ಚೀನಾ ಮಿಲಿಟರಿ ಬಜೆಟ್ ಗಾತ್ರ ಶೇ 6.8 ರಷ್ಟು ಹೆಚ್ಚಳ; ಅತ್ಯಾಧುನಿಕತೆಗೆ ಹೆಚ್ಚು ಒತ್ತು
China Military Budget: ಜಾಗತಿಕವಾಗಿ ಇತರ ಎಲ್ಲ ದೇಶಗಳ ಮಿಲಿಟರಿಗಳಿಗಿಂತ ಶಕ್ತಿಶಾಲಿಯುತವಾಗಿ ತನ್ನ ಸೇನೆಯನ್ನು ಬೆಳೆಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಚೀನಾ ಹೊಂದಿದೆ. ಹೀಗಾಗಿ ಸೇನೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಹೂಡಿಕೆಗಳನ್ನು ಮುಕ್ತವಾಗಿ ಕೈಗೊಳ್ಳುತ್ತಿರುವ ಚೀನಾ, 2027ರ ಹೊತ್ತಿಗೆ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಅತ್ಯಾಧುನಿಕ ಮತ್ತು ಸುಸಜ್ಜಿತಗೊಳಿಸುವ ಆಕಾಂಕ್ಷೆ ಹೊಂದಿದೆ.

ಬೀಜಿಂಗ್: ಚೀನಾದ ಸೇನಾ ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಶೇ 6.8ರಷ್ಟು ಹೆಚ್ಚಳವಾಗಲಿದೆ ಎಂದು ಚೀನಾದ ಆರ್ಥಿಕ ಸಚಿವಾಲಯ ಅಧಿಕೃತ ಪ್ರಕಟಣೆ ನೀಡಿದೆ. ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಜತೆ ಮಿಲಿಟರಿ ವೈಷಮ್ಯವನ್ನು ಕಳೆದೊಂದು ವರ್ಷದಿಂದ ಹೆಚ್ಚಿಸಿಕೊಳ್ಳುತ್ತಿರುವೇ ಚೀನಾದ ಮಿಲಿಟರಿ ಬಜೆಟ್ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಚೀನಾ 2020ರಲ್ಲಿ 1.36 ಟ್ರಿಲಿಯನ್ ಯುವಾನ್ ಹಣವನ್ನು ಮಿಲಿಟರಿಗಾಗಿ ಮೀಸಲಿಟ್ಟಿತ್ತು. ಆದರೂ ಸಹ, ಅಮೆರಿಕದ ಮಿಲಿಟರಿ ಬಜೆಟ್ನ ಮೂರನೇ ಒಂದು ಪಾಲಷ್ಟೇ ಚೀನಾದ ಬಜೆಟ್ ಗಾತ್ರವಾಗಿತ್ತು. ಈ ಅಂಶಗಳನ್ನು ಪರಿಗಣಿಸಿದಾಗ ಚೀನಾ ನಿಧಾನವಾಗಿ ತನ್ನ ಮಿಲಿಟರಿಗೆ ಹೆಚ್ಚು ಒತ್ತು ನೀಡುತ್ತಿರುವುದು ಸ್ಪಷ್ಟವಾಗುತ್ತದೆ. ಈ ಬಾರಿಯ ಬಜೆಟ್ನಲ್ಲಿ ಶೇ 6.8ರಷ್ಟು ಹೆಚ್ಚಳವಾಗಲಿದೆ ಎಂಬುದು ಶಾಸಕಾಂಗದ ಸಭೆಯಲ್ಲಿ ಘೋಷಣೆಯಾಗಿದೆ.
ಜಾಗತಿಕವಾಗಿ ಇತರ ಎಲ್ಲ ದೇಶಗಳ ಮಿಲಿಟರಿಗಳಿಗಿಂತ ಶಕ್ತಿಶಾಲಿಯುತವಾಗಿ ತನ್ನ ಸೇನೆಯನ್ನು ಬೆಳೆಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಚೀನಾ ಹೊಂದಿದೆ. ಹೀಗಾಗಿ ಸೇನೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಹೂಡಿಕೆಗಳನ್ನು ಮುಕ್ತವಾಗಿ ಕೈಗೊಳ್ಳುತ್ತಿರುವ ಚೀನಾ, 2027ರ ಹೊತ್ತಿಗೆ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಅತ್ಯಾಧುನಿಕ ಮತ್ತು ಸುಸಜ್ಜಿತಗೊಳಿಸುವ ಆಕಾಂಕ್ಷೆ ಹೊಂದಿದೆ. ಅಲ್ಲದೇ, ಸುದೀರ್ಘಾವಧಿಯ ಗುರಿಯೊಂದಿಗೆ ಸೇನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿರುವ ಚೀನಾ, 2050ರಲ್ಲಿ ಜಾಗತಿಕ ದರ್ಜೆಯ ಸೇನೆಯನ್ನು ನಿರ್ಮಿಸಲು ಪಣ ತೊಟ್ಟಿದೆ.
ಅಮೆರಿಕಾ ಕಾರಣವೇ?
ಚೀನಾದ ಈ ಎಲ್ಲ ಮಿಲಿಟರಿ ಹೂಡಿಕೆಯ ಹಿಂದೆ ಅಮೆರಿಕಾದ ನೂತನ ಆಡಳಿತದ ನೀತಿ ನಿಯಮಗಳೂ ಕಾರಣ ಎನ್ನಬಹುದಾಗಿದೆ. ಟಿಬೇಟ್, ತೈವಾನ್ ಮತ್ತು ಹಾಂಗ್ಕಾಂಗ್ನ ಸ್ವಾಯತ್ತತೆಯ ಹೋರಾಟಗಾರರಿಗೆ ಬೆಂಬಲ ನೀಡುವ ಮನಸ್ಥಿತಿಯಲ್ಲಿರುವ ಜೋ ಬೈಡೆನ್ ನೇತೃತ್ವದ ಅಮೆರಿಕ ಸರ್ಕಾರ, ಒಂದಲ್ಲಾ ಒಂದು ದಿನ ಚೀನಾ ವಿರುದ್ಧ ತಿರುಗಿ ಬೀಳುವ ಸುಳುಹು ನೀಡಿದೆ.
ಅಮೆರಿಕದ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸಿ ದೇಶವನ್ನು ಮತ್ತೊಮ್ಮೆ ಜಾಗತಿಕ ನಾಯಕನಾಗಿ ಹೊರಹೊಮ್ಮುವಂತೆ ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ವಿಶ್ವ ನಾಯಕತ್ವವನ್ನು ವಹಿಸಿಕೊಳ್ಳುವುದು ಅಮೆರಿಕವೇ ಹೊರತು ಚೀನಾ ಅಲ್ಲ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಬಿಡುಗಡೆಯಾದ ಅಮೆರಿಕಾ ಮಧ್ಯಂತರ ರಾಷ್ಟ್ರೀಯ ಭದ್ರತಾ ಕಾರ್ಯಸೂಚಿಯಲ್ಲಿ ಈ ವಿಷಯಗಳನ್ನು ವಿವರಿಸಲಾಗಿದೆ. ಭಾರತದಂತಹ ದೇಶಗಳ ನೀತಿ ನಿಯಮಗಳನ್ನು ಗೌರವಿಸುವ ಮೂಲಕ ಜಾಗತಿಕವಾಗಿ ನಾಯಕನಾಗಿ ಹೊರಹೊಮ್ಮುವುದಾಗಿ ಜೋ ಬೈಡೆನ್ ಆಡಳಿತ ವಿವರಿಸಿದೆ.
ತನ್ನ ನೆರೆರಾಷ್ಟ್ರಗಳಾದ ಭಾರತಕ್ಕೆ ಇಂಡೋ- ಫೆಸಿಪಿಕ್ ಸಮುದ್ರ ವಲಯದಲ್ಲಿ ಅಮೆರಿಕಾದಿಂದ ದೊರೆತಿರುವ ಬೆಂಬಲ ಚೀನಾಕ್ಕೆ ಸಣ್ಣ ಮಟ್ಟದ ಆತಂಕವನ್ನು ಹುಟ್ಟಿಸಿರಲು ಸಾಕು ಎಂದು ಚೀನಾ ಆಗುಹೋಗು ಬಲ್ಲ ಪರಿಣಿತರು ಅಭಿಪ್ರಾಯಪಡುತ್ತಾರೆ. ತನ್ನ ವಿರುದ್ಧ ಅಂತಾರಾಷ್ಟ್ರೀಯವಾಗಿ ಒಕ್ಕೂಟ ರೂಪುಗೊಂಡು ಬಲಿಷ್ಠವಾಗುವ ಮುನ್ನವೇ ಮಿಲಿಟರಿಯನ್ನು ಸನ್ನದ್ಧಗೊಳಿಸರಬೇಕು ಎಂಬ ಉದ್ದೇಶವನ್ನು ಚೀನಾ ಹೊಂದಿರುವದಂತೂ ಸ್ಪಷ್ಟವಾಗಿದೆ.
ತೆಲಂಗಾಣದಲ್ಲಿ ವಿದ್ಯುತ್ ಸೇವೆ ಕಡಿತಗೊಳಿಸಲು ಚೀನಾ ಹ್ಯಾಕರ್ಗಳ ಪ್ರಯತ್ನ?