ಪಾಕಿಸ್ತಾನ: ಕಳೆದ ವಾರ ಇಸ್ಲಾಮಾಬಾದ್‌ನಲ್ಲಿ (Islamabad) ನಡೆದ ರ್ಯಾಲಿಯಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ (Imran Khan)ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಇಸ್ಲಾಮಾಬಾದ್ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಖಾನ್ ಅವರಿಗೆ ಗುರುವಾರ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಾಧೀಶ ರಾಜಾ ಜವಾದ್ ಅಬ್ಬಾಸ್ ಹಾಸನ್ ಅವರು 1,00,000 ರೂಪಾಯಿಗಳ ಶ್ಯೂರಿಟಿ ವ ಮೇಲೆ ಸೆಪ್ಟೆಂಬರ್ 1 ರವರೆಗೆ ಇಮ್ರಾನ್ ಖಾನ್ ಗೆ ಜಾಮೀನು ನೀಡಿದರು. ಪಿಟಿಐ ಮುಖ್ಯಸ್ಥರ ವಿರುದ್ಧ ಪೊಲೀಸರು ದಾಖಲಿಸಿದ ಭಯೋತ್ಪಾದನೆ ಪ್ರಕರಣ”ಸೇಡಿನ ಕ್ರಮ” ಎಂದು ಅರ್ಜಿದಾರರು ವಾದಿಸಿದ್ದಾರೆ. ವಿಚಾರಣೆ ನಡೆದ ಫೆಡರಲ್ ನ್ಯಾಯಾಂಗ ಸಂಕೀರ್ಣದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಸಂಕೀರ್ಣದ ಸುತ್ತಮುತ್ತಲಿನ ರಸ್ತೆಗಳನ್ನು ಸಹ ನಿರ್ಬಂಧಿಸಲಾಗಿತ್ತು. ಏತನ್ಮಧ್ಯೆ, ಇಮ್ರಾನ್ ಅವರನ್ನು ಕಸ್ಟಡಿಗೆ ತೆಗೆದುಕೊಂಡರೆ ಬೀದಿಗಳಿಗೆ ಬನ್ನಿ ಮತ್ತು ನಂತರ ಮರುದಿನ ಇಸ್ಲಾಮಾಬಾದ್‌ಗೆ ಹೋಗಿ” ಎಂದು ಪಿಟಿಐ ಬೆಂಬಲಿಗರಿಗೆ ಕರೆ ನೀಡಿತ್ತು.
ಇಮ್ರಾನ್ ಖಾನ್ ಹೇಳಿದ್ದೇನು?
ಇಸ್ಲಾಮಾಬಾದ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಹಿಳಾ ನ್ಯಾಯಾಧೀಶರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಇಮ್ರಾನ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯಿದೆಯ (ಭಯೋತ್ಪಾದನಾ ಕೃತ್ಯಗಳಿಗೆ ಶಿಕ್ಷೆ) ಸೆಕ್ಷನ್ 7 ರ ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದೆ.
ರ್ಯಾಲಿಯಲ್ಲಿ, ಅವರು ತಮ್ಮ ಪಕ್ಷದ ಬಗ್ಗೆ “ಪಕ್ಷಪಾತ” ಧೋರಣೆಯ ವಿರುದ್ಧ ನ್ಯಾಯಾಂಗಕ್ಕೆ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಪರಿಣಾಮಗಳನ್ನು ಅದು ಎದುರಿಸಬೇಕು ಎಂದಿದ್ದರು.
ದೇಶದ್ರೋಹದ ಪ್ರಕರಣದಲ್ಲಿ ರಾಜಧಾನಿ ಪೊಲೀಸರ ಕೋರಿಕೆಯ ಮೇರೆಗೆ ತನ್ನ ಸಹಾಯಕ ಶಹಬಾಜ್ ಗಿಲ್‌ನ ಎರಡು ದಿನಗಳ ಬಂಧನವನ್ನು ಅನುಮೋದಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಝೆಬಾ ಚೌಧರಿ ಅವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ಚರಿಕೆ ನೀಡಿದ್ದರು.
ಇದಲ್ಲದೆ, ಪಿಟಿಐ ಮುಖ್ಯಸ್ಥರು ಇಸ್ಲಾಮಾಬಾದ್‌ನ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಮತ್ತು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿ ಹೇಳಿದ ಅವರು “ನಾವು ನಿಮ್ಮನ್ನು ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದರು.
ಸೋಮವಾರ ಇಸ್ಲಾಮಾಬಾದ್ ಹೈಕೋರ್ಟ್ ಅವರಿಗೆ ಮೂರು ದಿನಗಳ ಕಾಲ ರಕ್ಷಣಾತ್ಮಕ ಜಾಮೀನು ನೀಡಿದ್ದು ಮೂರು ದಿನಗಳ ಅವಧಿ ಮುಗಿಯುವ ಮೊದಲು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆಯಲು ನಿರ್ದೇಶನ ನೀಡಿತ್ತು.
Published On - 1:00 pm, Thu, 25 August 22