ಬೀಚಿಂಗ್: ಚೀನಾದ ಹಲವು ನಗರಗಳಲ್ಲಿ ಕೊವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಿದೆ. ಭಾನುವಾರ (ನ 27) ಒಂದೇ ದಿನ 40,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊವಿಡ್ ನಿಯಂತ್ರಣಕ್ಕಾಗಿ ಅಲ್ಲಿನ ಸರ್ಕಾರವು ಘೋಷಿಸುತ್ತಿರುವ ಲಾಕ್ಡೌನ್ ಆದೇಶಗಳು ಜನರನ್ನು ಸಿಟ್ಟಿಗೆಬ್ಬಿಸಿದೆ. ಈಗಾಗಲೇ ಸಾಕಷ್ಟು ಕಷ್ಟನಷ್ಟ ಅನುಭವಿಸಿರುವ ಜನರು ಇನ್ನೊಂದು ಸುತ್ತಿನ ಕ್ವಾರಂಟೈನ್, ಸಾಮೂಹಿಕ ತಪಾಸಣೆಗಳು ಹಾಗೂ ಸುದೀರ್ಘ ನಿರ್ಬಂಧ ಆದೇಶಗಳನ್ನು ಸಹಿಸುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶವು ಪ್ರತಿಭಟನೆಗಳಾಗಿ ಜನಾಕ್ರೋಶವು ಸ್ಫೋಟಗೊಳ್ಳುತ್ತಿರುವುದು ಅಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಚೀನಾದ ಷಿನ್ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಂಖಿ ನಗರದಲ್ಲಿ ಕಳೆದ ಗುರುವಾರ ಸಂಭವಿಸಿದ ಬೆಂಕಿ ಅನಾಹುತವು ಜನರಲ್ಲಿದ್ದ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿತು. ರಕ್ಷಣಾ ಕಾರ್ಯಾಚರಣೆಗೆ ಕೊವಿಡ್ ಲಾಕ್ಡೌನ್ ನಿರ್ಬಂಧಗಳಿಂದ ತೊಂದರೆಯಾಯಿತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ರಾತ್ರಿ ಬೀಜಿಂಗ್ ನಗರದ ನದಿ ದಂಡೆಯ ಮೇಲೆ ಸುಮಾರು 400 ಮಂದಿ ಸೇರಿ, ಹಲವು ಗಂಟೆಗಳವರೆಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಅವರು ‘ನಾವು ಷಿನ್ಜಿಯಾಂಗ್ ಜನರು, ಚೀನಾದ ಜನರೇ ದೂರ ಹೋಗಿ’ ಎಂದು ಕೂಗಿದ್ದರು. ಈ ವೇಳೆ ಅವರು ರಾಷ್ಟ್ರಗೀತೆ ಹಾಡಿದರಲ್ಲದೆ ಭಾಷಣಗಳನ್ನೂ ಕೇಳಿದರು. ನದಿಯ ಮತ್ತೊಂದು ದಂಡೆಯಲ್ಲಿ ಪೊಲೀಸ್ ವಾಹನಗಳು ಕಾದು ನಿಂತಿದ್ದವು.
ಲಾಕ್ಡೌನ್ ಹೆಸರಿನಲ್ಲಿ ಹಲವು ಅಪಾರ್ಟ್ಮೆಂಟ್ ಹಾಗೂ ಕಟ್ಟಡ ಸಮುಚ್ಚಯಗಳಿಗೂ ಬೀಗಮುದ್ರೆ ಹಾಕಲಾಗಿದೆ. ಈ ಕಟ್ಟಡಗಳ ಕಾಂಪೌಂಡ್ ಒಳಗೆ ಜನರು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಪಿಸಿ) ಮತ್ತು ಅಧ್ಯಕ್ಷ ಷಿ ಜಿನ್‌ಪಿಂಗ್ ವಿರುದ್ಧ ಘೋಷಣೆಗಳನ್ನು ಕೂಗುವುದು ಸಾಮಾನ್ಯ ಸಂಗತಿ ಎನಿಸಿದೆ. ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಹ ಪ್ರತಿಭಟನೆಗಳಲ್ಲಿ ಕೈಜೋಡಿಸಿದ್ದಾರೆ. ಇಂಥ ದೃಶ್ಯಗಳಿರುವ ವಿಡಿಯೊ ತುಣುಕುಗಳು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
上海乌鲁木齐路 民众高喊
共产党 下台!
这是迄今为止最为激进的口号。 pic.twitter.com/ijP7lxnIgH— 李老师不是你老师 (@whyyoutouzhele) November 26, 2022
ಶಾಂಘೈನಲ್ಲಿ ನಡೆದ ಲಾಕ್ಡೌನ್ ವಿರೋಧಿ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು. ಈ ವೇಳೆ ಜನರು ‘ಷಿ ಜಿನ್‌ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿ, ಕಮ್ಯುನಿಷ್ಟ ಪಕ್ಷವು ಅಧಿಕಾರ ತ್ಯಾಗ ಮಾಡಲಿ, ಜನರಿಗೆ ಸ್ವಾತಂತ್ರ್ಯ ಸಿಗಲಿ’ ಎಂದು ಘೋಷಣೆ ಕೂಗಿದರು. ಆರ್ಥಿಕ ಹಿಂಜರಿತದ ಭೀತಿಯಲ್ಲಿ ಸಿಲುಕಿರುವ ಚೀನಾದಲ್ಲಿ ಕೊವಿಡ್ ಲಾಕ್ಡೌನ್ ನಿಭಾಯಿಸುವುದು ಅಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
Published On - 7:34 am, Mon, 28 November 22