ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್ನ ತವರು ದೇಶವಾದ ಚೀನಾ ಕೂಡ ಒಂದು.
ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ.
ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಬರೋಬ್ಬರಿ, 9 ಸಾವಿರ ಜನರ ಮೇಲೆ ಸಿನೋವಾಕ್ ಅದರ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇಂಟರೆಸ್ಟಿಂಗ್ ವಿಷಯ ಅಂದರೆ, ಸಿನೋವಾಕ್ ಬಯೋಟೆಕ್ ಕಂಪನಿಯ ವ್ಯಾಕ್ಸಿನ್ ಅಲ್ಲದೆ, ಆಕ್ಸ್‌ಫರ್ಡ್ (Oxford) ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಅಸ್ಟ್ರಾ ಜೆನೆಕಾ (Astra Zeneca) ಕಂಪನಿ ತಯಾರಿಸುತ್ತಿರುವ ಲಸಿಕೆಯ ಪ್ರಯೋಗವೂ 3ನೇ ಹಂತ ತಲುಪಿದೆ. ವಿಶ್ವದಲ್ಲಿ ಈ ಎರಡು ಲಸಿಕೆ ಮಾತ್ರ ಮೂರನೇ ಹಂತಕ್ಕೆ ಕಾಲಿಟ್ಟಿರೋದು.
ಇನ್ನುಳಿದ ಪ್ರಯೋಗಗಳೆಲ್ಲಾ ಮೊದಲು ಅಥವಾ ಎರಡನೇ ಹಂತದಲ್ಲಿವೆ. ಅದರಲ್ಲಿ ಸ್ವದೇಶಿ ನಿರ್ಮಿತ ಭಾರತ ಬಯೋಟೆಕ್ ಮತ್ತು ಐಸಿಎಂಆರ್ನ ಕೋವ್ಯಾಕ್ಸಿನ್ ಸದ್ಯಕ್ಕೆ ಮೊದಲನೇ ಹಂತದಲ್ಲಿ ಇದೆ.
Published On - 2:14 pm, Wed, 8 July 20