
ನವದೆಹಲಿ: ಓಮನ್ ಕಡೆ ತೆರಳಿರುವ ಶಾಹೀನ್ ಚಂಡಮಾರುತದ ಅಬ್ಬರಕ್ಕೆ ಈಗಾಗಲೇ 3ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಚಂಡಮಾರುತದ ಪ್ರಯುಕ್ತ ಓಮನ್ನಲ್ಲಿ ಭಾರೀ ಮಳೆಯಾಗುತ್ತಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿ ಬೀಸಲಾರಂಭಿಸಿದೆ. ಇದರಿಂದ ಮಸ್ಕತ್ನಿಂದ ತೆರಳುತ್ತಿದ್ದ ವಿಮಾನಗಳ ಸಂಚಾರ ಸ್ಥಗಿತವಾಗಿದೆ. ಇರಾನ್ನಲ್ಲೂ ಶಾಹೀನ್ ಚಂಡಮಾರುತದ ಅಬ್ಬರ ಜೋರಾಗಿದ್ದು, 6ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಓಮನ್ನಲ್ಲಿ ಮಳೆ ಸುರಿದು, ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮಗುವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಓಮನ್ನಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ಶವಗಳನ್ನು ಹೊರಗೆ ತೆಗೆದಿದ್ದಾರೆ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ವಿಮಾನ ಸಂಚಾರ ವ್ಯತ್ಯಯವಾಗಿದೆ.
ಮಸ್ಕತ್ನಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿ, ಮನೆಯೊಳಗೆ ನೀರು ನುಗ್ಗಿದೆ. ಶಾಹೀನ್ ಚಂಡಮಾರುತದಿಂದ ಉಂಟಾಗುತ್ತಿರುವ ಅಪಾಯವನ್ನು ತಗ್ಗಿಸಲು ಹಲವೆಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇನ್ನೂ ಚಂಡಮಾರುತದ ಅಬ್ಬರ ಹೆಚ್ಚುತ್ತಲೇ ಇದ್ದು, ಸ್ಥಳೀಯ ಸರ್ಕಾರಗಳು ಅಪಾಯವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ವಹಿಸಿವೆ. ಓಮನ್ನಲ್ಲಿ ಮಳೆ ಹೆಚ್ಚಾಗಿರುವುದರಿಂದ 2 ದಿನಗಳ ರಾಷ್ಟ್ರೀಯ ರಜೆಯನ್ನು ಘೋಷಿಸಲಾಗಿದೆ.
ಇರಾನ್ನ ಚಬಾಹರ್ ಬಂದರಿನಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇರಾನ್ನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದು ಅಪಾರ ಹಾನಿಯಾಗಿದೆ. ಇರಾನ್ನ ಕರಾವಳಿ ತೀರದಲ್ಲಿ 220 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಯುಎಇಯಲ್ಲಿ ಕೂಡ ಶಾಹೀನ್ ಚಂಡಮಾರುತದ ಆತಂಕ ಹೆಚ್ಚಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Karnataka Weather Today: ಬೆಂಗಳೂರಿನಲ್ಲಿ ಇಂದೂ ಮಳೆ ಸಾಧ್ಯತೆ; ಕರ್ನಾಟಕದಲ್ಲಿ ನಾಳೆಯಿಂದ ಆರೆಂಜ್ ಅಲರ್ಟ್ ಘೋಷಣೆ
Cyclone Shaheen: ಇಂದು ಗುಜರಾತ್ ಪ್ರವೇಶಿಸಲಿದೆ ಶಾಹೀನ್ ಚಂಡಮಾರುತ; ಪಾಕಿಸ್ತಾನದಲ್ಲಿ ಹೆಚ್ಚಲಿದೆ ಸೈಕ್ಲೋನ್ ಅಬ್ಬರ
Published On - 9:58 am, Mon, 4 October 21