ಪಾಕಿಸ್ತಾನಕ್ಕೆ ಬಂದು ಹೋದ ಜಾಕ್ ಮಾ; ಈ ಭೇಟಿಯ ಉದ್ದೇಶವೇನು?

|

Updated on: Jul 03, 2023 | 1:32 PM

ಜಾಕ್ ಮಾ ಮತ್ತು ಅವರ ತಂಡವು ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವರು ವ್ಯಾಪಾರ ಕೇಂದ್ರಗಳಿಗೆ ಭೇಟಿ ನೀಡಿದ್ದು ವಿವಿಧ ವಾಣಿಜ್ಯ ಮಂಡಳಿಗಳ ಪ್ರಮುಖ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಪಾಕಿಸ್ತಾನಕ್ಕೆ ಬಂದು ಹೋದ ಜಾಕ್ ಮಾ; ಈ ಭೇಟಿಯ ಉದ್ದೇಶವೇನು?
ಜಾಕ್ ಮಾ
Follow us on

ಇಸ್ಲಾಮಾಬಾದ್: ಚೀನಾದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್‌ನ (Alibaba Group) ಸಹ-ಸಂಸ್ಥಾಪಕ ಜಾಕ್ ಮಾ  (Jack Ma) ಪಾಕಿಸ್ತಾನಕ್ಕೆ (Pakistan) ಅನಿರೀಕ್ಷಿತ ಭೇಟಿ ನೀಡಿದ್ದು ಅಚ್ಚರಿ ಉಂಟು ಮಾಡಿದೆ ಎಂದು ಪಾಕಿಸ್ತಾನ ಮೂಲದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಜಾಕ್ ಮಾ ಅವರು ಜೂನ್ 29 ರಂದು ಲಾಹೋರ್‌ಗೆ ಆಗಮಿಸಿದ್ದು 23 ಗಂಟೆಗಳ ಕಾಲ ಅಲ್ಲಿದ್ದರು ಎಂದು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ (BOI) ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್ ಹೇಳಿರುವುದಾಗಿ ಪತ್ರಿಕಾ ವರದಿಯಲ್ಲಿದೆ. ಜಾಕ್ ಮಾ ಭೇಟಿಯ ಸಮಯದಲ್ಲಿ, ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮಗಳೊಂದಿಗೆ ಯಾವುದೇ ಸಂವಾದ ನಡೆಸಿಲ್ಲ. ಅವರು ಖಾಸಗಿ ಸ್ಥಳದಲ್ಲಿ ವಾಸಿಸುತ್ತಿದ್ದರು.ನಂತರ ಜೆಟ್ ಏವಿಯೇಷನ್ ಮಾಲೀಕತ್ವದ VP-CMA ಹೆಸರಿನಲ್ಲಿ ನೋಂದಾಯಿಸಲಾದ ಖಾಸಗಿ ಜೆಟ್ ಮೂಲಕ ಜೂನ್ 30 ರಂದು ಹೊರಟರು.

ಮಾ ಅವರ ಭೇಟಿಯ ಉದ್ದೇಶವು ಈ ಹಂತದಲ್ಲಿ ಗೌಪ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂಬ ಭರವಸೆ ಇದೆ ಎಂದು ಅಹ್ಸಾನ್ ಹೇಳಿದ್ದಾರೆ.  ಐದು ಚೀನೀ ಪ್ರಜೆಗಳು, ಒಬ್ಬ ಡ್ಯಾನಿಶ್ ವ್ಯಕ್ತಿ ಮತ್ತು ಒಬ್ಬ ಯುಎಸ್ ಪ್ರಜೆಯನ್ನು ಒಳಗೊಂಡ ಏಳು ಉದ್ಯಮಿಗಳ ನಿಯೋಗದೊಂದಿಗೆ ಮಾ ಜೊತೆಗಿದ್ದರು. ಅವರು ಹಾಂಗ್ ಕಾಂಗ್‌ನ ವ್ಯಾಪಾರ ವಿಮಾನಯಾನ ವಲಯದಿಂದ ಚಾರ್ಟರ್ಡ್ ವಿಮಾನದ ಮೂಲಕ ನೇಪಾಳದಿಂದ ಪಾಕಿಸ್ತಾನಕ್ಕೆ ಬಂದಿದ್ದಾರೆ.

ಜಾಕ್  ಮಾ ಮತ್ತು ಅವರ ತಂಡವು ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವರು ವ್ಯಾಪಾರ ಕೇಂದ್ರಗಳಿಗೆ ಭೇಟಿ ನೀಡಿದ್ದು ವಿವಿಧ ವಾಣಿಜ್ಯ ಮಂಡಳಿಗಳ ಪ್ರಮುಖ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಯಾವುದೇ ನಿರ್ದಿಷ್ಟ ವ್ಯಾಪಾರ ವ್ಯವಹಾರಗಳು ಅಥವಾ ಸಭೆಗಳ ಬಗ್ಗೆ ಯಾವುದೇ ದೃಢೀಕೃತ ಮಾಹಿತಿ ಇಲ್ಲ.

ಮಾ ಅವರ ಭೇಟಿ ವೈಯಕ್ತಿಕ ಉದ್ದೇಶಗಳಿಗಾಗಿತ್ತು ಎಂದು ಅಹ್ಸಾನ್ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಚೀನಾದ ರಾಯಭಾರ ಕಚೇರಿಗೆ ಕೂಡಾ ಮಾ ಅವರ ಭೇಟಿ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ: ಇಮ್ರಾನ್ ಖಾನ್ ಪ್ರಧಾನಿಯಾಗಲು ಸಹಾಯ ಮಾಡಿ ತಪ್ಪು ಮಾಡಿದ್ದೇನೆಂದು ವಿಷಾದ ವ್ಯಕ್ತಪಡಿಸಿದ ಜಾವೇದ್ ಮಿಯಾಂದಾದ್

ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನೊಂದಿಗೆ ಮಾತನಾಡಿದ P@SHA ಅಧ್ಯಕ್ಷ ಜೊಹೈಬ್ ಖಾನ್, ಇದು ವೈಯಕ್ತಿಕ ಭೇಟಿಯಾಗಿದ್ದರೂ, ಪ್ರವಾಸೋದ್ಯಮ ದೃಷ್ಟಿಕೋನದಿಂದ ಪಾಕಿಸ್ತಾನದ ಖ್ಯಾತಿಯನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದಿದ್ದಾರೆ. ಅದೇ ವೇಳೆ ಪಾಕಿಸ್ತಾನದ ಅಧಿಕಾರಿಗಳು ಮಾ ಅವರೊಂದಿಗೆ ಸಭೆಯನ್ನು ಏರ್ಪಡಿಸಲು ಮತ್ತು ಐಟಿ ಜಗತ್ತಿನಲ್ಲಿ ಅವರ ಅನುಭವದ ಒಳನೋಟಗಳನ್ನು ಪಡೆಯಲು ಅವಕಾಶವನ್ನು ಬಳಸಬೇಕಿತ್ತು ಎಂದು ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Mon, 3 July 23