ಪಾಕಿಸ್ತಾನ(Pakistan)ದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಚೀನಾ(China)ದ ಇಂಜಿನಿಯರ್‌ಗಳ ಬೆಂಗಾವಲು ಪಡೆಯ ಮೇಲೆ ಸಶಸ್ತ್ರ ಬಂಡುಕೋರರು ಭಾನುವಾರ ದಾಳಿ ನಡೆಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಗ್ವಾದರ್‌ನ ಫಕೀರ್ ಸೇತುವೆಯ ಮೇಲೆ ಚೀನಾದ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ಇತರ ಭಯೋತ್ಪಾದಕರು ಗಾಯಗೊಂಡ ಸ್ಥಿತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು ಗುಂಡಿನ ಚಕಮಕಿ ಮುಂದುವರೆದಿದ್ದು, ಪ್ರದೇಶವನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಯುತ್ತಿದೆ. ಬಂದರು ನಗರವಾದ ಗ್ವಾದರ್‌ನಾದ್ಯಂತ ಸ್ಫೋಟಗಳು ಮತ್ತು ಗುಂಡಿನ ಸದ್ದು ಕೇಳಿಬರುತ್ತಿದೆ, ಅಲ್ಲಿ ಎಲ್ಲಾ ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ಗ್ವಾದರ್‌ನಲ್ಲಿ ಚೀನಾದ ಇಂಜಿನಿಯರ್‌ಗಳ ಮೇಲೆ ನಡೆದ ದಾಳಿಯನ್ನು ಸರ್ಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಅದು ಹೇಳಿದೆ. ಚೀನಾದ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲೆ ಬೆಳಿಗ್ಗೆ 9:30 ರ ಸುಮಾರಿಗೆ ದಾಳಿ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ತೀವ್ರ ಗುಂಡಿನ ಚಕಮಕಿ ನಡೆದಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬಲೂಚ್ ಲಿಬರೇಶನ್ ಆರ್ಮಿ – ಮಜೀದ್ ಬ್ರಿಗೇಡ್, ಇಂದಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಮುಂದಿನ ಆದೇಶದವರೆಗೆ ಬಲೂಚಿಸ್ತಾನ ಮತ್ತು ಸಿಂಧ್‌ನಲ್ಲಿರುವ ತನ್ನ ನಾಗರಿಕರು ತಮ್ಮ ನಿವಾಸಗಳಲ್ಲಿಯೇ ಇರುವಂತೆ ಪಾಕಿಸ್ತಾನದಲ್ಲಿರುವ ಚೀನಾದ ದೂತಾವಾಸಗಳು ಆದೇಶ ಹೊರಡಿಸಿವೆ ಎಂದು ವರದಿ ತಿಳಿಸಿದೆ.
ಮತ್ತಷ್ಟು ಓದಿ:ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?
ಕಳೆದ ವರ್ಷ ಮೇ ತಿಂಗಳಲ್ಲಿ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಚೀನಾ ನಿರ್ಮಿಸಿದ ಕನ್ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್‌ನಿಂದ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಮಿನಿಬಸ್‌ನ ಮೇಲೆ ಬುರ್ಖಾ ಧರಿಸಿದ್ದ ಬಲೂಚ್ ಮಹಿಳಾ ಆತ್ಮಾಹುತಿ ಬಾಂಬರ್ ದಾಳಿ ನಡೆಸಿ ಮೂವರು ಚೀನಾದ ಪ್ರಜೆಗಳು (ಶಿಕ್ಷಕರು) ಸೇರಿದಂತೆ ನಾಲ್ವರು ಮೃತಪಟ್ಟಿದ್ದರು.
ಜುಲೈ 2021 ರಲ್ಲಿ, ವಾಯುವ್ಯ ಪಾಕಿಸ್ತಾನದಲ್ಲಿ ಇಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಬಾಂಬ್ ಸ್ಫೋಟಿಸಲಾಯಿತು. ಚೀನಾದ ಒಂಬತ್ತು ಕಾರ್ಮಿಕರು ಸೇರಿದಂತೆ 13 ಜನರು ಸಾವನ್ನಪ್ಪಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Sun, 13 August 23