ಬೀಜಿಂಗ್: ಚೀನಾದಲ್ಲಿ ಜನಿಸಿದ ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಬಿಡುಗಡೆ ಮಾಡಿದ ಸೋರಿಕೆಯಾದ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ತೈವಾನ್ (Taiwan) ಮೇಲೆ ದಾಳಿಯನ್ನು ಮಾಡಲು ಚೀನಾ (China) ಯೋಚನೆ ಮಾಡುತ್ತಿದೆ ಎಂದು ಇದರಲ್ಲಿ ಹೇಳಲಾಗಿದೆ. ಪಿಎಲ್‌ಎ ಉನ್ನತ ರಹಸ್ಯ ಸಭೆಯಲ್ಲಿ ಹಿರಿಯ ಜನರಲ್ಗಳು ಮಾತನಾಡುತ್ತಿರುವ ಆಡಿಯೋ (Audio Leak) ಸಂಭಾಷಣೆಯಲ್ಲಿ ತೈವಾನ್ ಮೇಲೆ ಚೀನಾ ದಾಳಿ ನಡೆಸಲು ಪ್ಲಾನ್ ಮಾಡಿರುವುದು ಬಹಿರಂಗವಾಗಿದೆ.
ಚೀನಾದ ಉನ್ನತ ಸೇನಾ ಜನರಲ್ ತೈವಾನ್‌ನಲ್ಲಿ ಯುದ್ಧದ ಬಗ್ಗೆ ತನ್ನ ಕಾರ್ಯತಂತ್ರವನ್ನು ರೂಪಿಸಿರುವುದನ್ನು ಲೀಕ್ ಆದ ಆಡಿಯೋದಲ್ಲಿ ಕೇಳಬಹುದು. ಮಾನವ ಹಕ್ಕುಗಳ ಕಾರ್ಯಕರ್ತ ಬಿಡುಗಡೆ ಮಾಡಿರುವ ಈ ಆಡಿಯೋ ಕ್ಲಿಪ್ 57 ನಿಮಿಷಗಳದ್ದಾಗಿದೆ. ಈ ಆಡಿಯೋ ಕ್ಲಿಪ್‌ನಲ್ಲಿ ಚೀನಾದ ಉನ್ನತ ಯುದ್ಧದ ಜನರಲ್ ತೈವಾನ್ ಮೇಲೆ ಹೇಗೆ ಯುದ್ಧ ನಡೆಸಬೇಕು ಮತ್ತು ಅದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂದು ಚರ್ಚಿಸುತ್ತಿದ್ದಾರೆ.
1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಮಿಲಿಟರಿ ಕಮಾಂಡ್ ಉನ್ನತ ರಹಸ್ಯ ಸಭೆಯ ಆಡಿಯೋ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಚೀನಾದ ಮಿಲಿಟರಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ಮೇಲಿನ ದಾಳಿಯ ಯೋಜನೆಯನ್ನು ಉಲ್ಲೇಖಿಸುತ್ತದೆ. ಸೈಬರ್ ದಾಳಿ ಮತ್ತು ಬಾಹ್ಯಾಕಾಶದಲ್ಲಿರುವ ಶಸ್ತ್ರಾಸ್ತ್ರಗಳ ಬಳಕೆಗೆ ತಂತ್ರವನ್ನು ಮಾಡಲಾಗಿದೆ.
ಇದನ್ನೂ ಓದಿ: ಚೀನಾ: ರನ್‌ವೇಯಿಂದ ಸ್ಕಿಡ್ ಆಗಿ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್‌ನ ವಿಮಾನ; ಪ್ರಯಾಣಿಕರು ಸುರಕ್ಷಿತ
ಮೊದಲ ಬಾರಿಗೆ ಚೀನಾದ ಜನರಲ್‌ಗಳ ಉನ್ನತ ರಹಸ್ಯ ಸಭೆಯ ರೆಕಾರ್ಡಿಂಗ್ ಸೋರಿಕೆಯಾಗಿದೆ ಎಂದು ಕಾರ್ಯಕರ್ತೆ ಜೆನ್ನಿಫರ್ ಝೆಂಗ್ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಒಬ್ಬ ಲೆಫ್ಟಿನೆಂಟ್ ಜನರಲ್ ಮತ್ತು ಮೂವರು ಮೇಜರ್ ಜನರಲ್‌ಗಳಿಗೆ ಮರಣದಂಡನೆ ವಿಧಿಸಲಾಗಿದೆ. ಇನ್ನೂ ಹಲವಾರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಈ ಆಡಿಯೋ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದಲ್ಲಿ (CPC) ಬಂಡಾಯವನ್ನು ಹೆಚ್ಚಾಗಿಸಿದೆ.
ಮೇ 14ರಂದು ಈ ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರ ಆಡಿಯೋವನ್ನು ಮೊದಲು ಲುಡ್ ಮೀಡಿಯಾ ಲೀಕ್ ಮಾಡಿದೆ. ತೈವಾನ್‌ಗೆ ಸಂಬಂಧಿಸಿದಂತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಉದ್ದೇಶಗಳನ್ನು ಬಹಿರಂಗಪಡಿಸಲು ಬಯಸಿದ ಹಿರಿಯ ಸಿಪಿಸಿ ಅಧಿಕಾರಿಯಿಂದ ಈ ಆಡಿಯೊವನ್ನು ಸೋರಿಕೆ ಮಾಡಲಾಗಿದೆ ಎಂದು ಲುಡ್ ಮೀಡಿಯಾ ಹೇಳಿದೆ. ಈ ಆಡಿಯೋದಲ್ಲಿ ನಡೆಯುತ್ತಿರುವ ಸಂಭಾಷಣೆಯನ್ನು ಆಧರಿಸಿ, ರಾಜಕೀಯ ನಾಯಕತ್ವದ ಹೊರತಾಗಿ ಪಕ್ಷದ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ರಾಜ್ಯಪಾಲರು ಮತ್ತು ಗುವಾಂಗ್‌ಡಾಂಗ್ ಪ್ರಾಂತ್ಯದ ಉಪ ರಾಜ್ಯಪಾಲರು ಸಭೆಯಲ್ಲಿ ಹಾಜರಿದ್ದರು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ನಮ್ಮನ್ನು ಬಲಹೀನರು ಅಂದುಕೊಳ್ಳದಿರಿ: ತೈವಾನ್ ಬಗ್ಗೆ ಬೈಡೆನ್ ಎಚ್ಚರಿಕೆಗೆ ಚೀನಾ ಕಠಿಣ ಪ್ರತಿಕ್ರಿಯೆ
ಇತ್ತೀಚಿನ ದಿನಗಳಲ್ಲಿ ತೈವಾನ್‌ನಲ್ಲಿ ಚೀನಾ ಸೇನೆಯ ನುಸುಳುವಿಕೆ ಸಾಕಷ್ಟು ಹೆಚ್ಚಿರುವ ಸಂದರ್ಭದಲ್ಲಿ ಈ ಆಡಿಯೋ ಮುನ್ನೆಲೆಗೆ ಬಂದಿದೆ. ವರದಿಯ ಪ್ರಕಾರ, ಮೇ ತಿಂಗಳಿನಲ್ಲಿಯೇ ಚೀನಾ 68 ಮಿಲಿಟರಿ ವಿಮಾನಗಳನ್ನು ತೈವಾನ್‌ನ ವಾಯುಪ್ರದೇಶಕ್ಕೆ ಕಳುಹಿಸಿದೆ. ಇವುಗಳಲ್ಲಿ 30 ಫೈಟರ್ ಜೆಟ್‌ಗಳು, 19 ಸ್ಪಾಟರ್ ವಿಮಾನಗಳು, 10 ಬಾಂಬರ್‌ಗಳು ಮತ್ತು 9 ಹೆಲಿಕಾಪ್ಟರ್‌ಗಳು ಸೇರಿವೆ.
ಕಳೆದ ವರ್ಷ, ಚೀನಾ 239 ದಿನಗಳಲ್ಲಿ 961 ಬಾರಿ ತೈವಾನ್ ಗಡಿಯನ್ನು ಅತಿಕ್ರಮಿಸಿತು. ಚೀನಾದ ಉದ್ದೇಶಗಳ ದೃಷ್ಟಿಯಿಂದ, ಏಪ್ರಿಲ್‌ನಲ್ಲಿ ತೈವಾನ್‌ನ ರಕ್ಷಣಾ ಸಚಿವಾಲಯವು ನಾಗರಿಕರಿಗಾಗಿ 28 ಪುಟಗಳ ಮೊಬೈಲ್ ಅಪ್ಲಿಕೇಷನ್ ಕೈಪಿಡಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಮಿಲಿಟರಿ ಬಿಕ್ಕಟ್ಟು ಅಥವಾ ದುರಂತದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು, ದಾಳಿಯ ಸಮಯದಲ್ಲಿ ಸುರಕ್ಷಿತ ಸ್ಥಳವನ್ನು ಹೇಗೆ ಕಂಡುಹಿಡಿಯುವುದು ಎಂದು ತಿಳಿಸಲಾಗಿದೆ.
ಸಭೆಯ ಸಮಯದಲ್ಲಿ, ಜಂಟಿ ನಾಗರಿಕ-ಮಿಲಿಟರಿ ಕಮಾಂಡ್ ಅನ್ನು ತೆರೆಯಲು ಶಿಫಾರಸು ಮಾಡಲಾಗಿದೆ. ಉನ್ನತ ರಹಸ್ಯ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಡ್ರೋನ್‌ಗಳು, ದೋಣಿಗಳು ಇತ್ಯಾದಿಗಳನ್ನು ತಯಾರಿಸಲು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಜ್ಜುಗೊಳಿಸಲಾದ ಕಂಪನಿಗಳನ್ನು ಪಟ್ಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ