Nature Magazine Report: 2ನೇ ಅಲೆಯ ತೀವ್ರತೆ ಅಂದಾಜಿಸುವಲ್ಲಿ ಭಾರತ ಎಡವಿದ್ದೆಲ್ಲಿ? ಇಲ್ಲಿದೆ ವಿಜ್ಞಾನ ಲೋಕ ತೆರೆದಿಟ್ಟ ಸತ್ಯ

| Updated By: Digi Tech Desk

Updated on: Apr 26, 2021 | 8:27 PM

ಕೊವಿಡ್​ ಎರಡನೇ ಅಲೆಗೆ ರಾಜಕೀಯವೇ ಕಾರಣ ಎಂದು ಹೇಳುತ್ತಿರುವ ಮಧ್ಯೆ ನೇಚರ್​ ಎಂಬ ಪತ್ರಿಕೆ ಕೆಲವು ಮೂಲಭೂತ ಪ್ರಶ್ನೆ ಎತ್ತಿದೆ ಮತ್ತು ಈ ಚರ್ಚೆಗೆ ಹೊಸ ಬೆಳಕನ್ನು ಚೆಲ್ಲಿದೆ.

Nature Magazine Report: 2ನೇ ಅಲೆಯ ತೀವ್ರತೆ ಅಂದಾಜಿಸುವಲ್ಲಿ ಭಾರತ ಎಡವಿದ್ದೆಲ್ಲಿ? ಇಲ್ಲಿದೆ ವಿಜ್ಞಾನ ಲೋಕ ತೆರೆದಿಟ್ಟ ಸತ್ಯ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್​ ಎರಡನೇ ಅಲೆ ಬಂದಾಗಿನಿಂದ, ಸಾಮಾಜಿಕ ಜಾಲತಾಣ, ಪತ್ರಿಕೆಗಳ ಅಗ್ರ ಲೇಖಕರು ಪ್ರಧಾನಿ ನರೇಂದ್ರ ಮೋದಿಯೇ ಎರಡನೆ ಅಲೆ ಹರಡಲು ಕಾರಣ ಎಂದು ಪ್ರತಿ ದಿನವೂ ಪ್ರತಿಪಾದಿಸುತ್ತ ಬಂದಿದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್​ನ ಮಮತಾ ಬ್ಯಾನರ್ಜಿ ಎಲ್ಲರಿಗಿಂತ ಜಾಸ್ತಿ ಬುದ್ಧಿಮತ್ತೆ ಉಪಯೋಗಿಸಿ, ಮೋದಿಯೇ ಇವೆಲ್ಲಕ್ಕೂ ಹೇಗೆ ಕಾರಣ ಎಂಬುದನ್ನು ಜನರಿಗೆ ತಿಳಿಹೇಳಲು ಹೊಸ ಹೊಸ ತರ್ಕ ಹುಡುಕುತ್ತಿದ್ದುದನ್ನು ನಾವು ನೋಡುತ್ತ ಬಂದಿದ್ದೇವೆ. ಇಂಗ್ಲಿಷ್​ ಟಿವಿ ಚಾನೆಲ್​ನ ಚರ್ಚೆ, ಹಲವಾರು ಖ್ಯಾತನಾಮರ ಬರಹಗಳೂ ಅದನ್ನೇ ಪ್ರತಿಫಲಿಸಿದಾಗ ಎಲ್ಲರಿಗೂ ಹಾಗೆ ಅನ್ನಿಸಿದ್ದರೆ ತಪ್ಪಿಲ್ಲ. ಆದರೆ, ಖ್ಯಾತ ವಿಜ್ಞಾನ ಪತ್ರಿಕೆ, ನೇಚರ್​ ಒಂದು ದೀರ್ಘ ವಿಶ್ಲೇಷಣಾತ್ಮಕ ಬರಹದಲ್ಲಿ ಒಂದು ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ. ಅದೇನೆಂದರೆ, ಚುನಾವಣೆ ಮತ್ತು ಕುಂಭಮೇಳದಿಂದ ಈ ಎರಡನೇ ಅಲೆ ಹರಡಿದೆ ಎಂಬ ರಾಜಕೀಯ ಪ್ರೇರಿತ ಅಭಿಪ್ರಾಯವನ್ನೂ ಮೀರಿ ವೈಜ್ಞಾನಿಕ ಸಮುದಾಯವೇ ಈ ಕೊವಿಡ್​ನ್ನು ಅರಿತುಕೊಳ್ಳಲು ಎಲ್ಲಿ ಮತ್ತು ಹೇಗೆ ಎಡವಿತ್ತು ಎಂಬ ಹೊಸ ವಿಚಾರವನ್ನು ಹೊರಹಾಕಿದೆ.

ಲೇಖನದ ವೈಶಿಷ್ಟ್ಯವೇನು?
ಈ ಲೇಖನದಲ್ಲಿ ಯಾವ ರಾಜಕೀಯ ನಾಯಕರ ಮಾತನ್ನು ಹಾಕಿಲ್ಲ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಇದು ಒಂದು ಸಂಶೋಧನಾತ್ಮಕ ಮತ್ತು ವೈಜ್ಞಾನಿಕ ಬರವಣಿಗೆ. ಜನರನ್ನು ಉನ್ಮತ್ತಗೊಳಿಸುವ ಅಥವಾ ಅಭಿಪ್ರಾಯವನ್ನು ಹೇರುವ (opinionated) ಲೇಖನ ಇದಲ್ಲ. ಹಾಗಾಗಿ ಇಲ್ಲಿ ಮಸಾಲೆ ಇಲ್ಲ. ಇಲ್ಲಿ ಮಾತನಾಡಿರುವ ಎಲ್ಲರೂ ವೈಜ್ಞಾನಿಕ ಕ್ಷೇತ್ರ ಅದರಲ್ಲಿಯೂ ವೈದ್ಯಕೀಯ ಮತ್ತು ಜೀವಶಾಸ್ತ್ರದ ಬೇರೆ ಬೇರೆ ಶಾಖೆಯಲ್ಲಿ ತುಂಬಾ ವರ್ಷ ಕೆಲಸ ಮಾಡಿದ್ದಾರೆ. ಹಾಗಾಗಿ, ಇದನ್ನು ಬಲಪಂಥೀಯರ ಅಥವಾ ಎಡದವರ ಎಡವಟ್ಟು ಎಂದು ಮೂಗು ಮುರಿಯುವ ಹಾಗಿಲ್ಲ.

ಲೇಖನದಲ್ಲಿ ಏನೇನು ಹೇಳಿದ್ದಾರೆ?

  1. ಕಳೆದ ವರ್ಷ ಬಂದ ಮೊದಲ ಅಲೆಯ ನಂತರ ಆಯ್ದ ಜನರ ರೋಗ ನಿರೋಧಕ ಶಕ್ತಿಯ ಅಧ್ಯಯನ ನಡೆಸಲಾಗಿತ್ತು. ನವೆಂಬರ್​ ಮತ್ತು ಡಿಸೆಂಬರ್​ ಹೊತ್ತಿಗೆ, 50 ಪ್ರತಿಶತ ಜನರಲ್ಲಿ ಕೊವಿಡ್​ ರೋಗ ನಿರೋಧಕ ಶಕ್ತಿ ಬಂದ ಕಾರಣ ವೈಜ್ಞಾನಿಕ ಸಂಶೋಧಕರ ತಂಡಗಳ ಮಾತಿನಂತೆ ಭಾರತದಲ್ಲಿ ಗುಂಪು ರೋಗ ನಿರೋಧಕ ಶಕ್ತಿ (herd immunity) ಬಂದಿದೆ ಎಂದು ವಿಜ್ಞಾನಿಗಳು ನಂಬಿದ್ದರು. ಹಾಗಾದರೆ ಈಗ ಎರಡನೇ ಅಲೆಯಲ್ಲಿ ಇಷ್ಟು ಅಧ್ವಾನ ಯಾಕಾಯ್ತು? ಈಗ ಅದೇ ಸಂಶೋಧಕರು ಹೇಳುತ್ತಿರುವುದೇನೆಂದರೆ, ಸಂಶೋಧನೆಗೆ ಆಯ್ದುಕೊಂಡ ಜನರ ಗುಂಪು (sample) ತುಂಬಾ ಚಿಕ್ಕದಾಗಿತ್ತು. ಹಾಗಾಗಿ ಎರಡನೇ ಅಲೆಯ ನಿರೀಕ್ಷೆಯಲ್ಲಿ ತಪ್ಪೆಸಗಿದವು ಎಂದು ಅವರೆಲ್ಲಾ ಹೇಳಿದ್ದಾರೆ.
  2. ಮೊದಲ ಅಲೆ ಬಂದಾಗ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಜನ ಬಚಾವಾಗಿದ್ದರು. ಈ ಬಾರಿ ಅವರಲ್ಲಿ ಕಾಣಿಸಿಕೊಂಡ ಮೇಲೆ ಸಂಶೋಧಕರಿಗೆ ಗೊತ್ತಾಗಿದ್ದೇನೆಂದರೆ ಆ ವರ್ಗದ ಜನರನ್ನು ಅಧ್ಯಯನ ಮಾಡಿಲ್ಲ
  3. ಹಿಂದಿನ ಸಲ, ಮನೆಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಾಗ ಉಳಿದವರಿಗೆ ಬರದೇ ಇದ್ದ ಹಲವಾರು ಉದಾಹರಣೆಗಳು ಸಿಗುತ್ತಿತ್ತು. ಈ ಬಾರಿ ಹಾಗಿಲ್ಲ. ಮನೆಯಲ್ಲಿ ಒಬ್ಬರಿಗೆ ಬಂದರೆ ಎಲ್ಲರಿಗೂ ಕೊವಿಡ್​ ಬರುವುದು ಪಕ್ಕಾ ಆಗಿದೆ. ಆದ್ದರಿಂದ ಈ ಬಾರಿ, ಕೊವಿಡ್​ ವೈರಸ್​ ಜಾಸ್ತಿ ವೇಗದಲ್ಲಿ ಹರಡುತ್ತಿದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಸೋಲಿಸಿ ಕೊರೊನಾ ಶರೀರವನ್ನು ಪ್ರವೇಶಿಸುತ್ತದೆ.
  4. ಜನವರಿಯಲ್ಲಿ ಲಸಿಕೆ ಬಂದಾಗ ಕೇಸುಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಲಸಿಕೆ ಬಂದಿದೆ ಎಂಬ ಹುಮ್ಮಸ್ಸಿನಲ್ಲಿ ಜನ ಅತಿಯಾದ ಆತ್ಮವಿಶ್ವಾಸದಿಂದ ಎಲ್ಲ ಕಡೆ ಓಡಾಡಲು ಪ್ರಾರಂಭಿಸಿದರು. ಇದು ತೀವ್ರ ಹಿನ್ನಡೆಗೆ ಕಾರಣವಾಯ್ತು.
  5. ಎರಡು ಮೂರು ಬಾರಿ ರೂಪಾಂತರ (mutation) ಆಗುವ ವೈರಸ್​ ಮುಂದೆ ಹೇಗೆ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ.

ನೇಚರ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಮೂಲ ಲೇಖನವನ್ನು ಕೆಳಗಿನ ಲಿಂಕ್ ಬಳಸಿ ಓದಬಹುದು.

&

ಇನ್ನು ಕೆಲವು ವಿಚಾರಗಳನ್ನು ಲೇಖಕರು ಬಿಟ್ಟಿದ್ದಾರಾ ಎಂಬ ಸಂಶಯವಿದೆ. ಉದಾಹರಣೆಗೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿದ ನಂತರ ಕೂಡ ಹಲವಾರು ಜನರಿಗೆ ಸೋಂಕು ಇರುವುದು ಮತ್ತು ಅವರ ಪುಪ್ಪುಸಕ್ಕೆ ಲಗ್ಗೆಯಿಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾಗಿ, ಇದು ನಿಜವೇ? ಅಥವಾ ಇದು ತಪ್ಪು ಗ್ರಹಿಕೆಯೇ? ಎಂಬ ಕುರಿತಾಗಿ ಚರ್ಚೆ ಆಗಬೇಕು. ಏಕೆಂದರೆ, ಆರ್​ಟಿಪಿಸಿಆರ್​ ನೆಗೆಟಿವ್​ ಬಂದ ನಂತರವೂ ಜನರಿಗೆ ಗೊತ್ತಿಲ್ಲದೇ ಜನರ ಪುಪ್ಪುಸಕ್ಕೆ ಈ ವೈರಸ್​ ಲಗ್ಗೆ ಇಡುವುದಾದರೆ, ಜನ ಇನ್ನು ಯಾವ ರೀತಿಯ ಪರೀಕ್ಷೆ ಮಾಡಿಸಬೇಕು? ಸಿಟಿ ಸ್ಕ್ಯಾನ್​ನಂತಹ ಪರೀಕ್ಷಗೆ ತುಂಬಾ ಖರ್ಚಾಗುವುದರಿಂದ ಇದನ್ನು ಎಲ್ಲರೂ ಮಾಡಿಸಲಾಗದು. ಇದಕ್ಕೆ ದಾರಿ ಏನು ಎಂಬುದು ಚರ್ಚೆ ಆಗಿಲ್ಲ.

ಇದನ್ನೂ ಓದಿ: ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್​ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ

ಇದನ್ನೂ ಓದಿ: #KarnatakaLockdown: ‘ಉಪಚುನಾವಣೆ ಮುಗೀತಾ ಮುಖ್ಯಮಂತ್ರಿಗಳೇ’: ಲಾಕ್​ಡೌನ್ ಘೋಷಣೆಯ ಬೆನ್ನಲ್ಲೇ ಟ್ವಿಟರ್​ನಲ್ಲಿ ಮೀಮ್​ಗಳ ಸುರಿಮಳೆ

(Covid second wave puzzles scientists says Nature magazine demystifying the political failure behind second wave)

Published On - 8:20 pm, Mon, 26 April 21