ಕಾಂಗೋ ಗಣರಾಜ್ಯದ ಬೇನಿ ನಗರದ ಬಾರ್​​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ; ಐವರು ಸಾವು, ಹಲವರಿಗೆ ಗಂಭೀರ ಗಾಯ

| Updated By: Lakshmi Hegde

Updated on: Dec 26, 2021 | 10:07 AM

ಬಾರ್​ ಬಳಿ ಇದ್ದ ಭದ್ರತಾ ಸಿಬ್ಬಂದಿ ಆತ್ಮಾಹುತಿ ಬಾಂಬರ್​ನನ್ನು ತಡೆಯಲು ಪ್ರಯತ್ನಿಸಿದರು.  ಬಾರ್ ಆ್ಯಂಡ್ ರೆಸ್ಟೋರೆಂಟ್​ನಲ್ಲಿ ಈ ವೇಳೆ ಅನೇಕ ಗ್ರಾಹಕರಿದ್ದರು.

ಕಾಂಗೋ ಗಣರಾಜ್ಯದ ಬೇನಿ ನಗರದ ಬಾರ್​​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ; ಐವರು ಸಾವು, ಹಲವರಿಗೆ ಗಂಭೀರ ಗಾಯ
ದಾಳಿ ನಡೆದ ಸ್ಥಳ
Follow us on

ಕಾಂಗೋ ಪ್ರಜಾಸತ್ತಾತ್ಮಕ ರಾಜ್ಯದ ಪೂರ್ವ ಭಾಗದ ನಗರ ಬೇನಿ(Beni City)ಯಲ್ಲಿ ಆತ್ಮಾಹುತಿ ಬಾಂಬ್​ ದಾಳಿ(Suicide Bomb Attack)ಯಾಗಿದ್ದು, ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಬೇನಿಯ ಬಾರ್​ ಆ್ಯಂಡ್​ ರೆಸ್ಟೋರೆಂಟ್​ವೊಂದರಲ್ಲಿ ನಡೆದ ದಾಳಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.   ಈ ಪ್ರದೇಶದಲ್ಲಿರುವ ಅತ್ಯಂತ ಕ್ರೂರ ಸೇನಾಪಡೆಯಾದ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ADF) ಸಂಘಟನೆಯೇ ಈ ದಾಳಿ ನಡೆಸಿದ್ದಾಗಿ ಕಾಂಗೋ ರಿಪಬ್ಲಿಕ್​​ನ ಆಡಳಿತ ದೂಷಿಸಿದೆ. ಅಂದಹಾಗೆ, ಈ ಎಡಿಎಫ್​ ಸಂಘಟನೆಯನ್ನು ಇಸ್ಲಾಮಿಕ್​ ಸ್ಟೇಟ್​ ಉಗ್ರಸಂಘಟನೆ ತನ್ನ ಕೇಂದ್ರ ಆಫ್ರಿಕಾದ ಬಲ ಎಂದೇ ಹೇಳಿಕೊಳ್ಳುತ್ತದೆ.  

ಬಾರ್​ ಬಳಿ ಇದ್ದ ಭದ್ರತಾ ಸಿಬ್ಬಂದಿ ಆತ್ಮಾಹುತಿ ಬಾಂಬರ್​ನನ್ನು ತಡೆಯಲು ಪ್ರಯತ್ನಿಸಿದರು.  ಬಾರ್ ಆ್ಯಂಡ್ ರೆಸ್ಟೋರೆಂಟ್​ನಲ್ಲಿ ಈ ವೇಳೆ ಅನೇಕ ಗ್ರಾಹಕರಿದ್ದರು. ಆದರೆ ಪ್ರವೇಶದ್ವಾರದಲ್ಲಿ ತಡೆಯಲ್ಪಟ್ಟ ಬಾಂಬರ್ ಅಲ್ಲಿಯೇ ಬಾಂಬ್​​ನ್ನು ಸ್ಫೋಟಿಸಿದ್ದಾನೆ ಎಂದು ಉತ್ತರ ಕಿವು ಪ್ರಾಂತ್ಯದಲ್ಲಿರುವ ಮಿಲಿಟರಿ ಅಧಿಕಾರಿಗಳು ಹೇಳಿದ್ದಾಗಿ ವರದಿಯಾಗಿದೆ.  14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದಾಳಿ ನಡೆದ ಬಾರ್​ನ ಕುರ್ಚಿಗಳು, ಟೇಬಲ್​ಗಳೆಲ್ಲ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿವೆ. ಸ್ಥಳದಲ್ಲೇ ಸತ್ತವರ ದೇಹಗಳು ಅಲ್ಲೇ ಬಿದ್ದಿದ್ದವು ಎಂದೂ ಸ್ಥಳೀಯ ಮಾಧ್ಯಮಗಳ ವರದಿಗಾರರು ವರದಿ ಮಾಡಿದ್ದಾರೆ. ಸ್ಫೋಟವಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಅಲ್ಲೆಲ್ಲ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬೇನಿ ನಗರದಲ್ಲಿ ಪದೇಪದೆ ಬಾಂಬ್​ ದಾಳಿಯಾಗುತ್ತಿದೆ. ಜೂನ್​ 27ರಂದು ಕ್ಯಾಥೋಲಿಕ್​ ಚರ್ಚ್​​ನಲ್ಲಿ ಸುಧಾರಿತ ಬಾಂಬ್​ವೊಂದು ಸ್ಫೋಟಗೊಂಡು ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ಅದೇ ದಿನ ಬಾಂಬ್​ವೊಂದನ್ನು ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟಿದ್ದ.  ಅದರ ಮುನ್ನಾದಿನ ಸರ್ವೀಸ್​ ಸ್ಟೇಶನ್​​ ಬಳಿ ಸ್ಫೋಟಕವೊಂದು ಸ್ಫೋಟಗೊಂಡಿತ್ತು. ಆದರೆ ಯಾವುದೇ ಹಾನಿಯಾಗಿರಲಿಲ್ಲ. ಉಗಾಂಡಾದ ಗಡಿ ಭಾಗದಲ್ಲಿ ಇರುವ ಕಿವು ಪ್ರಾಂತ್ಯದ ಬೇನಿ ನಗರದಲ್ಲಿ ಸ್ಥಳೀಯ ಸೇನಾ ಪಡೆ ಮತ್ತು ಎಡಿಎಫ್​​ ಪಡೆಗಳ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ.  ಇದೂ ಕೂಡ ಎಡಿಎಫ್​​ದೇ ಕೆಲಸ ಎಂದು ಹೇಳಲಾಗಿದ್ದರೂ, ಆ ಸಂಘಟನೆಯೇನೂ ಸದ್ಯ ಯಾವುದೇ ಹೊಣೆ ಹೊತ್ತುಕೊಂಡಿಲ್ಲ.

ಇದನ್ನೂ ಓದಿ: ಜಗತ್ತು ನೈಸರ್ಗಿಕ ವಿಕೋಪ, ಹೊಸ ಮಾರಕ ವೈರಸ್​ಗೆ ತುತ್ತಾಗಲಿದೆ: 2022ರ ಬಗ್ಗೆ ಬಾಬಾ ವಂಗಾ ಭವಿಷ್ಯ

Published On - 9:53 am, Sun, 26 December 21