತ್ಯವಿಲ್ಲ. ಇದು ಸ್ವೈನ್ ಫ್ಲೂ ಅಷ್ಟೇ, ಚೀಫ್ ಮೆಡಿಕಲ್ ಆಫೀಸರ್ ಕ್ರಿಸ್ ವಿಟ್ಟಿ ಅವರು ನನ್ನ ದೇಹದಲ್ಲಿ ಕೊರೊನಾ ವೈರಸ್ ಚುಚ್ಚುವುದನ್ನು ಟಿವಿಗಳಲ್ಲಿ ನೇರ ಮಾಡಲಾಗುವುದು, ನೀವ್ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳುವ ಪ್ರಧಾನ ಮಂತ್ರಿಯಿದ್ದರೆ, ಅದರಿಂದ ದೇಶಕ್ಕೆ ಹೇಗೆ ಒಳಿತಾದೀತು,’ ಎಂದು ಸಂಸತ್ತಿನಲ್ಲಿ ಕುಮ್ಮಿಂಗ್ಸ್ ಹೇಳಿರುವುದನ್ನು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಏಪ್ರಿಲ್ 2020ರಲ್ಲಿ ಖುದ್ದು ತಾವೇ ಕೊರೊನಾ ವೈರಸ್​ನಿಂದ ಸೋಂಕಿತರಾಗಿ ತೀವ್ರ ಸ್ವರೂಪದ ಚಿಕಿತ್ಸೆ ಪಡೆದಾಗಲೇ ಜಾನ್ಸನ್​ಗೆ ಅದೆಷ್ಟು ಮಾರಕವೆನ್ನುವುದು ಅರ್ಥವಾಗಿರಬಹುದು ಎಂದು ಕುಮ್ಮಿಂಗ್ಸ್ ಹೇಳಿದ್ದಾರೆ.

ಬ್ರಿಟನ್​ನಲ್ಲಿ ಸೋಂಕಿಗೆ 1,28,000 ಸಾವಿರ ಜನ ಬಲಿಯಾಗಿದ್ದು ಅತಿಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಅದು ಐದನೇ ಸ್ಥಾನದಲ್ಲಿದೆ. 2020ರ ಆರಂಭದಲ್ಲಿ ಚೀನಾದಲ್ಲಿ ಸೃಷ್ಟಿಯಾಗಿ ವಿಶ್ವದಾದ್ಯಂತ ಹಬ್ಬಿದ ಕೊರೋನಾ ವೈರಸ್ ದೇಶದಲ್ಲಿ ಎಬ್ಬಿಸಬಹುದಾದ ಹಾಹಾಕಾರವನ್ನು ಬೋರಿಸ್​ ಜಾನ್ಸನ್ ಕಡೆಗಣಿಸಿದರು ಎಂದು ಹೇಳಲಾಗುತ್ತಿದೆ.

2016ರ ಬ್ರಿಕ್ಸಿಟ್ ಅಭಿಯಾನ ಮತ್ತು 2019ರಲ್ಲಿ ಜಾನ್ಸನ್ ಅವರ ಚುನಾವಣಾ ಗೆಲುವುಗಳ ರಣನೀತಿಯನ್ನು ತಯಾರು ಮಾಡಿದ್ದು ಡಾಮಿನಿಕ್ ಕುಮ್ಮಿಂಗ್ಸ್. ಕೊವಿಡ್​-19 ಪಿಡುಗುನಿಂದ ದೇಶ ಮತ್ತು ಅದರ ಆಡಳಿತ ಕಲಿಯಬೇಕಿರುವ ಪಾಠಗಳೇನು ಎಂದು ಬ್ರಿಟನ್ನಿನ ಸಂಸದರು, ಕುಮ್ಮಿಂಗ್ಸ್ ಅವರನ್ನು ಪ್ರಶ್ನಿಸಿದ್ದರು.

2020ರಲ್ಲಿ ಸರ್ಕಾರವನ್ನು ತ್ಯಜಿಸಿದ ನಂತರ ಬ್ರಿಟಿಶ್ ಸರ್ಕಾರದ ಸಾಮೂಹಿಕ ವೈಫಲ್ಯಗಳನ್ನು ಕುಮ್ಮಿಂಗ್ಸ್ ಹಲವಾರು ಬಾರಿ ಉಲ್ಲೇಖಿಸಿದ್ದಾರೆ. ಬ್ರಿಟಿಷ್ ಆರೋಗ್ಯ ಇಲಾಖೆ ಒಂದು ನಿಷ್ಪ್ರಯೋಜಕ ಸಂಸ್ಥೆಯೆಂದು ಹೇಳಿರುವ ಅವರು, ಪಾಶ್ಚಾತ್ಯ ಸರ್ಕಾರಗಳು ಕೊವಿಡ್​ ಸಂಕಷ್ಟಕ್ಕೆ ಸಕ್ರಿಯವಾಗಿ ಪ್ರತಿಕ್ರಿಯಿಸಲು ವಿಫಲವಾದವು ಎಂದಿದ್ದಾರೆ. ಕೊವಿಡ್​ ಪಿಡುಗನ್ನು ಎದುರಿಸಲು ಯುನೈಟೆಡ್ ಕಿಂಗಡಮ್ ಸಿದ್ಧತೆಯೇ ಮಾಡಿಕೊಂಡಿರಲಿಲ್ಲ ಎಂದು ಅವರು ನೇರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಕೊರೊನಾ ಪರಿಸ್ಥಿತಿಯಿಂದ ಭಾರತ ಭೇಟಿ ರದ್ದುಗೊಳಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್