
ಕೈರೋ, ನವೆಂಬರ್ 26: ಈಜಿಪ್ಟ್‌ನ ರಾಜಧಾನಿ ಕೈರೋ ಸಮೀಪದ ಹೆದ್ದಾರಿಯಲ್ಲಿ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ. ಬುಧವಾರ (ನವೆಂಬರ್ 25) ನಡೆದ ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳು ಬೆಂಕಿಗೆ ಆಹುತಿಯಾಗಿವೆ.
ಕೈರೋ ಸುತ್ತಲಿನ ಪ್ರಮುಖ ರಸ್ತೆಯಾದ ರಿಂಗ್ ರೋಡ್‌ನ ಗಿಜಾ ಪ್ರಾಂತ್ಯದ ಅಲ್-ವಾರಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಸುತ್ತಮುತ್ತಲಿನ ವಾಹನಗಳಿಗೂ ಹರಡಿದೆ. ಹಲವು ವಾಹನಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ.
27ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿ
ಟ್ಯಾಂಕರ್‌ನಿಂದ ಹರಡಿದ ಬೆಂಕಿ ರಸ್ತೆಯಲ್ಲಿದ್ದ ಕಾರುಗಳು, ಮಿನಿ ಬಸ್‌ಗಳು ಮತ್ತು ದ್ವಿಚಕ್ರ ವಾಹನಗಳನ್ನು ಆವರಿಸಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 27 ವಾಹನಗಳು ಸುಟ್ಟುಹೋಗಿವೆ. ಘಟನಾ ಸ್ಥಳಕ್ಕೆ 39 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ
ಅಪಘಾತದ ತೀವ್ರತೆಯಿಂದಾಗಿ ಕೆಲವು ಮೃತದೇಹಗಳನ್ನು ಗುರುತಿಸುವುದು ಕಷ್ಟವಾಗಿದೆ. ಹೀಗಾಗಿ ಮೃತರ ಗುರುತು ಪತ್ತೆ ಮಾಡಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಸಾರ್ವಜನಿಕ ಅಭಿಯೋಜಕರ ಕಚೇರಿ ಸೂಚಿಸಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:
ಡೀಸೆಲ್ ಟ್ಯಾಂಕರ್ನಲ್ಲಿ ತಾಂತ್ರಿಕ ದೋಷ, ಬಸ್ ಸಂಚಾರ ಸ್ಥಗಿತ: ಪ್ರಯಾಣಿಕರು ಪರದಾಟ
ಟ್ಯಾಂಕರ್ ಖಾಸಗಿ ಕಂಪನಿಗೆ ಸೇರಿದ್ದು
ಈ ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಈಜಿಪ್ಟ್‌ನ ಪೆಟ್ರೋಲಿಯಂ ಸಚಿವಾಲಯಕ್ಕೆ ಸೇರಿದ್ದಲ್ಲ. ಇಂಧನ ಸಾಗಣೆಗಾಗಿ ನೇಮಕಗೊಂಡಿದ್ದ ಖಾಸಗಿ ಗುತ್ತಿಗೆದಾರರ ವಾಹನವಾಗಿದೆ ಎಂದು ಪೆಟ್ರೋಲಿಯಂ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ಯಾಂಕರ್ ಹೇಗೆ ನಿಯಂತ್ರಣ ತಪ್ಪಿತು ಮತ್ತು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಈಜಿಪ್ಟ್‌ನಲ್ಲಿ ರಸ್ತೆ ಅಪಘಾತಗಳ ಆತಂಕ
ಈಜಿಪ್ಟ್‌ನಲ್ಲಿ ರಸ್ತೆ ಅಪಘಾತಗಳು ಗಂಭೀರ ಸಮಸ್ಯೆಯಾಗಿವೆ. ವೇಗದ ಚಾಲನೆ, ರಸ್ತೆಗಳ ಕಳಪೆ ನಿರ್ವಹಣೆ ಮತ್ತು ಸಂಚಾರ ನಿಯಮಗಳ ಸರಿಯಾದ ಅನುಷ್ಠಾನ ಇಲ್ಲದಿರುವುದು ಅಪಘಾತಗಳಿಗೆ ಪ್ರಮುಖ ಕಾರಣಗಳೆಂದು ವರದಿಗಳು ಹೇಳುತ್ತವೆ. 2025ರಲ್ಲಿ ಈಜಿಪ್ಟ್‌ನಲ್ಲಿ ರಸ್ತೆ ಅಪಘಾತಗಳಿಂದ 5,829 ಮಂದಿ ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ