ನಾಟಿಂಗ್ಹ್ಯಾಮ್ : ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಬ್ರಿಟನ್ನ ಯುವಕ ಜೋಸೆಫ್ ಫ್ಲಾವಿಲ್ ಒಂದು ವರ್ಷದ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಬಾರಿ ಕೊರೊನಾ ಸೋಂಕು ತಗಲಿದ್ದರೂ ಸಾಂಕ್ರಾಮಿಕ ರೋಗದ ಬಗ್ಗೆ ಆತನಿಗೆ ಅರಿವು ಇಲ್ಲ ಅಂತಾರೆ ಇವರ ಕುಟುಂಬದವರು.
ಬರ್ಟನ್ನ ಸೆಂಟ್ರಲ್ ಇಂಗ್ಲಿಷ್ ಟೌನ್ನಲ್ಲಿ 2020 ಮಾರ್ಚ್ 1ರಂದು ಸಂಭವಿಸಿದ ಅಪಘಾತದಲ್ಲಿ 19ರ ಹರೆಯದ ಜೋಸೆಫ್ ಫ್ಲಾವಿಲ್ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಅಷ್ಟು ಹೊತ್ತಿಗೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಬ್ರಿಟನ್ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿತ್ತು.
ಕೊರೊನಾವೈರಸ್ ಲಾಕ್ಡೌನ್ ನಿರ್ಬಂಧಗಳಿಂದಾಗಿ ಜೋಸೆಫ್ ಅವರ ಜತೆ ಕುಟುಂಬದ ಸದಸ್ಯರಿಗೆ ಇರಲು ಸಾಧ್ಯವಾಗಲಿಲ್ಲ. ಅವರು ವಿಡಿಯೊ ಕರೆ ಮೂಲಕವೇ ಜೋಸೆಫ್ ಜತೆ ಮಾತನಾಡುತ್ತಿದ್ದರು. ಇತ್ತೀಚೆಗೆ ಜೋಸೆಫ್ ನಿಧಾನವಾಗಿ ಚೇತರಿಸುತ್ತಿದ್ದಾನೆ. ಅದು ಖುಷಿ ಕೊಡುವ ವಿಷಯ. ನಮ್ಮ ಮಾತುಗಳಿಗೆ ಆತ ಸ್ಪಂದಿಸುತ್ತಿದ್ದಾನೆ.
ಜೋಸೆಫ್, ನಾವು ನಿನ್ನ ಜತೆ ಇರಲಾಗುವುದಿಲ್ಲ. ನೀನು ಸುರಕ್ಷಿತವಾಗಿದ್ದಿ ಎಂದು ಹೇಳುವಾಗ ಅವನು ಕಣ್ಣು ಮಿಟುಕಿಸಿ ಸ್ಪಂದಿಸುತ್ತಿದ್ದಾನೆ. ಒಂದು ಬಾರಿ ಕಣ್ಣು ಮಿಟುಕಿಸಿ ಹೌದು ಎಂದೂ, ಎರಡು ಬಾರಿ ಮಿಟುಕಿಸಿ ಇಲ್ಲ ಎಂದು ಉತ್ತರಿಸುತ್ತಿದ್ದಾನೆ ಎಂದು ಅವರ ಚಿಕ್ಕಮ್ಮ ಸ್ಯಾಲಿ ಫ್ಲಾವಿಲ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಲಾಕ್ಡೌನ್ಗೆ ಮೂರು ವಾರಗಳ ಮುಂಚೆ ಜೋಸೆಫ್ ಅಪಘಾತಕ್ಕೊಳಗಾಗಿದ್ದರು. ಕಳೆದ 11 ತಿಂಗಳಲ್ಲಿ ಬ್ರಿಟನ್ ನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 40 ಲಕ್ಷವಾಗಿದ್ದು, 110,000 ಮಂದಿ ಸಾವಿಗೀಡಾಗಿದ್ದಾರೆ.
ಲಾಕ್ಡೌನ್ ಬದುಕಿನ ಕಥೆಗಳನ್ನು ಜೋಸೆಫ್ ಅರ್ಥ ಮಾಡಿಕೊಳ್ಳಬಲ್ಲನೇ ಎಂಬುದು ನಮಗೆ ತಿಳಿದಿಲ್ಲ. ಆತ ಗುಣಮುಖವಾಗಿ ಸಹಜ ಸ್ಥಿತಿಗೆ ಬರಲು ಇನ್ನೂ ಹಲವು ದಿನಗಳು ಬೇಕಾಗುತ್ತವೆ ಎಂದಿದ್ದಾರೆ ಸ್ಯಾಲಿ ಫ್ಲಾವಿಲ್. ಕ್ರೀಡಾಪಟುವಾಗಿದ್ದ ಜೋಸೆಫ್ ಈಗ ಸೆಂಟ್ರಲ್ ಇಂಗ್ಲೆಂಡ್ನ ಸ್ಟೋಕ್ ಆನ್ ಟ್ರೆಂಟ್ನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬದವರು josephsjourney.co.uk ಮೂಲಕ ಚಿಕಿತ್ಸೆಗಾಗಿ ಹಣ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.
ಬ್ರಿಟನ್ನಲ್ಲಿ ಮೂರನೇ ಕೊರೊನಾ ಲಸಿಕೆಗೂ ಸಿಕ್ತು ಅನುಮತಿ.. ಮಾರುಕಟ್ಟೆಗೆ ಬರಲಿದೆ ಮಾಡೆರ್ನಾ