
ಸೋಲ್, ಮೇ 28: ಚೀನಾ(China)ದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾಗೆ ಬಂದಿದ್ದ ಮಾಜಿ ಪೊಲೀಸ್ ಅಧಿಕಾರಿಯನ್ನು ದಕ್ಷಿಣ ಕೊರಿಯಾ ಪೊಲೀಸರು ಬಂಧಿಸಿದ್ದಾರೆ. ಆದರೆ ಅವರು ದಕ್ಷಿಣ ಕೊರಿಯಾಗೆ ಬರಲು ಮಾಡಿರುವ ಪ್ರಯತ್ನ ಸಣ್ಣ ಪುಟ್ಟದಲ್ಲ. ಮಾಜಿ ಪೊಲೀಸ್ ಅಧಿಕಾರಿ ಡಾಂಗ್ ಗುವಾಂಗ್‌ಪಿಂಗ್ ಸಣ್ಣ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸಿ ಬಳಿಕ ದಕ್ಷಿಣ ಕೊರಿಯಾ ತಲುಪಿದ್ದಾರೆ. ಚೀನಾದಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು, ಕೆನಡಾದಲ್ಲಿ ಆಶ್ರಯ ಪಡೆದಿರುವ ತನ್ನ ಪತ್ನಿ ಮತ್ತು ಮಗಳನ್ನು ಸೇರಲು ಅವರು ಈ ಅಪಾಯಕಾರಿ ಸಾಹಸ ಮಾಡಿದ್ದಾರೆ.
ದಡ ಸೇರುವ ಮುನ್ನ ಕೆಟ್ಟುಹೋದ ದೋಣಿ
ವರದಿಗಳ ಪ್ರಕಾರ, ಡಾಂಗ್ ಅವರು ಚೀನಾದ ಶಾಂಡೊಂಗ್ ಪ್ರಾಂತ್ಯದ ವೈಹೈನಿಂದ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು. ಪಶ್ಚಿಮ ದಕ್ಷಿಣ ಕೊರಿಯಾದ ಟೇನ್ ಕೌಂಟಿಯನ್ನು ಸಮೀಪಿಸುತ್ತಿದ್ದಂತೆ ಅವರ ದೋಣಿಯ ಎಂಜಿನ್ ಕೆಟ್ಟುಹೋಗಿತ್ತು. ಎರಡು ದಿನಗಳಿಂದ ನಿದ್ರೆಯಿಲ್ಲದೆ ಕುಸಿದು ಬೀಳುವ ಹಂತದಲ್ಲಿದ್ದ ಡಾಂಗ್ ಅವರ ದೋಣಿಯನ್ನು ಸ್ಥಳೀಯ ಮೀನುಗಾರರು ಗುರುತಿಸಿದರು. ತಕ್ಷಣವೇ ದಕ್ಷಿಣ ಕೊರಿಯಾದ ಕರಾವಳಿ ಕಾವಲು ಪಡೆ (Coast Guard) ಧಾವಿಸಿ ಅವರನ್ನು ರಕ್ಷಿಸಿದೆ. ವಲಸೆ ನಿಯಮಗಳ ಉಲ್ಲಂಘನೆಯ ಶಂಕೆಯ ಮೇಲೆ ಸದ್ಯ ಅವರನ್ನು ಬಂಧನದಲ್ಲಿಡಲಾಗಿದೆ.
ಕೆನಡಾದಲ್ಲಿ ಆಶ್ರಯ ಪಡೆದಿರುವ ಡಾಂಗ್, ಈ ಹಿಂದೆ ಕನಿಷ್ಠ ಮೂರು ಬಾರಿ ಚೀನಾದಿಂದ ತಪ್ಪಿಸಿಕೊಂಡಿದ್ದರು, ಆದರೆ ಪ್ರತಿ ಬಾರಿಯೂ ವಾಪಸ್ ಕಳುಹಿಸಲ್ಪಟ್ಟಿದ್ದರು. ಅವರು ಥೈಲ್ಯಾಂಡ್ ಮತ್ತು ನಂತರ ವಿಯೆಟ್ನಾಂಗೆ ಪಲಾಯನ ಮಾಡಿದ್ದರು, ಆದರೆ ಆ ದೇಶಗಳಲ್ಲಿನ ಅಧಿಕಾರಿಗಳು ಅವರನ್ನು ಬಂಧಿಸಿ ಚೀನಾಗೆ ಕಳುಹಿಸಿದ್ದರು.
ಮತ್ತಷ್ಟು ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ
ದೇಶವಿರೋಧಿ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
2015 ರಲ್ಲಿ ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರೂ ಇವರನ್ನು ಮತ್ತೆ ಚೀನಾಕ್ಕೆ ಗಡೀಪಾರು ಮಾಡಲಾಯಿತು. ನಂತರ ತೈವಾನ್ ದ್ವೀಪಕ್ಕೆ ಈಜಲು ಯತ್ನಿಸಿ ಸೋತಿದ್ದರು. 2020 ರಲ್ಲಿ ವಿಯೆಟ್ನಾಂಗೆ ಅಕ್ರಮವಾಗಿ ಪ್ರವೇಶಿಸಿದಾಗಲೂ ಅಲ್ಲಿನ ಸರ್ಕಾರ ಇವರನ್ನು ಬಂಧಿಸಿ ಚೀನಾಕ್ಕೆ ಒಪ್ಪಿಸಿತ್ತು.
ಚೀನಾ-ಕೆನಡಾ ಕಾರ್ಯಕರ್ತೆ ಶೆಂಗ್ ಕ್ಸು ಸೇರಿದಂತೆ ಹಲವು ಹಕ್ಕುಗಳ ಗುಂಪುಗಳು ಡಾಂಗ್ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಚೀನಾಕ್ಕೆ ವಾಪಸ್ ಕಳುಹಿಸಬಾರದು ಎಂದು ದಕ್ಷಿಣ ಕೊರಿಯಾ ಸರ್ಕಾರವನ್ನು ಒತ್ತಾಯಿಸುತ್ತಿವೆ. ಒಂದು ವೇಳೆ ಅವರನ್ನು ಚೀನಾಕ್ಕೆ ಗಡೀಪಾರು ಮಾಡಿದರೆ ಅವರಿಗೆ ಜೈಲು ಶಿಕ್ಷೆ, ಚಿತ್ರಹಿಂಸೆ ಅಥವಾ ಸಾವು ಸಂಭವಿಸುವ ಭೀತಿ ಇದೆ ಎಂದು ಕೆನಡಾ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಪ್ರಸ್ತುತ ಚೀನಾದೊಂದಿಗೆ ಸಂಬಂಧ ಸುಧಾರಿಸಲು ಯತ್ನಿಸುತ್ತಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರಿಗೆ ಈ ಪ್ರಕರಣ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಸವಾಲಾಗಿ ಪರಿಣಮಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ