ಬೀಚಿಂಗ್: ಚೀನಾದ ಹಲವು ನಗರಗಳಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ಶಾಂಘೈನಗರದ ಪೂರ್ವಭಾಗದಲ್ಲಿ ಕೊವಿಡ್ ಪ್ರಕರಣಗಳು ನಿರಂತರವಾಗಿ ವರದಿಯಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಲು ಸರ್ಕಾರ ಆದೇಶಿಸಿದೆ. ನಾಯಿಗಳನ್ನು ಓಡಾಡಿಸಲೂ ಮನೆಗಳಿಂದ ಜನರು ಹೊರಗೆ ಬರಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಚೀನಾದಲ್ಲಿ ಮಂಗಳವಾರ 4,477 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಶಾಂಘೈ ಷೇರು ವಿನಿಮಯ ಕೇಂದ್ರ ಸೇರಿದಂತೆ ಹಲವು ಪ್ರಮುಖ ಹಣಕಾಸು ಸಂಸ್ಥೆಗಳಿರುವ ಪುಡೊಂಗ್ ಜಿಲ್ಲೆಯಲ್ಲಿ ನಿರ್ಬಂಧದ ಆದೇಶ ಜಾರಿ ವಿಚಾರದಲ್ಲಿ ಅಲ್ಲಿನ ಆಡಳಿತ ಹೆಚ್ಚು ಗಮನ ಹರಿಸುತ್ತಿದೆ. ಕೊವಿಡ್ ತಪಾಸಣೆ ಹೊರತುಪಡಿಸಿದರೆ ಬೇರೆ ಯಾವುದಕ್ಕೂ ಜನರು ಮನೆಗಳಿಂದ ಹೊರಬರುವಂತಿಲ್ಲ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ.
ತಮ್ಮ ಮನೆಗಳ ಆವರಣದಲ್ಲಿಯೂ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಜನವಸತಿ ಪ್ರದೇಶಗಳಲ್ಲಿರುವ ಪಾರ್ಕಿಂಗ್ ಲಾಟ್, ಗ್ಯಾರೇಜ್ಗಳು ಮತ್ತು ವಾಕಿಂಗ್ ಪಾತ್ಗಳಲ್ಲಿಯೂ ಸಂಚಾರ ಸಲ್ಲದು ಎಂದು ಸರ್ಕಾರ ಸೂಚಿಸಿದೆ. ಚೀನಾದ ಆರ್ಥಿಕ ನಾಡಿಮಿಡಿತ ಎನಿಸಿಕೊಂಡಿರುವ ಶಾಂಘೈ ನಗರದ 2.5 ಕೋಟಿ ಜನರ ಸಂಚಾರವನ್ನು ಎರಡು ಹಂತಗಳಲ್ಲಿ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ನಾಲ್ಕು ದಿನಗಳ ಅವಧಿಗೆ ನಗರದ ಅರ್ಧದಷ್ಟು ಭಾಗವನ್ನು ಲಾಕ್ಡೌನ್ ಆದೇಶದ ಮೂಲಕ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ನಿರ್ಬಂಧ ತೆರವಾದ ನಂತರ ಉಳಿದರ್ಧ ಭಾಗದಲ್ಲಿ ನಿರ್ಬಂಧ ಆದೇಶ ಜಾರಿಯಾಗಲಿದೆ. ಎಲ್ಲ ನಗರವಾಸಿಗಳನ್ನು ಕೊವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಕೊವಿಡ್ ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದರೂ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ.
ಈ ಹಿಂದೆ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾಗ ಜನರಿಗೆ ಮನೆಗಳ ಕಾಂಪೌಂಡ್ ಅಂಚಿನವರೆಗೆ ಓಡಾಡಲು ಅವಕಾಶವಿತ್ತು. ತಮ್ಮ ಕಟ್ಟಡಗಳಲ್ಲಿ ಸೋಂಕು ಕಾಣಿಸಕೊಳ್ಳದಿದ್ದರೆ, ಅಂಥವರಿಗೆ ಬೀದಿಗಳಲ್ಲಿ ಸಂಚರಿಸಲೂ ಅವಕಾಶವಿತ್ತು. ಆದರೆ ಇಂದಿನಿಂದ (ಮಾರ್ಚ್ 29) ಜಾರಿಯಾಗಿರುವ ಹೊಸ ನಿಯಮಗಳ ಪ್ರಕಾರ ಜನರು ಮನೆಗಳಿಂದ ಹೊರಗೆ ಬರಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಚೀನಾದಲ್ಲಿ ಪ್ರಸ್ತುತ 6,886 ಸೋಂಕು ಪ್ರಕರಣಗಳು ವರದಿಯಾಗಿದ್ದು. ತೀವ್ರ ಸೋಂಕು ಇರುವ ರೋಗಿಗಳಿಗೆ ಪಾಕ್ಸ್ಲೊವಿಡ್ ಮಾತ್ರೆಗಳ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ. 21,000 ಫೈಜರ್ ಲಸಿಕೆಗಳನ್ನು ಚೀನಾ ಆಮದು ಮಾಡಿಕೊಂಡಿದೆ. ಚೀನಾದ ರಾಷ್ಟ್ರೀಯ ಸರ್ಕಾರದೊಂದಿಗೆ ಶಾಂಘೈನ ಸ್ಥಳೀಯ ಆಡಳಿತವೂ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದೆ.
‘ಕೊರೊನಾ ಲಾಕ್ಡೌನ್ನಿಂದಾಗಿ ಸ್ಥಳೀಯ ವ್ಯಾಪಾರ ವಹಿವಾಟು ಸಹ ಹಿನ್ನಡೆ ಅನುಭವಿಸುತ್ತಿದೆ. ಜನರ ನೆರವಿಗೆ ಬಂದಿರುವ ಸರ್ಕಾರವು ತೆರಿಗೆ ವಿನಾಯ್ತಿ, ಬಾಡಿಗೆ ಕಟ್ಟಲು ಹೆಚ್ಚಿನ ಸಮಯಾವಕಾಶ ಅಥವಾ ವಿನಾಯ್ತಿ ಮತ್ತು ವಿಶೇಷ ಸಾಲ ಯೋಜನೆಗಳನ್ನು ಘೋಷಿಸಿದೆ. ಚೀನಾದ ಚಿಲ್ಲರೆ ವ್ಯಾಪಾರಿಗಳು ಮತ್ತು ಹೊಟೆಲ್ ಉದ್ಯಮಕ್ಕೆ ಲಾಕ್ಡೌನ್ ಆದೇಶದಿಂದ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಶಾಂಘೈನ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಾರಿ ಚೀನಾದಲ್ಲಿ ಒಮಿಕ್ರಾನ್ನ ರೂಪಾಂತರಿಯಿಂದ ಸೋಂಕು ಹರಡುತ್ತಿದ್ದು, ಅತ್ಯಂತ ವೇಗವಾಗಿ ಸಮುದಾಯದಲ್ಲಿ ವ್ಯಾಪಿಸುತ್ತಿದೆ.
ಕೊರೊನಾ ಇಡೀ ಜಗತ್ತನ್ನು ವ್ಯಾಪಿಸಿದ್ದಾಗಲೂ ಚೀನಾ ಸರ್ಕಾರ ಶಾಂಘೈ ಬಂದರು ಮುಚ್ಚಿರಲಿಲ್ಲ. ಅದು ಎಂದಿನಂತೆ ಸಹಜವಾಗಿ ಕೆಲಸ ಮಾಡುತ್ತಿತ್ತು. ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಕಡಿಮೆ ದುಷ್ಪರಿಣಾಮ ಬೀರುವ ಮತ್ತು ಜನರ ಆರೋಗ್ಯ ಕಾಪಾಡುವ ರೀತಿಯಲ್ಲಿ ನಿರ್ಬಂಧ ಆದೇಶಗಳನ್ನು ಜಾರಿಗೊಳಿಸಬೇಕೆಂದು ಅಧ್ಯಕ್ಷ ಷಿ-ಜಿನ್ಪಿಂಗ್ ನೀಡಿರುವ ಸಲಹೆಯನ್ನು ಪಾಲಿಸುವುದು ಚೀನಾದ ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ. ಚೀನಾದ ರಾಜಧಾನಿ ಬೀಜಿಂಗ್ನ ಸುತ್ತಮುತ್ತಲ ಹಲವು ನಗರಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಹಲವು ವಾರಗಳಿಂದ ಲಾಂಗ್ಫಾಂಗ್ ಮತ್ತು ತಂಗ್ಶಾನ್ ನಗರಗಳನ್ನು ಲಾಕ್ಡೌನ್ ಮಾಡಲಾಗಿದೆ. ಶಾಂಘೈನಲ್ಲಿ ಲಾಕ್ಡೌನ್ ಆದೇಶ ಜಾರಿಗೊಳಿಸಿದ ನಂತರ ಚೀನಾದ 6.2 ಕೋಟಿ ಜನರು ನಿರ್ಬಂಧಗಳ ಅಡಿಯಲ್ಲಿ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.