ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿಯ ನಂತರ ತೈವಾನ್-ಚೀನಾ ಸಂಬಂಧ ಹದಗೆಟ್ಟಿದ್ದು, ತೈವಾನ್ ದ್ವೀಪದ ಸಮೀಪದಲ್ಲಿಯೇ ಚೀನಾದ ಯುದ್ಧನೌಕೆಗಳು ಗಸ್ತುತಿರುಗುತ್ತಿವೆ. ಸಮರಾಭ್ಯಾಸದ ನೆಪದಲ್ಲಿ ವಾಯುಪಡೆ ಮತ್ತು ಭೂಸೇನೆಯನ್ನೂ ಚೀನಾ ತೈವಾನ್ ದ್ವೀಪದ ಸಮೀಪ ಕಾರ್ಯಾಚರಣೆಗೆ ನಿಯೋಜಿಸಿದೆ. ತೈವಾನ್ ರಕ್ಷಣೆಗೆ ಅಗತ್ಯ ನೆರವು ನೀಡಿರುವುದಾಗಿ ಘೋಷಿಸಿದರು ಅಮೆರಿಕದ ಸಹ ಯುದ್ಧನೌಕೆಗಳನ್ನು ತೈವಾನ್ ದ್ವೀಪದತ್ತ ಕಳುಹಿಸಿಕೊಟ್ಟಿದೆ. ತನ್ನ ಭದ್ರತಾ ವ್ಯವಸ್ಥೆಯನ್ನು ಗರಿಷ್ಠ ಮಟ್ಟದ ಕಟ್ಟೆಚ್ಚರದಲ್ಲಿ ಇರಿಸಿದೆ. ಚೀನಾ ಮತ್ತು ತೈವಾನ್ ಯುದ್ಧನೌಕೆಗಳು ಒಂದರ ನೆರಳು ಮತ್ತೊಂದರ ಮೇಲೆ ಬೀಳುವಷ್ಟು ಸನಿಹದಲ್ಲಿ ಸಂಚರಿಸುತ್ತಿದ್ದು, ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾನ್ಸಿ ಪೆಲೊಸಿ ಭೇಟಿಯ ನಂತರ ಸಮರಾಭ್ಯಾಸದ ನೆಪದಲ್ಲಿ ಅಪಾರ ಪ್ರಮಾಣದಲ್ಲಿ ಸೇನೆಯನ್ನು ತೈವಾನ್ ಸಮೀಪಕ್ಕೆ ನಿಯೋಜಿಸಿದ್ದ ಚೀನಾ ದ್ವೀಪ ರಾಷ್ಟ್ರವನ್ನು ಕೈವಶ ಮಾಡಿಕೊಳ್ಳುವ ನಡೆಸಿರುವ ಸಿದ್ಧತೆಯನ್ನು ಜಗತ್ತಿನ ಎದುರು ಪ್ರದರ್ಶಿಸಿದೆ. ಚೀನಾದ ಸಮರಾಭ್ಯಾಸವು ನಿನ್ನೆಗೆ (ಆಗಸ್ಟ್ 7) ಆಂತ್ಯಗೊಂಡಿದೆಯಾದರೂ ಸಶಸ್ತ್ರಪಡೆಗಳು ತೈವಾನ್ ಸಮೀಪದಲ್ಲಿಯೇ ಬೀಡುಬಿಟ್ಟಿರುವುದರಿಂದ ತೈವಾನ್ ಕೈವಶ ಮಾಡಿಕೊಳ್ಳಲು ಚೀನಾ ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆ ಆರಂಭಿಸಬಹುದು ಎಂಬ ಆತಂಕ ಮುಂದುವರಿದಿದೆ.
ನಾಲ್ಕು ದಿನಗಳ ಸಮರಾಭ್ಯಾಸದಲ್ಲಿ ಚೀನಾದ ಯುದ್ಧವಿಮಾನಗಳು ದ್ವೀಪದ ಮೇಲೆ ವ್ಯವಸ್ಥಿತ ದಾಳಿ ನಡೆಸುವ ಅಭ್ಯಾಸ ಮಾಡಿದವು. ಈ ವೇಳೆ ನೌಕಾಪಡೆ ಹಾಗೂ ಭೂಸೇನೆಯೊಂದಿಗೆ ವಾಯುಪಡೆಯ ಸಂಯೋಜಿತ ದಾಳಿಯ ಸಾಧ್ಯತೆಯನ್ನೂ ಚೀನಾ ಪರೀಕ್ಷಿಸಿತು. ಇದು ಕೇವಲ ಯುದ್ಧದ ತಾಲೀಮಷ್ಟೇ ಆಗಿರಲಿಲ್ಲ. ಯಾವುದೇ ಕ್ಷಣದಲ್ಲಿ ತೈವಾನ್ ಮೇಲೆ ಮುಗಿಬೀಳಲು ಚೀನಾ ನಡೆಸಿದ ಸಿದ್ಧತೆಯಾಗಿತ್ತು ಎಂದು ಚೀನಾ ಸರ್ಕಾರಿ ಸ್ವಾಮ್ಯದ ದೈನಿಕ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
ತೈವಾನ್ ದ್ವೀಪದ ಸುತ್ತಮುತ್ತ ಚೀನಾ ವಾಯುಪಡೆಯ 66 ಯುದ್ಧವಿಮಾನಗಳು ಮತ್ತು 14 ಯುದ್ಧನೌಕೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತೈವಾನ್ ರಕ್ಷಣಾ ಇಲಾಖೆ ಹೇಳಿದೆ. ಅಮೆರಿಕ ಸಹ ತೈವಾನ್-ಚೀನಾ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪಕ್ಕದ ಜಪಾನ್ನಲ್ಲಿರುವ ತನ್ನ ಸೈನಿಕರಿಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ.
ನ್ಯಾನ್ಸಿ ಪೊಲೆಸಿ ಭೇಟಿಯಿಂದ ಸಿಟ್ಟಿಗೆದ್ದಿರುವ ಚೀನಾ ಮುಂದೇನು ಮಾಡಬೇಕು ಎನ್ನುವ ಬಗ್ಗೆ ದೃಢ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ತೈವಾನ್ ಮೇಲೆ ಹಾದುಹೋಗುವಂತೆ ಕ್ಷಿಪಣಿಗಳನ್ನು ಹಾರಿಬಿಟ್ಟು ಹೆದರಿಸಿದೆ. ಚೀನಾದ ವಿಮಾನ ಮತ್ತು ಡ್ರೋಣ್ಗಳು ತೈವಾನ್ ವಾಯುಗಡಿಯಲ್ಲಿ ಹಾರಾಡಿವೆ. ತೈವಾನ್ ಸರ್ಕಾರದ ವೆಬ್ಸೈಟ್ಗಳ ಮೇಲೆ ಸೈಬರ್ ದಾಳಿ ನಡೆದಿದೆ. ಅಮೆರಿಕದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿರುವ ಚೀನಾ, ಈ ಹಿಂದಿನ ರಕ್ಷಣಾ ಮತ್ತು ಸೇನಾ ಒಪ್ಪಂದಗಳನ್ನು ಅಮಾನತಿನಲ್ಲಿ ಇರಿಸಿದೆ.
‘ತೈವಾನ್ ಚೀನಾಕ್ಕೆ ಸೇರಿದ್ದು, ಅಮೆರಿಕದ್ದಲ್ಲ’
ತೈವಾನ್ ಸಂಪೂರ್ಣವಾಗಿ ಚೀನಾಕ್ಕೆ ಸೇರಿದ್ದು. ಒಂದು ಸಾರ್ವಭೌಮ ದೇಶವಾಗಿ ನಮ್ಮ ದೇಶದ ರಕ್ಷಣೆಗೆ ಬೇಕಿರುವ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ಇದರಲ್ಲಿ ಅಮೆರಿಕದ ಪಾತ್ರ ಏನೂ ಇಲ್ಲ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಹೇಳಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿರುವ ಅವರು, ಅಮೆರಿಕದ ಹಸ್ತಕ್ಷೇಪವನ್ನು ಖಂಡಿಸಿದರು.